Select Your Language

Notifications

webdunia
webdunia
webdunia
webdunia

ಐಸಿಸ್ ಕೆ ದಾಳಿಗೆ ದೇಹಗಳು ಛಿದ್ರ, ಛಿದ್ರ.ಎಲ್ಲೇ ಅಡಗಿದ್ದರೂ ಉಗ್ರರನ್ನು ಬಿಡಲ್ಲ: ಬೈಡೆನ್

ಐಸಿಸ್ ಕೆ ದಾಳಿಗೆ ದೇಹಗಳು ಛಿದ್ರ, ಛಿದ್ರ.ಎಲ್ಲೇ ಅಡಗಿದ್ದರೂ ಉಗ್ರರನ್ನು ಬಿಡಲ್ಲ: ಬೈಡೆನ್
ವಾಷಿಂಗ್ಟನ್ , ಶುಕ್ರವಾರ, 27 ಆಗಸ್ಟ್ 2021 (11:25 IST)
ಕಾಬೂಲ್/ವಾಷಿಂಗ್ಟನ್: ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿಂತಿದ್ದ ಸಾವಿರಾರು ಜನರು ಮತ್ತು ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ಐಸಿಸ್ ಖೊರಾಸಾಸ್ ಉಗ್ರರು ನಡೆಸಿದ್ದ ಎರಡು ಭೀಕರ ಆತ್ಮಾಹುತಿ ದಾಳಿಯಲ್ಲಿ ಅಮೆರಿಕ ಸೈನಿಕರು, ನಾಗರಿಕರು ಸೇರಿದಂತೆ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

"ನಮ್ಮ ವಿರುದ್ಧ ದಾಳಿ ಮಾಡಿ ಹತ್ಯೆಗೈದವರನ್ನು ಕ್ಷಮಿಸುವ ಹಾಗೂ ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ. ನೀವು (ತಾಲಿಬಾನ್, ಐಸಿಸ್ ಉಗ್ರರು) ಎಲ್ಲೇ ಅಡಗಿದ್ದರೂ ಹುಟ್ಟಡಗಿಸದೇ ಬಿಡಲ್ಲ ಎಂದು " ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶಪಥಗೈದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಐಸಿಸ್ ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಮೆರಿಕದ 13 ಸೈನಿಕರು ಹಾಗೂ 70 ಮಂದಿ ನಾಗರಿಕರು ಸಾವನ್ನಪ್ಪಿದ್ದು, ಮಕ್ಕಳು, ಮಹಿಳೆಯರ ದೇಹಗಳೆಲ್ಲಾ ಛಿದ್ರ, ಛಿದ್ರವಾಗಿ ಹೋಗಿರುವ ಭೀಕರ ಘಟನೆ ಗುರುವಾರ ಸಂಜೆ ನಡೆದಿತ್ತು.
ಈ ಭೀಕರ ದಾಳಿಯ ನಂತರ ಮಾತನಾಡಿದ ಬೈಡೆನ್, ಐಸಿಸ್ ಖೊರಾಸಸ್ ಉಗ್ರಗಾಮಿ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿರುವ ಬೈಡೆನ್, ಆಗಸ್ಟ್ 31ರೊಳಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಸಂಪೂರ್ಣವಾಗಿ ಅಮೆರಿಕ ಸೇನೆಯನ್ನು ಹಿಂಪಡೆಯಬೇಕು ಎಂದು ತಾಲಿಬಾನ್ ನೀಡಿರುವ ಅಂತಿಮ ಗಡುವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ವಿವರಿಸಿದೆ.
ಕಾಬೂಲ್ ನಲ್ಲಿ ಇನ್ನೂ ಒಂದು ಸಾವಿರಕ್ಕೂ ಅಧಿಕ ಅಮೆರಿಕನ್ ಪ್ರಜೆಗಳು ಇದ್ದು, ಅವರನ್ನು ಸ್ಥಳಾಂತರ ಮಾಡಬೇಕಾಗಿದೆ. ನಮ್ಮ ಸೈನಿಕರ ಮೇಲೆ ದಾಳಿ ಮಾಡಿರುವ ಐಸಿಸ್ ಖೊರಾಸಸ್ ಮೇಲೆ ದಾಳಿ ನಡೆಸಿ ಅವರ ನೆಲೆಗಳನ್ನು ಧ್ವಂಸಗೊಳಿಸುವಂತೆ ಅಮೆರಿಕ ಕಮಾಂಡರ್ ಗಳಿಗೆ ಸೂಚನೆ ನೀಡಿರುವುದಾಗಿ ಬೈಡೆನ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋಣ್ ಹಾರಾಟ ಮತ್ತಷ್ಟು ಸರಳ; ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ