ಜಪಾನ್ ದೇಶದ ಕನ್ವೀನಿಯನ್ಸ್ ಸ್ಟೋರ್‌ಗಳ 1400 ಸ್ವಯಂಚಾಲಿತ ಟೆಲ್ಲರ್ ಯಂತ್ರಗಳಿಂದ ನಕಲಿ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಅಕ್ರಮವಾಗಿ 13 ದಶಲಕ್ಷ ಡಾಲರ್ ಅಥವಾ 1.44 ಶತಕೋಟಿ ಯೆನ್ ಹಣವನ್ನು ದೋಚಿದ ಘಟನೆಗೆ ಸಂಬಂಧಿಸಿದಂತೆ ಜಪಾನೀಸ್ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.
ಮೇ 15ರಂದು ಸುಮಾರು ಎರಡೂವರೆ ಗಂಟೆಯ ಅವಧಿಯಲ್ಲಿ ಎಟಿಎಂಗಳಿಂದ 100ಕ್ಕೂ ಹೆಚ್ಚು ಜನರ ಗುಂಪು ಈ ಹಣವನ್ನು ದೋಚಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್ ಇದರಲ್ಲಿ ಒಳಗೊಂಡಿದೆಯೆಂದು ಪೊಲೀಸರು ಶಂಕಿಸಿದ್ದಾರೆ.
ಮೂಲಗಳ ಪ್ರಕಾರ, ಹಣ ವಿತ್ ಡ್ರಾ ಮಾಡಿದ ಎಟಿಎಂಗಳು ಟೋಕಿಯೊ, ಕನಾಗಾವಾ, ಐಚಿ, ಒಸಾಕಾ, ಫುಕುವೋಕಾ ಮತ್ತಿತರ ಸ್ಥಳಗಳಲ್ಲಿವೆ. ಮೇ 15ರಂದು ಭಾನುವಾರ ಸಂಜೆ 5 ಗಂಟೆಯ ನಂತರ ರಾತ್ರಿ 8 ಗಂಟೆಯೊಳಗೆ ಎಲ್ಲಾ ಹಣವನ್ನು ಎಟಿಎಂನಿಂದ ಅಕ್ರಮವಾಗಿ ತೆಗೆಯಲಾಗಿತ್ತು.
ಪ್ರತಿಯೊಂದು ವಹಿವಾಟಿನಲ್ಲಿ 100,000 ಯೆನ್ ಅಥವಾ 900 ಡಾಲರ್ ಹಿಂಪಡೆಯಲಾಗಿದೆ. ಇದು ಎಟಿಎಂಗಳಿಗೆ ಗರಿಷ್ಠ ಹಿಂಪಡೆಯುವ ಮೊತ್ತವಾಗಿದೆ. ಒಟ್ಟು 14,000 ವಹಿವಾಟುಗಳನ್ನು ನಿರ್ವಹಿಸಲಾಗಿತ್ತು.
ಹ್ಯಾಕಿಂಗ್ ಮುಂತಾದ ವಿಧಾನಗಳಿಂದ ಕಾರ್ಡ್ ಡಾಟಾ ಆಧರಿಸಿ ನಕಲಿ ಕಾರ್ಡ್ ತಯಾರಿಸಿದ ಶಂಕಿತರು ಈ ದುಷ್ಕೃತ್ಯವೆಸಗಿದ್ದಾರೆಂದು ಹೇಳಲಾಗುತ್ತಿದೆ. ದಕ್ಷಿಣ ಆಫ್ರಿಕಾ ಬ್ಯಾಂಕ್ ನೀಡಿದ 1600 ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಅಂಕಿಅಂಶವನ್ನು ಬಳಸಿರುವುದು ಪತ್ತೆಯಾಗಿದೆ.
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ