Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯಕ್ಕೆ ವಜ್ರವರ್ಷ - ಪ್ರಜೆಗಳಿಗಿಲ್ಲ ವಜ್ರಕವಚ

ಸ್ವಾತಂತ್ರ್ಯಕ್ಕೆ ವಜ್ರವರ್ಷ - ಪ್ರಜೆಗಳಿಗಿಲ್ಲ ವಜ್ರಕವಚ

ಗುರುಚರಣ್ ದಾಸ್

ND
ಸ್ವಾತಂತ್ರ್ಯಕ್ಕಾಗಿ ಕನವರಿಸುತ್ತಿದ್ದ ಭಾರತೀಯರಿಗೆ ಅದು ಲಭಿಸಿ ಅರುವತ್ತು ವರ್ಷ ಸಂದ ಸಂದರ್ಭವಿದು. ಅರುವತ್ತನೇ ವರ್ಷಾಚರಣೆಯನ್ನು ಷಷ್ಠ್ಯಬ್ದ, ವಜ್ರಮಹೋತ್ಸವ ಎಂದೂ ಹೇಳುತ್ತಾರೆ.

ವಜ್ರ ಚಿನ್ನಕ್ಕಿಂತ ಬೆಲೆಬಾಳುವಂತಹುದು. ಕಾಠಿಣ್ಯಕ್ಕೆ ಹೆಸರಾದುದು. ಶತ್ರುಗಳಿಂದ ರಕ್ಷಣೆಗಾಗಿ ಯೋಧರು ವಜ್ರಕವಚ ತೊಡುತ್ತಿದ್ದ ಸಮರಕಾಲವೊಂದಿತ್ತು. ಸ್ವಾತಂತ್ರ್ಯ ಎನ್ನುವುದು ಸದಾ ಪಹರೆ ಕಾದು ದಾಸ್ತಾನಿರಿಸಬೇಕಾಗಿರುವ ವಿಷಯ. ಅದು ಪರಾಧೀನವಾಗುವ ಸಾಧ್ಯತೆಗಳೇ ಅಧಿಕ. ಇಂತಹ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯಕ್ಕಾಗಿ ವಜ್ರ ಕವಚ ತೊಡಿಸುವ ಅನಿವಾರ್ಯತೆಯನ್ನು ಗಮನಿಸಬೇಕಿದೆ.

ಜಾಗತಿಕ ಸಮಸ್ಯೆಯಾಗಿರುವ ಛಾಯಾಸಮರದ ಇನ್ನೊಂದು ಮುಖವಾದ ಉಗ್ರವಾದ, ಭಯೋತ್ಪಾದನೆ ನಮ್ಮ ದೇಶದಲ್ಲೂ ಮನೆಮಾಡಿದೆ. ಅಲ್‌ಖೈದಾ, ಉಲ್ಫಾ, ನಕ್ಸಲಿಸಂ, ಜೆಕೆಎಲ್‌ಎಫ್ ಮುಂತಾದ ಹತ್ತುಹಲವು ಹೆಸರಲ್ಲಿ ನಡೆಸುವ ಸಾಯುಧ ಸಮರದ ಹಿನ್ನೆಲೆಯಲ್ಲಿ ಅರುವತ್ತು ವರ್ಷಗಳ ಕಾಲ ನಂದಾದೀಪದಂತೆ ಕಾಪಿರಿಸಿದ ಸ್ವಾತಂತ್ರ್ಯದ ರಕ್ಷಣೆಗೆ ಪ್ರಜೆಗಳು ಮನಸ್ಥೈರ್ಯದ ವಜ್ರಕವಚ ತೊಡಲು ಇದು ಸಕಾಲ.

ಅರುವತ್ತರ ಹರೆಯ ಎಂಬುದು ಬದುಕಿನ ಮಹತ್ವದ ಕಾಲ. ಹೊಣೆಗಾರಿಕೆಯ ಕಾಲಘಟ್ಟ. ಹಿರಿತನದ ಗಾಂಭೀರ್ಯ ಚೆಲ್ಲಬೇಕಾದ ಪ್ರಾಯವದು. ಆದರೆ ಅದರಲ್ಲೇ ಚೆಲ್ಲುಚೆಲ್ಲಾಗಿ ವರ್ತಿಸುವುದನ್ನೇ ಅರುವತ್ತರ ಅರುಳುಮರುಳು ಎಂದೆನ್ನುವವರೂ ಇದ್ದಾರೆ.

ಭಾರತದಲ್ಲೀಗ ಆಡಳಿತ ವಿಭಿನ್ನ ಆಯಾಮದಲ್ಲಿದೆ. ಪ್ರಜಾಪ್ರಭುತ್ವದ ಅರುಳುಮರುಳೂ ಅನ್ನಬಹುದೇನೊ... ಸಮ್ಮಿಶ್ರ ಸರ್ಕಾರ ರಚಿಸುವವರ ಗದ್ದಲ, ಆದರ್ಶಗಳಿಲ್ಲದ ಆಡಳಿತ ಇತ್ಯಾದಿಗಳನ್ನು ಅರುಳುಮರುಳಿನ ಹುಚ್ಚಾಟದ ಅವಸ್ಥೆ ಎನ್ನಬಹುದೇ?

ಸ್ವಾತಂತ್ರ್ಯ ಎಂದರೆ ಸ್ವ-ತಂತ್ರ ಎಂಬುದರ ಭಾವನಾಮ. ಸ್ವ ಎಂದರೆ ತನ್ನದು, ತಂತ್ರ ಅಂದರೆ ಆಡಳಿತ. ತನ್ನನ್ನು ತಾನೇ ಆಳುವ ದೇಶದಲ್ಲಿನ ಆಡಳಿತಾತ್ಮಕ ವಿಧಾನವನ್ನು ಸ್ಥೂಲವಾಗಿ ಸ್ವಾತಂತ್ರ್ಯ.

ಸಮಷ್ಟಿಗೆ ಅನ್ವಯವಾಗಬೇಕಿರುವ ಸ್ವಾತಂತ್ರ್ಯ ಎನ್ನುವ ಪದ-ಅರ್ಥ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅರ್ಥವಿಸ್ತಾರಗೊಳ್ಳುವ ಬದಲು ಸಂಕುಚಿತಗೊಂಡಿರುವಂತಿದೆ. ದೇಶವು ತನ್ನನ್ನು ತಾನೇ ಆಳುವ ಬದಲು ವ್ಯಕ್ತಿಗತ ಆಸಕ್ತಿಯಂತೆ ದೇಶವನ್ನು ಸ್ವಾತಂತ್ರ್ಯ, ಪರಮಾಧಿಕಾರ (ಸೊವರಿನಿಟಿ) ಎನ್ನಬೇಕಾಗುತ್ತಿದೆ.

ಭಾರತದಲ್ಲಿ ಮೂರೂವರೆ ಶತಮಾನಗಳ ಕಾಲದ ವಸಾಹತು ಶಾಹಿ ಆಳ್ವಿಕೆ ನಡೆಸಿದ ಸಾಮ್ರಾಜ್ಯದಾಹಿಗಳಿಂದ ತಾಯ್ನಾಡನ್ನು ಮುಕ್ತಗೊಳಿಸಬೇಕೆಂದು ಶತಮಾನಗಳ ಕಾಲ ಸೆಣಸಾಡಿದ ಸ್ವಾತಂತ್ರ್ಯಯೋಧರು ಕನಸುಕಂಡ ಸ್ವಾತಂತ್ರ್ಯ ಇಂದು ಕಾಣುವ ವಿಧಾನದ್ದೇ..?. ಎಂಬುದು ಸದ್ಯ ಚಿಂತನೆಗೆ ಯೋಗ್ಯ ವಿಷಯ.

ಅಂದು ಕನಸು ಕಂಡ ಸ್ವತಂತ್ರ ಭಾರತ ಯಾವ ತೆರನಾಗಿತ್ತು ಎನ್ನುವುದಕ್ಕೆ ಕವಿ ರವೀಂದ್ರನಾಥ ಠಾಗೋರ್ ಅವರ ಈ ಮುಂದಿನ ಕವನ (ವೇರ್ ದಿ ಮೈಂಡ್ ಇಸ್ ವಿದೌಟ್ ಫಿಯರ್...) ಸಾಲುಗಳು ಸಮರ್ಪಕವಾದ ಉದಾಹರಣೆಯಾಗಬಹುದೇನೋ:-

'ಎಲ್ಲಿ ಮನಕೆ ಅಳುಕಿರದೊ, ಎಲ್ಲಿ ತಲೆ ಬಾಗಿರದೊ, ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ; ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು ಬಿರುಕು ಒಡೆಯದಿಹುದೊ...' -ಅಂತಹ ನಾಡನ್ನು ಸ್ವತಂತ್ರ ದೇಶ, ಅಲ್ಲಿನ ಪ್ರಜಾಬದುಕನ್ನು ಸ್ವಾತಂತ್ರ್ಯ ಎನ್ನಬಹುದು.

ಪ್ರಜೆಗಳು ನಿರ್ಭಯರಾಗಿ ವ್ಯವಹರಿಸುವ ಬದುಕುವ ವಾತಾವರಣ, ದಾಸ್ಯದ ಅವಲಂಬನೆಯ ಬದಲು ಸ್ವಾಯತ್ತತೆ, ಸ್ವಾಭಿಮಾನದಿಂದ ತಲೆಯೆತ್ತಿ ಮನಃಸ್ಥೈರ್ಯದಿಂದ ಬದುಕುವ ಜೀವನದಂತೆಯೇ, ಮನೆಮನಗಳ ಒಗ್ಗಟ್ಟು , ಜನರಲ್ಲಿನ ಸಾಹೋದರ್ಯ ಸಹಕಾರ ಮನಃಸ್ಥಿತಿ ಸ್ವಾತಂತ್ರ್ಯಪೂರ್ವ ಕಾಲದ ಜನರ ಕನವರಿಕೆ. ಇದು ಕವಿಯ ಸೃಜನಶೀಲತೆಯಲ್ಲಿ ಅನಾವರಣಗೊಂಡಿದೆ. ಆದರೆ ಈ ಸ್ಥಿತಿ ಭಾರತದಲ್ಲಿ ಇಂದು ಇದೆಯೇ?

ಭಯ... ಭಯ... ಒಂದೆಡೆ, ಪರಸ್ಪರ ಕತ್ತಿಮಸೆಯುವ ಸಮುದಾಯಗಳು, ಪ್ರಜೆಗಳೇ ಆಗಿದ್ದರೂ ದೇಶಹಿತವಲ್ಲದ ಚಟುವಟಿಕೆಗಳಲ್ಲಿ ನಿರತರಾಗಿರುವ ಮನೆಮುರುಕ-ಮನೋಭಾವದ ಪ್ರಜಾವಿಭಾಗಗಳು ಇನ್ನೊಂದೆಡೆ; ಅಖಂಡ ದೇಶ ಅನ್ನುವ ಬದಲು ಖಂಡತುಂಡವಾಗಿರುವ ರಾಜ್ಯಗಳಿಗಾಗಿ ಬಯಸುವವರು, ಸಮಗ್ರ ದೇಶದ ಅಭಿವೃದ್ಧಿಯ ಬದಲು ಆಡಳಿತದ ಹೆಸರಲ್ಲಿ ಜನರ ಬೊಕ್ಕಸವನ್ನು ಬರಿದು ಮಾಡುವವರು, ಬಡ ಜನರ ತುತ್ತು ಅನ್ನವನ್ನೇ ಕಸಿದು ದೇಶಕಟ್ಟುವ ಬೊಗಳೆ ಬಿಡುವವರು... ಈ ಅವಸ್ಥೆಯನ್ನು ಸ್ವಾತಂತ್ರ್ಯ ಅನ್ನಬಹುದೇ... ಅನ್ನಬೇಕಾಗುತ್ತದೆ!

Share this Story:

Follow Webdunia kannada