Webdunia - Bharat's app for daily news and videos

Install App

'ಸೂಪರ್ ಪವರ್' ಭಾರತ ಅಷ್ಟು ಹೇಡಿಯಾ...?

Webdunia
ನಾಗೇಂದ್ರ ತ್ರಾಸಿ

PTI
ಭಾರತ ಸೂಪರ್ ಪವರ್ ರಾಷ್ಟ್ರವಾಗುತ್ತಿದೆ, ಅಭಿವೃದ್ಧಿಶೀಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಸೇರಿದಂತೆ ಪ್ರಗತಿಶೀಲ ರಾಷ್ಟ್ರಗಳೇ ಭಾರತದತ್ತ ಅಚ್ಚರಿಯ ದೃಷ್ಟಿ ನೆಟ್ಟಿವೆ. ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಹೆದರಿಸುತ್ತಿದ್ದ ದೊಡ್ಡಣ್ಣ ಆರ್ಥಿಕ ಹೊಡೆತದಿಂದ ಕಂಗಾಲಾಗಿ, ಉಳಿದ ವಿದೇಶಿ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಗರಬಡಿದಂತೆ ಕೂತಿದ್ದರೆ, ಭಾರತ ಮಾತ್ರ ಏನೇ ಬಂದರು ಎದುರಿಸುತ್ತೇವೆ ಎಂಬ ದಿಟ್ಟತನದ ವರ್ತನೆ ತೋರಿತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತದ ಆರ್ಥಿಕ ವ್ಯವಸ್ಥೆ ಅಮೆರಿಕದ ಹಾಗೇ ಲಂಗು ಲಗಾಮಿಲ್ಲದ ವ್ಯವಸ್ಥೆಯದ್ದಾಗಿರಲಿಲ್ಲ. ಇದು ಭಾರತ...ಆದರೂ ಭಾರತ ಪ್ರಸಕ್ತವಾಗಿ ಅನುಭವಿಸುತ್ತಿರುವ ಬಹುದೊಡ್ಡ ಸಮಸ್ಯೆಯ ಉರುಳು ಯಾವುದು...?

ಭಾರತ 62ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶದ ಸ್ಥಿತಿಗತಿ ಬಗ್ಗೆ ವಿಶ್ಲೇಷಿಸುವ ಗೋಜಿಗೆ ಹೋಗುವ ಕೆಲಸವನ್ನು ಈ ಲೇಖನದಲ್ಲಿ ಮಾಡುತ್ತಿಲ್ಲ. ಬದಲಾಗಿ ಆರು ದಶಕಗಳ ನಂತರವೂ ದೇಶ ಪ್ರಮುಖವಾಗಿ ಎದುರಿಸುತ್ತಿರುವ ಭಯೋತ್ಪಾದನೆ ಬಗ್ಗೆ ಕಠಿಣವಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ರಾಜಕಾರಣಿಗಳಲ್ಲಿನ ಇಚ್ಛಾಶಕ್ತಿಯ ಕೊರತೆ ಬಗ್ಗೆ ಚರ್ಚಿಸಬೇಕಾಗಿದೆ. ಬಡತನ, ಶಿಕ್ಷಣ, ಶೌಚಾಲಯ, ವಿದ್ಯುತ್, ಮೂಲಭೂತ ಸೌಕರ್ಯ ಹೀಗೆ ಸಮಸ್ಯೆಗಳ ಆಗರದ ನಡುವೆಯೇ ಇಂದು ದೇಶದ ಪ್ರತಿಯೊಂದು ಕಡೆಯಲ್ಲಿಯೂ ರಣಕೇಕೆ ಹಾಕಿ ಮುಗ್ದ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಉಗ್ರವಾದದ ಬಗ್ಗೆ ಭಾರತ ನಿರ್ವಿಯರಂತೆ ವರ್ತಿಸುತ್ತಿದೆಯಲ್ಲ...ಇನ್ನೆಷ್ಟು ಕಾಲ ಅಮಾಯಕ ಜೀವಗಳ ಹರಣವಾಗಬೇಕಾಗುತ್ತದೆ ಎಂಬುದೇ ಬಗೆಹರಿಯದ ಪ್ರಶ್ನೆಯಾಗಿ ಕಾಡುತ್ತದೆ. ಆರೋಪಿಯಾಗಿದ್ದರೂ ಶಿಕ್ಷೆ ನೀಡಲು ಆಗದೆ ಒದ್ದಾಡುವ ಸ್ಥಿತಿ ಭಾರತದ್ದು! ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವೇ ಕ್ಯಾಕರಿಸಿ ಉಗಿದು, ಕಾಂಗ್ರೆಸ್‌ಗೆ ತಾಕತ್ತಿದ್ದರೆ ನನ್ನ ಗಲ್ಲಿಗೇರಿಸಬೇಕು, ಹೋಗ್ಲಿ ಆಡ್ವಾಣಿ ಏನಾದ್ರು ಈ ದೇಶದ ಪ್ರಧಾನಿಯಾಗಿದ್ದರೆ ಏನಾದರೊಂದು ನಿರ್ಧಾರ ಕೈಗೊಳ್ಳುತ್ತಿದ್ದರು ಎಂದು ಹೇಳಿದ್ದ. ರಾಜೀವ್ ಗಾಂಧಿ ಹಂತಕರು ಕೂಡ ಮರಣದಂಡನೆಗಾಗಿ ಎದುರು ನೋಡುತ್ತಿದ್ದಾರೆ.

ND
ಮುಂಬೈ ಸರಣಿ ಬಾಂಬ್ ಸ್ಫೋಟ, 26/11 ಸೇರಿದಂತೆ ಎಲ್ಲರಿಗೂ ಸುರಕ್ಷಿತ ನಗರ ಎಂದೇ ಖ್ಯಾತಿ ಪಡೆದಿದ್ದ ಉದ್ಯಾನನಗರಿ ಬೆಂಗಳೂರಿನಲ್ಲೂ ಸ್ಫೋಟ ಸಂಭವಿಸುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಹೋಗಲಿ 26/11 ಸ್ಫೋಟದ ರೂವಾರಿಗಳು ಯಾರು, ಎಷ್ಟು ಮಂದಿ ಬಂದಿದ್ದರು, ಎಲ್ಲಿ ಸಂಚು ರೂಪಿಸಿದ್ದರು ಎಂಬೆಲ್ಲಾ ವಿವರಗಳನ್ನು ಜೀವಂತವಾಗಿ ಸೆರೆಸಿಕ್ಕ ಉಗ್ರ ಅಮೀರ್ ಅಜ್ಮಲ್ ಕಸಬ್ ಎಳೆಎಳೆಯಾಗಿ ಬಿಡಿಸಿಟ್ಟರೂ ಕೂಡ ಪಾಕಿಸ್ತಾನ ಕಮಕ್ ಕಿಮಕ್ ಎನ್ನದೇ ಈ ಹಿಂದೆ ಹೇಳುತ್ತಿದ್ದ ಇಬ್ಬಗೆಯ ಹೇಳಿಕೆಯನ್ನು ನೀಡಿ ನೌಟಂಕಿ ನಾಟಕವನ್ನು ಮುಂದುವರಿಸಿದೆ ವಿನಃ ಬೇರೆನೂ ಆಗಿಲ್ಲ. ಯಾಕೆಂದರೆ ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುತ್ತಾರಲ್ಲ ಹಾಗೇ ಭಾರತ ಪ್ರತಿಯೊಂದಕ್ಕೂ ಅಮೆರಿಕದತ್ತ ಕೈಚಾಚುವುದು ಹೆಚ್ಚಾಗಿದೆ. ಪ್ರತಿಯೊಂದಕ್ಕೂ ಅಮೆರಿಕವೇ ನಿರ್ಣಾಯಕ ಎಂಬಂತಾಗಿ ಬಿಟ್ಟಿದೆ. ಅದೇನು ಸಾಚಾನಾ ಈ ಹಿಂದೆ ಅಮೆರಿಕ ಭಾರತದ ಬಗ್ಗೆ ಯಾವ ನಿಲುವು ತೋರಿತ್ತು ಎಂಬ ಪರಿಜ್ಞಾನವಾದರೂ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಎಂಬ ಖ್ಯಾತಿ ಪಡೆದ ಪ್ರಧಾನಿ ಸಿಂಗ್ ‌ಜೀಗೆ ತಿಳಿಯಬೇಡವೇ?

ಜಗತ್ತಿನಲ್ಲಿ ಮಿಡತೆಯಷ್ಟಿರುವ ದೇಶಗಳು ಅಮೆರಿಕಕ್ಕೆ ಕ್ಯಾರೆ ಎನ್ನದಿರುವಾಗ ಭಾರತ ಅದ್ಯಾಕೋ ಡೊಗ್ಗು ಸಲಾಮ್ ಹಾಕುತ್ತಿದೆ. ಜಗತ್ತಿಗೆ ತಾನೇ ಅನಧಿಕೃತ ಡಾನ್ ಎಂಬಂತೆ ವರ್ತಿಸುವ ಅಮೆರಿಕ ಸ್ವಂತ ಸಾಮರ್ಥ್ಯದಿಂದ ಮೇಲೇಳುವ ಪ್ರತಿಯೊಂದು ದೇಶದ ತಲೆಗೆ ಜಾಣತನದಿಂದ ಹೊಡೆತ ನೀಡುತ್ತದೆ!. ಅದರಲ್ಲೂ ಭಾರತ ಅಂದರೆ ಅದಕ್ಕೆ ಮೊದಲಿನಿಂದಲೂ ಮಹಾ ಅಲರ್ಜಿ. ಭಾರತ ಅತ್ಯಂತ ಕಷ್ಟದ ಸ್ಥಿತಿ ಅನುಭವಿಸುತ್ತಿರುವಾಗಲೆಲ್ಲ ಗಹಗಹಿಸಿ ನಗುತ್ತಿದ್ದ ದೇಶವೆಂದರೆ ಅದು ಅಮೆರಿಕ. 1947ರಲ್ಲಿ ಪಾಕಿಸ್ತಾನ ಇಲ್ಲಿನ ಭೂಮಿಯನ್ನು ವಶಪಡಿಸಿಕೊಂಡಾಗ ಅಮೆರಿಕ ಪಾಕ್‌ಗೆ ಬೆಂಬಲ ನೀಡಿತ್ತು. 1962ರಲ್ಲಿ ಚೀನಾ ಭಾರತದ ಮೇಲೆ ಸಮರ ಸಾರಿದಾಗ ಚೀನಾಕ್ಕೆ ಅಭಯಹಸ್ತ ನೀಡಿತ್ತು. ಭಾರತದ ಮೇಲೆ ದಾಳಿ ಮಾಡಲೆಂದೇ ಅದು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಚೀನಾಕ್ಕೆ ಸರಬರಾಜು ಮಾಡಿತ್ತು.

ಅದಲ್ಲದೆ ಕೋಟ್ಯಂತರ ರೂಪಾಯಿಯ ಬೋಫೋರ್ಸ್ ಹಗರಣದ ರೂವಾರಿ ಕ್ವಟ್ರೋಚಿಗೆ ಏನೂ ಆಗಿಲ್ಲ, 1984ರಲ್ಲಿ ಭೋಪಾಲ್‌ನಲ್ಲಿ ಸಂಭವಿಸಿದ ಅನಿಲ ದುರಂತದಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಕಾರಣವಾಗಿದ್ದು ಅಮೆರಿಕ!. ಆದರೆ ಸ್ವದೇಶಿ ಚಳವಳಿಯ ರಾಜೀವ್ ದೀಕ್ಷಿತ್ ಹೇಳುವಂತೆ, ನಮ್ಮ ನೀತಿಗೆಟ್ಟ ನಾಯಕರು ಮತ್ತು ಅವರ ಪಾರ್ಲಿಮೆಂಟ್ ಈ ಕಂಪೆನಿಯ ಅಧಿಕಾರಿ ವಾರನ್ ಆಂಡರ್‌ಸನ್ ಎಂಬಾತನನ್ನು ಮುಟ್ಟುವ ಧೈರ್ಯ ಕೂಡ ಮಾಡಿಲ್ಲ, ನೆನಪಿರಲಿ ಪಾಪಿಗಳ ಪಾರ್ಲಿಮೆಂಟ್‌ನಲ್ಲಿ ಯಾವತ್ತೂ ಕ್ರಾಂತಿಯಾಗುವುದಿಲ್ಲ! 26/11ರ ಘಟನೆ ಕುರಿತಂತೆ ಪಾಕಿಸ್ತಾನ ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿದ್ದರೆ ಭಾರತ, ಮೊದಲು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ನಂತರ ಮಾತುಕತೆ ಎನ್ನುತ್ತಿದೆ. ಅಮೆರಿಕ ಕೂಡ ಪಾಕ್‌ಗೆ ಗುರ್ ಎನ್ನುತ್ತಿದೆ. ಆದರೆ ಪಾಕಿಸ್ತಾನಕ್ಕೂ ಚೆನ್ನಾಗಿ ಗೊತ್ತು, ಅಮೆರಿಕಕ್ಕೆ ಒಳಗೊಳಗೆ ಭಾರತಕ್ಕಿಂತ ಪಾಕಿಸ್ತಾನವೇ ಮುದ್ದು. ಕರಿಯ ಜನಾಂಗದ ಅಧ್ಯಕ್ಷ ಎಂಬ ಹೆಗ್ಗಳಿಕೆ ಪಡೆದು ಶ್ವೇತ ಭವನ ಪ್ರವೇಶಿಸಿದ್ದ ಬರಾಕ್ ಒಬಾಮ ಕೂಡ ಮೊದಲು ಪಾಕಿಸ್ತಾನಕ್ಕೆ ನೀಡುತ್ತಿರುವ ಅನುದಾನ ನಿಲ್ಲಿಸುವುದಾಗಿ ಹೇಳಿದ್ದರೂ ಸಹ ಇದೀಗ ಐಎಂಎಫ್ 3.2 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದೆ.

ಖ್ಯಾತ ಅಂಕಣಕಾರ ಟಿಜೆಎಸ್ ಜಾರ್ಜ್ ಅವರ ಮಾತಿನಲ್ಲೇ ಹೇಳುವುದಾದರೆ, ಭಾರತ ಇಂತಹ ಮೋಸಗಾರಿಕೆ ಮುಖವಾಡವನ್ನು ಬಯಲು ಮಾಡುವಲ್ಲಿ ಏಕೆ ವಿಫಲವಾಗುತ್ತೆ ? ಮನಮೋಹನ್ ಸಿಂಗ್ ಅವರ ಅಮೆರಿಕ ಮೋಹವೇ ಇದಕ್ಕೆ ಕಾರಣವೇ ? ಇನ್ನೂ ನಾವು ವಸಾಹತುಶಾಹಿ ಮನಸ್ಥಿತಿಯಿಂದ ಪಾರಾಗಿಲ್ಲ ಎನ್ನುವುದೇ ಕಾರಣವೇ? ಅಥವಾ ಅಭ್ಯಾಸಬಲದಿಂದ ಪಶ್ಚಿಮರಾಷ್ಟ್ರಗಳಿಗೆ ನಡುಬಗ್ಗಿಸಿ ಸಲಾಮು ಹಾಕುವುದನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವಾ ? ಸ್ವತಂತ್ರ ಭಾರತದ ಚರಿತ್ರೆಯ ಪುಟಗಳನ್ನು ನೋಡಿದರೆ ನಾವು ಮಂಡಿಯೂರಿ ನಡೆದಿರುವ ಹಲವಾರು ಘಟನೆಗಳಿವೆ. ಅನಗತ್ಯವಾಗಿ ನಾವು ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯಗೊಳಿಸಿದೆವು. 1995ರಲ್ಲಿ ಪುರುಲಿಯಾದಲ್ಲಿ ವಿದೇಶಿ ವಿಮಾನವೊಂದು ಶಸ್ತ್ರಾಸ್ತ್ರಗಳನ್ನು ಇಳಿಸಿದಾಗ, ಅದಕ್ಕೆ ಕಾರಣವಾಗಿದ್ದ ಐವರು ಲ್ಯಾಟಿನ್ ಅಮೆರಿಕನ್‌ ಹಾಗೂ ಒಬ್ಬ ಬ್ರಿಟಿಷ್ ಪ್ರಜೆಗೆ ಶಿಕ್ಷೆಯಾಯಿತು. ಆದರೆ, ಅವರೆಲ್ಲರಿಗೂ ಕ್ಷಮಾದಾನ ಮಾಡಿ ಅವರವರ ರಾಷ್ಟ್ರಗಳಿಗೆ ಕಳುಹಿಸಿಕೊಡಲಾಯಿತು. ಸ್ವಾತಂತ್ರ್ಯ ಬಂದು ಆರು ದಶಕಗಳ ನಂತರವೂ ನಾವು ನಮ್ಮ ಘನತೆಯನ್ನು ಉಳಿಸಿಕೊಳ್ಳುವುದು ಹೇಗೆ ಅನ್ನುವುದನ್ನು ಕಲಿಯಬೇಕಿದೆ. ಹೌದು ಇವತ್ತು ವೋಟ್ ಬ್ಯಾಂಕ್, ಡೊಗ್ಗು ಸಲಾಮಿನ, ಜಾತಿ ರಾಜಕಾರಣ ಮಾಡುವ ಮೂಲಕ ಹಲ್ಲಿಲ್ಲದ ಕಾನೂನನ್ನು ಕಿತ್ತೊಗೆದು, ಕಠಿಣ ಕಾನೂನುನನ್ನು ಜಾರಿಗೆ ತರಲು ಸ್ವಾತಂತ್ರ್ಯ ಬಂದು ಆರು ದಶಕಗಳ ನಂತರವೂ ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ.

ಇವತ್ತು ಸಲಿಂಗಕಾಮವನ್ನು ಕಾನೂನು ಬದ್ಧಗೊಳಿಸಿದರ ಬಗ್ಗೆ ಪರ-ವಿರೋಧ ಮಾತನಾಡಿ ಕಾಲಕಳೆಯುತ್ತಿದ್ದೇವೆ. ಆದರೆ ದೇಶಕ್ಕಿಂದು ತುರ್ತಾಗಿ ಕೆಲವೊಂದು ಕಾನೂನುಗಳಲ್ಲಿ ಬದಲಾವಣೆ ಆಗಬೇಕಾಗಿದೆ. ಅದರ ಬಗ್ಗೆ ಸಂಸತ್‌ನ ಒಳಗಾಗಲಿ ಹೊರಗಾಗಲಿ ಯಾರೂ ಚರ್ಚಿಸುತ್ತಿಲ್ಲ. ಯಾಕೆಂದರೆ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಅವೆಲ್ಲ ಗೌಣವಾಗುತ್ತಿದೆ. ಈಗ ಇದ್ದ ಕಾನೂನೇ ಬಲಿಷ್ಠವಾಗಿದೆ ಎಂದು ಹೇಳಿಕೆ ನೀಡಿ ತೇಪೆ ಹಚ್ಚಲಾಗುತ್ತಿದೆ.

ಇವತ್ತು ಭಾರತ ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಇಲ್ಲಿರುವ ಒಂದೆರಡು ಉದಾಹರಣೆಯನ್ನು ನೋಡಿ...

ಇತ್ತೀಚೆಗಷ್ಟೇ ಕ್ಯೂಬಾ ಬಗ್ಗೆ ಹಿಲರಿ ಕ್ಲಿಂಟನ್ ಹೇಳಿಕೆಯನ್ನು ಸ್ವಾಗತಿಸಿರುವ ಅಧ್ಯಕ್ಷ ರೌಲ್, ಅಮೆರಿಕಕ್ಕೆ ಎಲ್ಲಾ ರೀತಿಯ ಗೌರವ ನೀಡಲಾಗುವುದು ಆದರೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಆಶಯದಂತೆ ಯಾವುದೇ ಕಾರಣಕ್ಕೂ ದೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಅದರ ಬದಲಿಗೆ ಕ್ರಾಂತಿಗೆ ಸಿದ್ದ ಎಂದು ಎಚ್ಚರಿಕೆ ನೀಡಿ, ದೇಶದಲ್ಲಿನ ಸಮಾಜವಾದ ವ್ಯವಸ್ಥೆಯನ್ನು ಮುಂದುವರಿಸಲಾಗುವುದು, ಅದನ್ನು ಯಾವುದೇ ಕಾರಣಕ್ಕೂ ನಾಶಗೊಳಿಸುವುದಿಲ್ಲ ಎಂದು ಕ್ಯಾಸ್ಟ್ರೋ ಅಮೆರಿಕದ ವಿರುದ್ಧವೇ ಗುಡುಗಿದ್ದರು.

1965 ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಎರಡನೇ ಬಾರಿ ದಂಡೆತ್ತಿ ಬಂದಿತ್ತು. ಆ ನಂತರ ಪಾಕ್ ಬಾಲಮಡಚಿಕೊಂಡು ಹೋಗಿದ್ದು ಇತಿಹಾಸ. ಆದರೆ ಆ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ವಿದೇಶಿ ಶಕ್ತಿಗಳ ಧಮಕಿಗಳಿಗೆ ಸೊಪ್ಪು ಹಾಕದೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ನಮ್ಮ ಸೈನ್ಯ ಪಡೆ ಪಾಕಿಸ್ತಾನದ ಸೈನಿಕರನ್ನು ಕರಾಚಿ, ರಾವಲ್ಪಿಂಡಿವರೆಗೆ ಅಟ್ಟಾಡಿಸಿಕೊಂಡು ಓಡಿಸುತ್ತಿತ್ತೋ ಇಲ್ಲವೋ?. ಆಗ ಇದೇ ಅಮೆರಿಕ ಪಾಕಿಸ್ತಾನದ ಜತೆ ಸಂಧಾನ ಮಾಡಿಕೊಳ್ಳಿ, ಇಲ್ಲವಾದಲ್ಲಿ ನಿಮಗೆ ಸರಬರಾಜು ಆಗುತ್ತಿರುವ ಕೆಂಪು ಗೋಧಿಯನ್ನೇ ನಿಲ್ಲಿಸಲಾಗುತ್ತದೆ ಎಂದು ಗುಡುಗಿದಾಗ, 'ಹೋಗ್ರಯ್ಯ ನಿಮ್ಮ ಗೋಧಿಯೇ ಬೇಕಾಗಿಲ್ಲ, ಬೇಕಾದ್ರೆ ನಮ್ಮ ಜನ ಉಪವಾಸ ಮಾಡ್ತಾರೇ ! ಎಂದು ಶಾಸ್ತ್ರಿ ಗರ್ಜಿಸಿದ್ದರು. ಆದರೆ ಆರು ದಶಕಗಳ ನಂತರ ನಾವು ಇಂತಹ ಸಿಂಹ ಗರ್ಜನೆಯ ನಾಯಕರನ್ನು ಹುಡುಕುವುದಾದರೂ ಎಲ್ಲಿ...?

ಕೊನೆಯ ಮಾತು...

1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆದು, ಪಾಕ್ ಸೋಲು ಅನುಭವಿಸಿ ಹಿಮ್ಮೆಟ್ಟಿಸಿದ್ದು ಇತಿಹಾಸ. ಆದರೆ ಯುದ್ಧ ನಡೆದು ಬಹುಕಾಲದ ನಂತರ ಖ್ಯಾತ ಪತ್ರಕರ್ತರಾಗಿದ್ದ ಕುಲದೀಪ್ ನಯ್ಯರ್ ಅವರು, ಒಂದು ವೇಳೆ ಜವಾಹರಲಾಲ್ ನೆಹರು ಅವರು ಇದ್ದಿದ್ದರೆ ಭಾರತ-ಪಾಕ್ ಯುದ್ಧ ನಡೆಯುತ್ತಿತ್ತೇ ಎಂದು ಕೇಳಿದ್ದ ಪ್ರಶ್ನೆಗೆ, ಖಂಡಿತಾ ಇಲ್ಲ ಎಂಬ ಉತ್ತರ ಲಭಿಸಿತ್ತಂತೆ. ಯಾಕೆಂದರೆ ಭಾರತ ಮತ್ತು ಪಾಕ್ ನಡುವಿನ ಯುದ್ಧ ನಡೆಯುವುದೇ ಒಂದು ದೊಡ್ಡ ಅಪರಾಧ ಎಂಬ ಭಾವನೆ ನೆಹರು ಅವರಲ್ಲಿತ್ತಂತೆ!

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ ಈ ಕೆಲಸ ಮಾಡಬೇಡಿ

ಅಂಗಡಿಯಿಂದ ತಂದ ತುಪ್ಪ ಅಸಲಿಯೋ, ನಕಲಿಯೋ ಎಂದು ಪತ್ತೆ ಹಚ್ಚಲು ಹೀಗೆ ಮಾಡಿ

Show comments