ಮುಂಬರುವ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್‌ಟನ್ ವಿವಾಹದ ಪ್ರಯುಕ್ತ ಹೊಸ ವೆಬ್‌ಸೈಟ್ ತೆರೆಯಲಾಗಿದೆ.
ಏಪ್ರಿಲ್ 29 ರಂದು ಅದ್ದೂರಿಯಾಗಿ ನಡೆಯಲಿರುವ ರಾಜಮನೆತನದ ವಿವಾಹದ ಬಗ್ಗೆ ವಿಶ್ವದಾದ್ಯಂತ ಮಾಧ್ಯಮಗಳು, ಜನತೆ ಉತ್ಸುಕರಾಗಿರುವುದರಿಂದ ಅರಮನೆಯ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
www.officialroyalwedding2011.org ವೆಬ್‌ಸೈಟನ್ನು ಅನುಸರಿಸಿದರೆ ವಿವಾಹದ ವಿಶೇಷಗಳನ್ನು ದಿನೇ-ದಿನೇ ಅರಿತುಕೊಳ್ಳ ಬಹುದಾಗಿದೆ. ವಿಶೇಷವಾಗಿ ಬಹುಜನರ ಆಸಕ್ತಿಯಂತೆ ಕೇಟ್ ಮಿಡ್ಲ್‌ಟನ್ ಮದುವೆ ವಸ್ತ್ರಾಲಂಕಾರಕ್ಕೆ ಸಂಬಂಧಿಸಿದ ಹೆಚ್ಚಿನ ಛಾಯಾಚಿತ್ರಗಳು, ಇನ್ನಿತರ ವೈವಾಹಿಕ ಸಂಬಂಧಿತ ವಿಡಿಯೊಗಳು ಹಾಗೂ ತಾಜಾ ಸುದ್ದಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.
ಇದಲ್ಲದೆ ಆಸಕ್ತ ಸಾರ್ವಜನಿಕರಿಗೆ ಅನುಕೂಲವಾಗಲು ಬ್ರಿಟನ್ ಸರಕಾರ ಕೂಡ ಪ್ರತ್ಯೇಕ ವೆಬ್‌ಸೈಟ್‌ನ್ನು ಆರಂಭಿಸಿದೆ.
1981ರಲ್ಲಿ ನಡೆದ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಜಕುಮಾರಿ ಡಯಾನ ವಿವಾಹ ಮಹೋತ್ಸವವನ್ನು ನೆನಪಿಸುತ್ತಿರುವ ಈ ಅರಸೊತ್ತಿಗೆ ವಿವಾಹ ಮಹೋತ್ಸವದಲ್ಲಿ ಹೆಸರಾಂತ ಪಾಶ್ಚಾತ್ಯ ಸಂಗೀತಗಾರ ಎಲ್ಟನ್ ಜಾನ್ ಮತ್ತು ಡೇವಿಡ್ ಫರ್ನಿಶ್ ಜೋಡಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.