ದೇಹದ ತೂಕವನ್ನು ಹತೋಟಿಯಲ್ಲಿಡುತ್ತದೆಂಬ ಜನಪ್ರಿಯ ಪರಿಕಲ್ಪನೆಯಲ್ಲಿ ಧೂಮಪಾನಕ್ಕೆ ಮೊರೆಹೋದವರಿಗೆ ನಿರಾಶೆ ಕಾದಿದೆ. ಧೂಮಪಾನದಿಂದ ದೇಹದಲ್ಲಿ ವಿರುದ್ಧ ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ.
ಧೂಮಪಾನದಿಂದ ಸ್ನಾಯುಗಳಲ್ಲಿ ನಷ್ಟವುಂಟಾಗಿ ಅವರ ದೇಹದಲ್ಲಿ ಕೊಬ್ಬಿನ ಅಂಶ ಹಾಗೇ ಉಳಿದಿದ್ದರೂ ಅಥವಾ ಹೆಚ್ಚಿದರೂ ಅವರು ತೆಳ್ಳಗೆ ಕಾಣುತ್ತಾರೆ ಎಂದು ಎನ್‌ಎಸ್‌ಡಬ್ಲ್ಯು ಮತ್ತು ಮೆಲ್‌ಬೋರ್ನ್ ವಿ.ವಿ.ಯ ಸಂಶೋಧಕರ ತಂಡವು ಪತ್ತೆಹಚ್ಚಿದೆ.
ಧೂಮಪಾನದಿಂದ ಮುಖ್ಯ ಅಂಗಾಂಗಗಳಲ್ಲಿ ಹೆಚ್ಚು ಕೊಬ್ಬಿನ ಅಂಶ ಶೇಖರಣೆಯಾಗುತ್ತದೆ. ಇಲಿಯ ಮೇಲೆ ಈ ಕುರಿತು ಮಾಡಿದ ಪ್ರಯೋಗಗಳ ಆಧಾರದ ಮೇಲಿನ ಅಧ್ಯಯನವನ್ನು ಅಮೆರಿಕದ ಜರ್ನಲ್‌ನಲ್ಲಿ ಪ್ರಕಟಿಸಲಾಗುವುದು. ಕೆಲವು ಇಲಿಗಳನ್ನು ಸಿಗರೇಟಿನ ಧೂಮಕ್ಕೆ ಒಡ್ಡಲಾಯಿತು ಮತ್ತು ಇನ್ನೂ ಕೆಲವು ಇಲಿಗಳನ್ನು ಧೂಮದಿಂದ ಹೊರಗಿಡಲಾಯಿತು.
ಆದರೆ ಸಿಗರೇಟಿನ ಹೊಗೆ ಸೇವಿಸಿದ ಇಲಿಗಳು ಧೂಮಪಾನ ಮಾಡದೇ ಇದ್ದಾಗ ಸೇವಿಸಿದ್ದಕ್ಕಿಂತ ಶೇ.23 ಕಡಿಮೆ ಆಹಾರ ಸೇವಿಸಿದರೂ ಅವುಗಳ ಕೊಬ್ಬನ ಅಂಶ ಗಮನಾರ್ಹ ಕುಸಿತ ಉಂಟಾಗಲಿಲ್ಲ.
ಅನಾರೋಗ್ಯಕರ ಪಾಶ್ಚಿಮಾತ್ಯ ಆಹಾರದ ಜತೆ ಧೂಮಪಾನವೂ ಸೇರಿಕೊಂಡರೆ ದೇಹದ ರಾಸಾಯನಿಕ ಕ್ರಿಯೆಯಲ್ಲಿ ಅವ್ಯವಸ್ಥೆ ಉಂಟಾಗಿ ಕೊಬ್ಬು ಶೇಖರಣೆಯಾಗುತ್ತದೆ ಎಂದು ಪ್ರೊ. ಎನ್‌ಎಸ್‌ಡಬ್ಲ್ಯು ವಿ.ವಿ.ಯ ಪ್ರೊ. ಮಾರ್ಗರೇಟ್ ಮೋರಿಸ್ ತಿಳಿಸಿದ್ದಾರೆ.ಅನೇಕ ಯುವತಿಯರು ತಮ್ಮ ದೇಹದ ತೂಕ ಹತೋಟಿಗೆ ಬರುತ್ತದೆಂದು ಭಾವಿಸಿ ಧೂಮಪಾನಕ್ಕೆ ಮೊರೆಹೋಗುತ್ತಿರುವುದರಿಂದ ಸಮಸ್ಯೆಯುಂಟಾಗಿದೆ ಎಂದು ಅವರು ಹೇಳಿದರು.