ತೆಂಗಿನಕಾಯಿ ತ್ವಚೆಯ ಆರೈಕೆಗಾಗಿ ಇರುವ ಅತ್ಯುತ್ತಮವಾದ ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ. ಇದರ ಎಣ್ಣೆಯು ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು, ನಿಮ್ಮ ಚರ್ಮಕ್ಕೆ ಉತ್ತಮ ಸ್ನೇಹಿತನಾಗಬಹುದು.
ಆದರೆ, ಇದನ್ನು ಸರಿಯಾಗಿ ಬಳಸಬೇಕಷ್ಟೇ..
ಆದ್ದರಿಂದ ನಾವಿಂದು ಈ ಲೇಖನದಲ್ಲಿ ತೆಂಗಿನೆಣ್ಣೆ ಬಳಸುವುದರಿಂದ ಮುಖದ ಕಾಂತಿಯನ್ನು ಹೇಗೆ ಹೆಚ್ಚಿಸಬಹುದು? ಅದನ್ನು ಯಾವ ರೀತಿ ಬಳಸಬೇಕು ಎಂಬುದನ್ನು ಚರ್ಚಿಸಲಿದ್ದೇವೆ.
ಕಾಂತಿಯುತ ಮತ್ತು ಆರೋಗ್ಯಕರ ತ್ವಚೆ ಪಡೆಯಲು ತೆಂಗಿನೆಣ್ಣೆಯ ಫೇಶೀಯಲ್ ಹೇಗೆ ಮಾಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾದ ಫೇಸ್ ಕ್ಲೆನ್ಸರ್ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ, ಮುಖದ ಮೇಲೆ ಸಂಗ್ರಹವಾಗಿರುವ ಎಲ್ಲಾ ಕಲ್ಮಶಗಳನ್ನು ತೆಗೆದುಹಾಕಲು ಎಫ್ಫೋಲಿಯೇಟ್ ಮಾಡಬೇಕು. ಇದಕ್ಕಾಗಿ, ನೀವು ತೆಂಗಿನ ಎಣ್ಣೆಯ ಫೇಸ್ ಸ್ಕ್ರಬ್ ಅನ್ನು ಸಿದ್ಧಪಡಿಸಬೇಕು. ಅದಕ್ಕಾಗಿ, ಒಂದು ಬಟ್ಟಲಿನಲ್ಲಿ 1/4 ಕಪ್ ತೆಂಗಿನ ಎಣ್ಣೆ, 1/4 ಕಪ್ ಬ್ರೌನ್ ಶುಗರ್ ಮತ್ತು 1/2 ಕಪ್ ಕಾಫಿ ಪೌಡರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಒದ್ದೆಯಾದ ಮುಖದ ಮೇಲೆ ಈ ಸ್ಕ್ರಬ್ ಅನ್ನು ಹಚ್ಚಿ, ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ, ನಂತರ ತೊಳೆಯಿರಿ.
ತೆಂಗಿನ ಎಣ್ಣೆಯು ಎಫ್ಫೋಲಿಯೇಟಿಂಗ್ ಗುಣಗಳನ್ನು ಹೊಂದಿದ್ದು, ಇದರಲ್ಲಿರುವ ಲಾರಿಕ್ ಆಮ್ಲವು ಚರ್ಮದ ಮೇಲಿನ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇದು ಉತ್ತಮ ಎಕ್ಸ್ಫೋಲಿಯೇಟರ್ ಆಗಿ ಕೆಲಸ ಮಾಡಿ, ಡೆಡ್ ಸೆಲ್ಗಳನ್ನು ತೆಗದುಹಾಕುವ ಮೂಲಕ, ಇದು ನಿಮ್ಮ ಚರ್ಮವನ್ನು ಮೃದು ಮತ್ತು ನಯವಾಗಿಸುತ್ತದೆ.
ಒಂದು ಬಟ್ಟಲಿನಲ್ಲಿ, ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಮುಖ ಮತ್ತು ಕುತ್ತಿಗೆಯನ್ನು ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಲು ಪ್ರಾರಂಭಿಸಿ. ನಿಮ್ಮ ಮುಖವನ್ನು ಎಣ್ಣೆಯಿಂದ ಮಸಾಜ್ ಮಾಡುವಾಗ ಆತುರ ಬೇಡ, ನಿಧಾನವಾಗಿರಿ.
ಈ ತೆಂಗಿನ ಎಣ್ಣೆ ಮಸಾಜ್ ನಿಮ್ಮ ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ. ಜೊತೆಗೆ ತ್ವಚೆಯ ಮೇಲೆ ಅನಗತ್ಯ ಬ್ಯಾಕ್ಟೀರಿಯಾಗಳ ಬೆಳವಣಿಗೆ ಅಥವಾ ಡೆಡ್ ಸೆಲ್ ಇದ್ದರೆ, ಈ ತ್ವರಿತ ತೆಂಗಿನ ಎಣ್ಣೆ ಮಸಾಜ್ ಅದನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ
ಮನೆಯಲ್ಲಿ ತಯಾರಿಸಿದ ಈ ಫೇಸ್ ಪ್ಯಾಕ್ನಿಂದ ನೈಸರ್ಗಿಕ ಮುಖದ ಹೊಳಪು ಸಿಗುವುದು. ಅದಕ್ಕಾಗಿ ಒಂದು ಬಟ್ಟಲಿನಲ್ಲಿ, 1 ಚಮಚ ತೆಂಗಿನ ಎಣ್ಣೆ, 1 ಚಮಚ ಜೇನುತುಪ್ಪ, 1 ಟೀಸ್ಪೂನ್ ಅಲೋ ವೆರಾ ಜೆಲ್ ಗಳನ್ನು ಒಟ್ಟಿಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಹಚ್ಚಿ. 20-30 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.
ನಿಮ್ಮ ಮುಖ ಯಾವಾಗಲೂ ನಿರ್ಜೀವ ಮತ್ತು ನೀರಸವಾಗಿದ್ದರೆ ಈ ಫೇಸ್ ಪ್ಯಾಕ್ಗೆ ಮೊಸರು ಮತ್ತು ನಿಂಬೆ ರಸವನ್ನು ಸೇರಿಸಬಹುದು. ಈ ಪದಾರ್ಥಗಳು ತ್ವಚೆಯ ಹೊಳಪನ್ನು ಒಳಗಿನಿಂದ ಹೆಚ್ಚಿಸುತ್ತದೆ ಮತ್ತು ವಯಸ್ಸಾದ ಚಿಹ್ನೆಗಳ ನೋಟವನ್ನು ಕಡಿಮೆ ಮಾಡುತ್ತದೆ.