Publish Date: Thu, 29 Jun 2017 (08:51 IST)
Updated Date: Thu, 29 Jun 2017 (08:54 IST)
ಬೆಂಗಳೂರು: ಒಡಲಲ್ಲಿ ತಮ್ಮಿಬ್ಬರ ಪ್ರೀತಿಯ ಫಲ ಹೊತ್ತುಕೊಂಡ ಮಹಿಳೆಯನ್ನು ಹೇಗೆ ನೋಡಿಕೊಳ್ಳಬೇಕು? ಹೀಗೊಂದು ಪ್ರಶ್ನೆ ಗಂಡಂದಿರಿಗೆ ಕಾಡದೇ ಇರುವುದಿಲ್ಲ.
ಹಾಗಂತ ಹೊತ್ತು ಹೆರುವವಳು ಅವಳು ಎಂದು ನಿಮ್ಮದೇನೂ ಕೆಲಸವಿಲ್ಲ ಎಂದುಕೊಳ್ಳಬೇಡಿ. ಅದೆಲ್ಲಾ ಅವಳ ಕೆಲಸ. ನಾನು ಗಂಡು ಎಂಬ ಅಹಂ ಬೇಡ. ಹಾಗೆಯೇ ಇದರಲ್ಲಿ ನನ್ನದೂ ಸಮಪಾಲು ಇಲ್ವೇ ಎಂದು ನಿನ್ನದೇನು ಮಹಾ ಎಂದು ಅತಿಯಾದ ಅಹಂ ತೋರಿ ನಿಮ್ಮಾಕೆಗೆ ನೋವು ಕೊಡಬೇಡಿ.
ಇಬ್ಬರದೂ ಸಮಪಾಲು ಎನ್ನುವುದೇನೋ ನಿಜ. ಆದರೆ ಹೊರುವವಳು, ನೋವು ಅನುಭವಿಸುವವಳು ಹೆಣ್ಣು ಎನ್ನುವುದನ್ನು ಮರೆಯಬೇಡಿ. ಹಾಗಾದರೆ ಅವಳಿಗೆ ಸಂತೋಷ ಕೊಡಲು ನೀವೇನು ಮಾಡಬಹುದು?
· ಮನೆ ಕೆಲಸಗಳಲ್ಲಿ ಸಹಾಯ ಮಾಡಿ. ಸಾಧ್ಯವಾದಷ್ಟು ಹಂಚಿಕೊಂಡು ಕೆಲಸ ಮಾಡಿ.
· ಆಗಾಗ ಅವಳ ಆರೋಗ್ಯದ ಬಗ್ಗೆ ವಿಚಾರಿಸುತ್ತಿರಿ.
· ನಿಮ್ಮಾಕೆಯೂ ಕೈ ತುಂಬಾ ದುಡಿಯುವವಳೇ ಆಗಿದ್ದರೂ, ಸಾಧ್ಯವಾದಾಗಲೆಲ್ಲಾ ಆಕೆಗೆ ಉಡುಗೊರೆ, ಪ್ರೊಟೀನ್ ಅಂಶದ ಆಹಾರ ವಸ್ತುಗಳನ್ನು ತಂದು ಆರೈಕೆ ಮಾಡುತ್ತಿರಿ.
· ಅವಳ ಹೊಟ್ಟೆಯಲ್ಲಿ ಚಿಗುರೊಡೆಯುತ್ತಿರುವ ನಿಮ್ಮ ಕಂದಮ್ಮನ ಸಣ್ಣ ಮಿಡಿತವನ್ನು ಆಲಿಸಿ.
· ಹೊತ್ತು ಹೊತ್ತಿಗೆ ಅವಳ ಆಹಾರ, ಉಪಚಾರದ ಬಗ್ಗೆ ಗಮನ ಕೊಡಿ.
· ಅವಳೆದುರಿಗೆ ಸಿಟ್ಟು ಪ್ರದರ್ಶಿಸುವುದು, ಜೋರಾಗಿ ಮಾತನಾಡುವುದು ಮಾಡಬೇಡಿ.
· ಮುಖ್ಯವಾಗಿ ಅವಳ ಸಣ್ಣ ಪುಟ್ಟ ಆತಂಕಗಳಿಗೂ ಕಿವಿಯಾಗಿ. ಸಾಂತ್ವನ ಹೇಳಿ.
· ಮನೆಯಲ್ಲಿ ಆದಷ್ಟು ಸಂತೋಷದ ವಾತಾವರಣವಿರುವಂತೆ ನೋಡಿಕೊಳ್ಳಿ.
· ಹೆರಿಗೆಯಾಗುವ ಸಂದರ್ಭದಲ್ಲೂ ಆಕೆಯ ಜತೆಗೇ ಇರಿ.
ನೆನಪಿಡಿ. ಹೆಣ್ಣಿನ ಮನಸ್ಸು ಈ ಸಂದರ್ಭದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತದೆ. ಗಂಡ ಗರ್ಭಿಣಿಯಾಗಿರುವಾಗ ತನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೋ ಅವರ ಸಂಬಂಧವೂ ಅಷ್ಟೇ ಚೆನ್ನಾಗಿರುತ್ತದೆ. ಮಗುವಿನ ಆಗಮನ ಎನ್ನುವುದು ಗಂಡ-ಹೆಂಡಿರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ದೂರ ಮಾಡುವ ಅವಕಾಶವಾಗಿರುತ್ತದೆ. ಹೊಸ ಸಂಬಂಧದ ಚಿಗುರಿಗೆ ಕಾರಣವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ