Select Your Language

Notifications

webdunia
webdunia
webdunia
webdunia

ಉಗುರು ಕಚ್ಚುವ ಅಭ್ಯಾಸವೇ? ಬಿಡಲು ಹೀಗೆ ಮಾಡಿ

ಉಗುರು ಕಚ್ಚುವ ಅಭ್ಯಾಸವೇ? ಬಿಡಲು ಹೀಗೆ ಮಾಡಿ
Bangalore , ಬುಧವಾರ, 28 ಡಿಸೆಂಬರ್ 2016 (06:57 IST)
ಬೆಂಗಳೂರು: ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ.


ಉಗುರು ಕಚ್ಚುವುದು ಕ್ಯಾಲ್ಶಿಯಂ ಕೊರತೆಯ ಲಕ್ಷಣ ಎನ್ನುವವರೂ ಇದ್ದಾರೆ. ಅದೇನೇ ಇದ್ದರೂ ಈ ದುಶ್ಚಟ ಬಿಡುವ ಸರಳ ಉಪಾಯ ಏನಿದೆ ನೋಡೋಣ.

ನಮಗೆ ನೆನಪಿರಬಹುದು. ಚಿಕ್ಕ ಮಗುವಾಗಿದ್ದಾಗ ತಾಯಿ ಎದೆ ಹಾಲು ಬಿಡಿಸಲು ಕಹಿ ಸವರುವ ಉಪಾಯ. ಅದನ್ನೇ ಇಲ್ಲೂ ಅಳವಡಿಸಿಕೊಳ್ಳಬಹುದು. ಕೈಗೆ ನೈಲ್ ಪಾಲಿಶ್ ಅಥವಾ ಕಹಿಯಾದ ವಸ್ತುವನ್ನೇನಾದರೂ ಸವರಿಕೊಳ್ಳುವುದು ಉತ್ತಮ ಉಪಾಯ.

ಆಗಾಗ ಉಗುರು ನೀಟ್ ಆಗಿ ಕತ್ತರಿಸಿಕೊಂಡರೆ ಕಚ್ಚುವ ಪ್ರಮೇಯವೇ ಬರದು. ಇನ್ನೊಂದು ಉತ್ತಮ ಕೆಲಸವೆಂದರೆ, ನಿಮ್ಮಷ್ಟಕ್ಕೆ ನೀವೇ ದೃಢ ನಿರ್ಧಾರ ಮಾಡಿಕೊಳ್ಳಬೇಕು. ಪ್ರತೀ ಬಾರಿ ನಿಮ್ಮ ಬೆರಳು ಬಾಯಿಯ ಹತ್ತಿರಕ್ಕೆ ಹೋದಾಗಲೂ ಇಲ್ಲ ನಾನು ಉಗುರು ಕಚ್ಚುವುದನ್ನು ಬಿಡುತ್ತೇನೆ ಎಂಬ ಪ್ರತಿಜ್ಞೆ ನೆನಪಾಗಬೇಕು.

ಹೆಚ್ಚಾಗಿ ಮಾಡಲು ಕೆಲಸವಿಲ್ಲದೇ ಕೂತಾಗ, ಇಲ್ಲವೇ ತೀವ್ರ ಒತ್ತಡದಲ್ಲಿದ್ದಾಗ ಉಗುರು ಕಚ್ಚುವುದನ್ನು ರೂಢಿಸಿಕೊಳ್ಳುತ್ತೇವೆ. ಇದು ಒತ್ತಡದಿಂದ ಹೊರಬರುವ ಒಂದು ಕ್ರಿಯೆ ಅಷ್ಟೇ. ಅದರ ಬದಲು ಒತ್ತಡದಿಂದ ಹೊರಬರಲು ಬೇರೆ ದಾರಿ ಹುಡುಕಿಕೊಳ್ಳಿ. ಇದು ಮೊದಲಿಗೆ ಕಷ್ಟವಾದರೂ, ನಂತರ ಅದರಿಂದ ಸಿಗುವ ಪ್ರಯೋಜನಗಳು ಗೊತ್ತಾಗಬಹುದು.

ಉಗುರು ಕಚ್ಚುವುದರಿಂದ ದೇಹದ ಮೇಲಾಗುವ ಪರಿಣಾಮಗಳೂ ಅಷ್ಟೇ ಗಂಭೀರ. ಉಗುರಿನಲ್ಲಿರುವ ಕಶ್ಮಲ ಹೊಟ್ಟೆ ಸೇರುವುದರಿಂದ ಜಂತು ಹುಳದ ತೊಂದರೆ ಅನುಭವಿಸಬೇಕಾದೀತು. ಉಗುರಿನ ಸುತ್ತಲಿನ ಚರ್ಮ ಅಂದಗೆಡುವುದು ಮಾತ್ರವಲ್ಲ, ಊದಿಕೊಂಡಂತೆ ಆಗಬಹುದು.

ಅಲ್ಲದೆ ಉಗುರು ಕಚ್ಚುವುದರಿಂದ ಹಲ್ಲು ಬಲಹೀನವಾಗಬಹುದು ಮತ್ತು ಅಂದಗೆಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕೈ ಬೆರಳುಗಳು ಅಂದಗೆಡುವುದು ಮಾತ್ರವಲ್ಲ, ನೋಡುಗರಿಗೆ ಅಸಹ್ಯವಾಗಿ ಕಾಣಬಹುದು. ಹಾಗಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬಿಡುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಫೀಸಿನಲ್ಲಿ ನೀವ್ ಹೀಗಿದ್ರೆ ಚೆನ್ನ