ಬೆಂಗಳೂರು: ಸಾಮಾನ್ಯವಾಗಿ ದಾಸವಾಳ ಹೂವಿನ ಬಗ್ಗೆ ನಮಗೆ ಅಸಡ್ಡೆಯಿದೆ. ಇದನ್ನು ಮುಡಿದುಕೊಳ್ಳಲು ಹೆಣ್ಣು ಮಕ್ಕಳು ಇಷ್ಟಪಡುವುದಿಲ್ಲ. ಕೇವಲ ಪೂಜೆಗೆ ಬಳಕೆಯಾಗುವ ಹೂವೆಂದುಕೊಂಡಿದ್ದೇವೆ. ಆದರೆ ಹೆಚ್ಚಿನ ಆಯುರ್ವೇದ ಔಷಧಿಗಳಲ್ಲಿ ದಾಸವಾಳ ಹೂವಿನ ಬಳಕೆ ಹೆಚ್ಚು. ಕಾರಣ, ಇದರಲ್ಲಿ ಸಾಕಷ್ಟು ಉಪಯುಕ್ತ ಅಂಶಗಳಿವೆ.
ದಾಸವಾಳ ತಂಪು ಎನ್ನುವ ಕಾರಣಕ್ಕೆ ಹಿಂದಿನ ಕಾಲದಲ್ಲಿ ಇದರ ಕಾಂಡದ ಸಿಪ್ಪೆಯನ್ನು ನೀರಿನಲ್ಲಿ ನೆನೆ ಹಾಕಿ ತಲೆ ಸ್ನಾನ ಮಾಡುವಾಗ ಬಳಸುತ್ತಿದ್ದರು. ಇನ್ನೂ ಅನೇಕ ಕಾರಣಕ್ಕೆ ಮನೆ ಔಷಧವಾಗಿ ಇದನ್ನು ಬಳಕೆ ಮಾಡಲಾಗುತ್ತದೆ.
ದಾಸವಾಳ ಹೂವಿನ ಎಸಳನ್ನು ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಕುದಿಸಿ, ಇದರ ನೀರು ಕುಡಿಯುವುದರಿಂದ ಮೈ ಕೈ ನೋವಿಗೆ ಪರಿಹಾರ ನೀಡುತ್ತದೆ. ಹಳ್ಳಿ ಕಡೆಗಳಲ್ಲಿ ಕೆಲವರು ಸೊಂಟ ನೋವಿಗೆ ದಾಸವಾಳ ಹೂವಿನ ಇಡ್ಲಿ ಮಾಡಿ ಸೇವಿಸುತ್ತಾರೆ. ಇದಕ್ಕೆ ರಕ್ತದೊತ್ತಡ ನಿಯಂತ್ರಿಸುವ ಶಕ್ತಿಯಿದೆ.
ಇದೇ ರೀತಿ ದಾಸವಾಳ ಹೂವಿನ ಎಸಳನ್ನು ಕುದಿಸಿ ಅದರ ನೀರು ಕುಡಿಯುವುದರಿಂದ ಮನೋ ಲಹರಿ ನಿಯಂತ್ರಣದಲ್ಲಿರುವುದಲ್ಲದೆ, ಮಾನಸಿಕ ಒತ್ತಡವೂ ಕಂಟ್ರೋಲ್ ನಲ್ಲಿರುತ್ತದೆ. ಕೂದಲಿನ ಆರೋಗ್ಯದ ಜತೆಗೆ ಚರ್ಮದ ಆರೋಗ್ಯ ರಕ್ಷಣೆಗೆ ದಾಸವಾಳ ಹೂವನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಬಿಸಿ ಮಾಡಿ ಹಚ್ಚುವುದು ಉತ್ತಮ ಉಪಾಯ. ತಲೆಗೂದಲಿಗೆ ಬಳಸುವ ಹಲವು ಕಂಡೀಶನರ್ ಗಳಲ್ಲೂ ದಾಸವಾಳ ಹೂವಿನ ಬಳಕೆಯಾಗಿದೆ.
ಹಾಗಿದ್ದರೆ ತಡ ಏಕೆ? ಅಂಗಳದಲ್ಲಿ ಒಂದು ದಾಸವಾಳ ಹೂವಿನ ಗಿಡವಿದ್ದರೆ ಅದರ ಸದುಪಯೋಗಪಡಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ