ಬಹಳಷ್ಟು ಜನರು ತಮ್ಮ ದೇಹದ ಅತಿಯಾದ ತೂಕವನ್ನು ಬೇಗನೆ ಕಡಿಮೆ ಮಾಡಿಕೊಳ್ಳಲು ತುಂಬಾ ಮಾರ್ಗಗಳನ್ನು ಅನುಸರಿಸುತ್ತಾರೆ. ಅದರಲ್ಲಿ ತಮಗೆ ಹಸಿವಾದರೂ ಎಲ್ಲಿ ನಾವು ಜಾಸ್ತಿ ಕ್ಯಾಲೋರಿಗಳ ಆಹಾರ ಪದಾರ್ಥಗಳನ್ನು ತಿಂದು ಬಿಡುತ್ತೇವೆ, ಅದರಿಂದಾಗಿ ಎಲ್ಲಿ ತಮ್ಮ ದೇಹದ ತೂಕ ಕಡಿಮೆಯಾಗುವುದಿಲ್ಲ ಎಂದು ಹೆದರಿ ಊಟ ಮಾಡದೆ ಹಾಗೆಯೇ ಇರುತ್ತಾರೆ.
ಹೀಗೆ ಊಟ ಬಿಟ್ಟು, ಕಡಿಮೆ ತಿಂದು ಹಸಿವಿನಿಂದ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಆಗುವುದಿಲ್ಲ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ನೀವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಿರಿ.
ತುಂಬಾ ಹಸಿವಿನಿಂದ ಇರಬೇಡಿ
ಹಸಿವಿನಿಂದ ನಿಮ್ಮನ್ನು ನೀವು ವಂಚಿಸಿಕೊಂಡರೆ ಅದು ನಿಮ್ಮ ತೂಕ ಕಡಿಮೆ ಮಾಡದೆ, ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ತರಬಲ್ಲದು. ನಿಮ್ಮ ದೇಹದ ತೂಕ ಇಳಿಸುವಾಗ ನೀವು ತೆಗೆದುಕೊಳ್ಳುವ ಆಹಾರದ ಪ್ರಮಾಣವು ಕಡಿಮೆಯಾಗಬಾರದು ಮತ್ತು ನೀವು ಮಾಡುವ ವ್ಯಾಯಾಮದ ಪ್ರಮಾಣದಲ್ಲಿಯೂ ಕಡಿಮೆ ಆಗಬಾರದು.
ಇದರಲ್ಲಿ ಯಾವುದು ಹೆಚ್ಚು ಕಮ್ಮಿಯಾದರೂ ನಿಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತೀರಿ.
ಉಪವಾಸ ಮಾಡುವುದು- ಹಸಿವಿನಿಂದ ಬಳಲುವುದು ಎರಡು ಬೇರೆ
ಬಹಳಷ್ಟು ಜನರು ಉಪವಾಸ ಮಾಡುವುದು ಮತ್ತು ಹಸಿವು ಹಿಡಿದಿಟ್ಟುಕೊಳ್ಳುವುದು ಒಂದೇ ಎಂದು ತಿಳಿದುಕೊಂಡಿದ್ದಾರೆ. ಉಪವಾಸ ಇದ್ದಾಗ ನೀವು ನಿಯಮಿತವಾಗಿ ದೇಹಕ್ಕೆ ಆಗಾಗ ಕೆಲವು ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುತ್ತೀರಿ, ಆದರೆ ತೂಕ ಕಡಿಮೆ ಮಾಡಿಕೊಳ್ಳುವ ಭರದಲ್ಲಿ ನೀವು ದೇಹಕ್ಕೆ ಆಹಾರ ತೆಗೆದುಕೊಳ್ಳದೆ ವಂಚಿಸಿಕೊಳ್ಳುತ್ತೀರಿ.ಇದರಿಂದಾಗಿ ನಿಮ್ಮ ದೇಹಕ್ಕೆ ಕ್ಯಾಲೋರಿಗಳ ಕೊರತೆಯ ಸಮಸ್ಯೆಯೂ ಎದುರಿಸಬಹುದಾಗಿದೆ. ಇದರಿಂದಾಗಿ ನಿಮ್ಮ ಆರೋಗ್ಯವೂ ಕೆಡಬಹುದಾಗಿದೆ.
ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ
ದೇಹಕ್ಕೆ ಅಗತ್ಯವಿರುವಂತಹ ಆಹಾರ ಪದಾರ್ಥಗಳನ್ನು ನೀವು ಸೇವಿಸಲೇಬೇಕು. ನಿಮಗೆ ಬೇಕಾದಷ್ಟು ಕ್ಯಾಲೋರಿಗಳನ್ನು ನೀವು ಸೇವಿಸಲೇಬೇಕು. ಇಲ್ಲದೆ ಹೋದರೆ ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ನಿಧಾನಗೊಳಿಸಿ ನಿಮ್ಮ ಆರೋಗ್ಯ ಕೆಡಿಸುತ್ತದೆ. ಇದರಿಂದ ನೀವು ನಿಮ್ಮ ದೇಹದ ತೂಕವನ್ನು ಬೇಗನೆ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ನಿಮಗೆ ಆಯಾಸವಾಗಬಹುದು
ದೇಹಕ್ಕೆ ಬೇಕಾದಂತಹ ಪೋಷಕಾಂಶಗಳನ್ನು ಒದಗಿಸದೆ ಇರುವುದರಿಂದ ನೀವು ದೀರ್ಘಕಾಲದ ಆಯಾಸಕ್ಕೆ ಬಲಿಯಾಗಬಹುದು. ನೀವು ರಾತ್ರಿಯಿಡಿ ಚೆನ್ನಾಗಿ ನಿದ್ದೆ ಮಾಡಿದರೂ ನಿಮಗೆ ದಿನವಿಡೀ ಆಯಾಸ ಎನ್ನಿಸಬಹುದು. ಅದಕ್ಕಾಗಿ ಪೋಷಕಾಂಶಗಳಿರುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ ಮತ್ತು ವ್ಯಾಯಾಮ ಮಾಡಿ.
ಬೇರೆ ಆರೋಗ್ಯ ಸಮಸ್ಯೆಗಳು ಬರಬಹುದು
ನೀವು ಹಸಿವಿನಿಂದ ಬಳಲುತ್ತಿದ್ದರೆ ಇದು ನಿಮ್ಮನ್ನು ಮನಸಿಕವಾಗಿ ದುರ್ಬಲಗೊಳಿಸುತ್ತದೆ, ಅಲ್ಲದೆ ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಮಹಿಳೆಯರಲ್ಲಿ ಋತುಚಕ್ರದಲ್ಲಿ ಬದಲಾವಣೆ ಆಗುವುದು ಮತ್ತು ಉಸಿರಾಟ ಹಾಗೂ ಹೃದಯ ಬಡಿತ ನಿಧಾನವಾಗಬಹುದು.
ಮಾನಸಿಕ ಆರೋಗ್ಯ ಹಾಳಾಗಬಹುದು
ಆಹಾರ ಪದಾರ್ಥಗಳು ನಿಮ್ಮ ದೇಹವನ್ನು ಸದೃಢವಾಗಿರಿಸುವುದರೊಂದಿಗೆ ಮಾನಸಿಕ ಆರೋಗ್ಯ ಕಾಪಾಡುತ್ತದೆ. ನೀವು ಸುಮ್ಮನೆ ತೂಕ ಇಳಿಸಿಕೊಳ್ಳುವ ಆಸೆಯಿಂದ ಹಸಿವಿನಿಂದ ಬಳಲಿದರೆ ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಬಹುದಾಗಿದೆ. ಹಸಿವಿನಿಂದ ಬಳಲಿದರೆ ನೀವು ಖಿನ್ನತೆ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗಬೇಕಾಗುತ್ತದೆ