Select Your Language

Notifications

webdunia
webdunia
webdunia
webdunia

ನೀವೂ ಇಂಟರ್ನೆಟ್ ಚಟದ ದಾಸರೇ? ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ?

ನೀವೂ ಇಂಟರ್ನೆಟ್ ಚಟದ ದಾಸರೇ? ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತೆ  ಗೊತ್ತಾ?
ದೆಹಲಿ , ಗುರುವಾರ, 23 ಜೂನ್ 2016 (12:08 IST)
ಇಂಟರ್ನೆಟ್ ಎಂಬುದು ಚಟವಾಗಿ ಮಾರ್ಪಟ್ಟರೆ ಅದರಿಂದಾಗುವ ಅನಾಹುತಗಳೇನು ಎಂಬ ಬಗೆಗೀಗ ಚಿಂತಿಸಲಾಗುತ್ತಿದೆ. ಅಪರಿಮಿತ ಆಫರ್‌ಗಳೊಂದಿಗೆ ಹಲವಾರು ಕಂಪನಿಗಳು ಅತಿ ವೇಗದ ಬ್ರಾಡ್‌ಬ್ಯಾಂಡ್ ಮುಂತಾದ ಸಂಪರ್ಕಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತವೆ. ಕಂಪ್ಯೂಟರ್‌ ಎಂಬುದೀಗ ಸಾಮಾನ್ಯವಾಗಿರುವಾಗ ಮಕ್ಕಳು ಸುಲಭವಾಗಿ ಇದರ ದಾಸರಾಗುತ್ತಿದ್ದಾರೆ. ಬರಬರುತ್ತಾ ಕಂಪ್ಯೂಟರ್-ಇಂಟರ್ನೆಟ್ ಇಲ್ಲದೆ ಮಕ್ಕಳು ಚಡಪಡಿಸುವುದನ್ನೂ ನಾವು ಕಂಡಿದ್ದೇವೆ. 

ಅಲ್ಲಿ ಗೇಮ್ಸ್, ಬ್ಲಾಗಿಂಗ್, ಅಶ್ಲೀಲ ಚಿತ್ರ ವೀಕ್ಷಣೆ ಮುಂತಾದುವುಗಳಿಗೇ ಹೆಚ್ಚಿನ ಗಮನ ಕೊಟ್ಟು ಕಾಲಹರಣ ಮಾಡುವುದನ್ನು ಹೆತ್ತವರು ಕೂಡ ನಿರ್ಲಕ್ಷ್ಯ ಮಾಡುತ್ತಾರೆ. ಕ್ರಮೇಣ ಮಕ್ಕಳು ಮಂದಸ್ಮಿತರಾಗಿ ಏಕಾಗ್ರತೆ ಕಳೆದುಕೊಂಡು ಅನ್ಯಮನಸ್ಕರಾಗುತ್ತಾರೆ ಎಂಬ ಅಧ್ಯಯನವನ್ನು ಈ ಹಿಂದೆ ಓದಿದ್ದೇವೆ. 
 
ಇವು ಕೇವಲ ಮಕ್ಕಳಲ್ಲಿ ಮಾತ್ರವಲ್ಲದೆ ಯುವಕರು, ಮಧ್ಯವಯಸ್ಕರನ್ನೂ ಬಾಧಿಸುತ್ತಿದೆ. ಈಗ ಸಾಮಾನ್ಯ ಮೊಬೈಲುಗಳಲ್ಲಿಯೂ ಇಂಟರ್ನೆಟ್ ಲಭ್ಯವಿರುವುದರಿಂದ ಚಟದ ಪ್ರಮಾಣ ಹೆಚ್ಚುತ್ತಿದೆ. ಇಂಟರ್ನೆಟ್ ಹೊಂದಿದ ಮೊಬೈಲ್ ಇದ್ದವರು ಪಕ್ಕದವರೊಂದಿಗೆ ಮಾತನಾಡುವುದನ್ನು 
 
ಮರೆತು ಇಂಟರ್ನೆಟ್ ವೀಕ್ಷಣೆಯಲ್ಲೇ ಹೆಚ್ಚು ಮಗ್ನರಾಗಿರುವುದು ಸಾಮಾನ್ಯ. ಈಗ ಇಂಟರ್ನೆಟ್ ಚಟವನ್ನು ಚೀನಾದಲ್ಲಿ ರೋಗ ಎಂದು ಪರಿಗಣಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆಯ ಅಗತ್ಯವನ್ನು ಒತ್ತಿ ಹೇಳಲಾಗುತ್ತಿದೆ.

 
 
 
 

ಇಂತಹ ಚಟದ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಚೀನಾ ಸರಕಾರ ಅದನ್ನೊಂದು ಗುಣಪಡಿಸಬಹುದಾದ ಖಾಯಿಲೆ ಎಂದು ಹೇಳಿದೆ. ಚೀನಾದಲ್ಲಿ ಇಂಟರ್ನೆಟ್ ಚಟವನ್ನು ಚಿಕಿತ್ಸಾ ಖಾಯಿಲೆಯ ಸಾಲಿಗೆ ಕೆಟ್ಟ ಚಟ ಎಂದು ಸೇರಿಸಲಾಗಿದೆ. ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್ (IAD) ಎಂದು ಹೆಸರಿಸಿರುವ ಈ ಚಟದ ಬಗ್ಗೆ ಒಂದು ಕೈಪಿಡಿಯನ್ನು ಹೊರತರಲಾಗಿದ್ದು, ಬೀಜಿಂಗ್‌ನ ಮಿಲಿಟರಿ ಆಸ್ಪತ್ರೆಯ ತಜ್ಞರುಗಳ ಅವಿರತ ಶ್ರಮದಿಂದ ಈ ಚಟದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮಾನಸಿಕ ತಜ್ಞರ ನೆರವಿನೊಂದಿಗೆ ನೀಡಿದೆ.
 
ಅದಕ್ಕಾಗಿ ಸುಮಾರು ನಾಲ್ಕು ವರ್ಷಗಳಿಂದ ಅಧ್ಯಯನ ನಡೆಸಲಾಗಿದೆ. ಐದು ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಇಂಟರ್ನೆಟ್ ಚಟ ಹೊಂದಿರುವ ಸುಮಾರು 1300 ಮಂದಿಯನ್ನು ಅಧ್ಯಯನಕ್ಕೆ ಬಳಸಿಕೊಂಡು ಫಲಿತಾಂಶ ಪಡೆದಿದ್ದಾರೆ ಚೀನಾದ ಮಾನಸಿಕ ತಜ್ಞರು. ಇಲ್ಲಿ ನೀಡಿರುವ ಚಿಕಿತ್ಸಾ ವಿಧಾನದಿಂದ ಶೇಕಡಾ 80ರಷ್ಟು ಇಂಟರ್ನೆಟ್ ಚಟ ಹೊಂದಿದವರನ್ನು ಕೇವಲ ಮ‌ೂರು ತಿಂಗಳಲ್ಲಿ ಗುಣಪಡಿಸಲಾಗಿದೆ.
 
ಕೆಲಸದ ಅಥವಾ ವಿದ್ಯಾಭ್ಯಾಸದ ನೆಪ ಹೇಳಿ ದಿನದಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ಆನ್‌ಲೈನಿನಲ್ಲಿ ಕಾಲಹರಣ ಮಾಡುವುದು ಮತ್ತು ಆನ್‌ಲೈನಿಗೆ ಹೋಗಲಾಗದಿದ್ದಾಗ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ಹೊಂದಿರುವುದು ಐಎಡಿಯ ಪ್ರಮುಖ ಎರಡು ಲಕ್ಷಣಗಳು ಎಂಬುದು ಅಧ್ಯಯನಕಾರರ ಅಭಿಪ್ರಾಯ.
 
ಈ ಕೈಪಿಡಿಯ ಪ್ರಕಾರ, ಐಎಡಿ ಬಾಧಿತ ಯುವರೋಗಿಗಳು ಸಾಮಾನ್ಯವಾಗಿ ಐದು ಪ್ರಮುಖ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಆನ್‌ಲೈನ್ ಗೇಮ್ಸ್, ಅಶ್ಲೀಲ ಚಿತ್ರಗಳ ವೀಕ್ಷಣೆ, ಮಿತಿಮೀರಿದ ಸಂಪರ್ಕ ಯತ್ನ, ಅತಿಯಾದ ಇಂಟರ್ನೆಟ್ ಶಾಪಿಂಗ್ ಮತ್ತು ಸಾಮಾನ್ಯ ವೀಕ್ಷಣೆ.
 
"ಜೂಜು ಅಥವಾ ಮದ್ಯದ ಚಟದಂತೆ ಐಎಡಿಯನ್ನು ಚಿಕಿತ್ಸಾ ಖಾಯಿಲೆ ಎಂದು ಮೊದಲು ಪತ್ತೆ ಹಚ್ಚಿರುವುದು ಚೀನಾ" ಎಂದು ಅಧ್ಯಯನ ತಂಡದ ತಜ್ಞೆ ತಾವೊ ರಾನ್ ತಿಳಿಸಿದ್ದಾರೆ.
 
ಚೀನಾ ಸರಕಾರವೇ ಹೇಳುವ ಪ್ರಕಾರ ಸುಮಾರು 253 ಮಿಲಿಯನ್ ಜನ ಇಂಟರ್ನೆಟ್ ಉಪಯೋಗ ಪಡೆಯುತ್ತಿದ್ದಾರೆ. ಅವರಲ್ಲಿ ನಾಲ್ಕು ಮಿಲಿಯನ್ ಜನ ಇಂಟರ್ನೆಟ್ ಚಟ ಅಂಟಿಸಿಕೊಂಡಿದ್ದು, ಅವರೆಲ್ಲ 18ರ ಕೆಳಗಿನವರು. ಒಂದು ಅಧ್ಯಯನದ ಪ್ರಕಾರ ಶೇಕಡಾ 42ರಷ್ಟು ಯುವಜನತೆ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಮೆರಿಕಾದಲ್ಲಿ ಇದೇ ಲೆಕ್ಕಾಚಾರದ ಪ್ರಕಾರ ಹುಡುಕಿದರೆ ಸಿಗುವುದು ಕೇವಲ ಶೇಕಡಾ 18 ಮಾತ್ರ ಎಂದು ಹೇಳಲಾಗಿದೆ.
 
ಇಂಟರ್ನೆಟ್ ನೋಡದೆ ನಿಮಗೆ ಹಿಂಸೆಯೆನಿಸುತ್ತಿದೆಯೇ? ಏನೋ ಕಳೆದುಕೊಂಡಂತೆ ಚಡಪಡಿಕೆ ಉಂಟಾಗುತ್ತಿದೆಯೇ? ಹಾಗಾದರೆ ನೀವೂ ವೈದ್ಯರ ಸಹಾಯ ಪಡೆದುಕೊಳ್ಳುವ ಸಮಯ ಬಂದಿದೆಯೇ? ಇನ್ನು ಕೆಲವೇ ವರ್ಷಗಳಲ್ಲಿ ನಮ್ಮಲ್ಲೂ ಈ ಚಿಕಿತ್ಸೆ ಲಭ್ಯವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ನಿದ್ದೆ ಬರುತ್ತಿಲ್ಲವೆ ? ಹೀಗೆ ಮಾಡಿ