ಸೀಸದ ಅಂಶವು ಅಧಿಕ ಪ್ರಮಾಣದಲ್ಲಿ ದೇಹವನ್ನು ಪ್ರವೇಶಿಸಿದರೆ ನರಮಂಡಲದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆಂಬ ಅಂಶ ರುಜುವಾತಾಗಿದೆ. ಮಕ್ಕಳಿಗೆ ಬಣ್ಣದ ಗೊಂಬೆಗಳನ್ನು ಆಟವಾಡಲು ಕೊಡುವಾಗ ಅವು ಬಾಯಲ್ಲಿ ಗೊಂಬೆಗಳನ್ನು ಕಚ್ಚದಂತೆ ಜಾಗ್ರತೆ ವಹಿಸಬೇಕಾಗುತ್ತದೆ.
ಗೊಂಬೆಗಳಲ್ಲಿರುವ ಬಣ್ಣದ ಕೋಟಿಂಗ್ನಲ್ಲಿ ಸೀಸದ ಅಂಶವಿದ್ದರೆ ಅದರಿಂದ ನರಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಗೊಂಬೆಗಳಲ್ಲಿ ಅಧಿಕ ಪ್ರಮಾಣದ ಸೀಸದ ಅಂಶವಿರುವ ಕಾರಣದ ಮೇಲೆ ಅಮೆರಿಕ 5,50,000 ಚೀನ ನಿರ್ಮಿತ ಗೊಂಬೆಗಳನ್ನು ಹಿಂತಿರುಗಿಸಿದೆಯೆಂದು ವರದಿಯಾಗಿದೆ.
ವಿನೈಲ್ ಪ್ಲಾಸ್ಟಿಕ್ನಿಂದ ತಯಾರಿಸಿದ ಮಕ್ಕಳ ಆಟದ ಗೊಂಬೆಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸದ ಅಂಶವಿರುವುದು ಪತ್ತೆಯಾಯಿತು. ಸುಮಾರು 50 ಪ್ಲಾಸ್ಟಿಕ್ ಬೊಂಬೆಗಳ ರಾಂಡಮ್ ಪರೀಕ್ಷೆ ಮಾಡಿದಾಗ 11 ಬೊಂಬೆಗಳಲ್ಲಿ ಸೀಸದ ಅಂಶ ಕಂಡುಬಂತು.
10 ಗೊಂಬೆಗಳು ಪಾಲಿವಿನೈಲ್ ಕ್ಲೋರೈಡ್ನಿಂದ ತಯಾರಿಸಲಾಗಿದ್ದು, ಮೂರು ಗೊಂಬೆಗಳಲ್ಲಿ ಅತ್ಯಧಿಕ ಮಟ್ಟದ ಸೀಸದ ಅಂಶ ಪತ್ತೆಯಾಗಿದೆ ಎಂದು ಆರೋಗ್ಯ, ಪರಿಸರ ಮತ್ತು ನ್ಯಾಯ ಕೇಂದ್ರದ ಪ್ರಚಾರಕ ಮೈಕ್ ಸ್ಕಾಡೆ ತಿಳಿಸಿದರು.
ಬಣ್ಣದ ಕೋಟಿಂಗ್ಗಳಲ್ಲಿ ಸೀಸದ ಮಾಲಿನ್ಯವಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಚೀನದ ಗೊಂಬೆಗಳನ್ನು ಈ ಬೇಸಿಗೆಯಲ್ಲಿ ಕೂಡ ವಾಪಸು ಕಳುಹಿಸಲಾಗಿತ್ತು. ಗೊಂಬೆಗಳ ರಾಂಡಮ್ ಪರೀಕ್ಷೆಯನ್ನು ಪರಿಸರ ಮತ್ತು ಗ್ರಾಹಕ ತಂಡಗಳು ಆಯೋಜಿಸಿದ್ದು, ಪಾಲಿವಿನೈಲ್ ಕ್ಲೋರೈಡ್ ಹೊಂದಿರುವ ಗೊಂಬೆಗಳನ್ನು ವಾಪಸು ಕಳಿಸಲು ಕರೆ ನೀಡಿತ್ತು
.
ಇತ್ತೀಚೆಗೆ ಸಾಕುಪ್ರಾಣಿಗಳ ಆಹಾರದಲ್ಲಿ ಮೆಲಾಮೈನ್ ಅಂಶವಿರುವುದು ಪತ್ತೆಯಾಗಿ ಹಿಂತೆಗೆದುಕೊಳ್ಳಲಾಗಿತ್ತು. ಸುಮಾರು 20 ದಶಲಕ್ಷ ಮಕ್ಕಳ ಆಭರಣಗಳಲ್ಲಿ ಕೂಡ ಸೀಸದ ಅಂಶ ಕಂಡುಬಂದಿದ್ದರಿಂದ ವಾಪಸು ಮಾಡಲಾಗಿದೆ.
ಸೀಸದ ಗೊಂಬೆಯನ್ನು ಮಕ್ಕಳು ಬಾಯಿಯಲ್ಲಿ ಕಚ್ಚುವುದರಿಂದ ಅಥವಾ ಆಟವಾಡುವುದರಿಂದ ಸೀಸದ ಅಂಶವು ದೇಹಕ್ಕೆ ಪ್ರವೇಶಿಸಿ ನರಸಂಬಂಧಿ ಸಮಸ್ಯೆಗಳು ಉಂಟಾಗಬಹುದೆಂದು ಹೇಳಲಾಗಿದೆ. 1970ರ ದಶಕದಲ್ಲಿ ಅಮೆರಿಕದಲ್ಲಿ ಮಕ್ಕಳ ಗೊಂಬೆಗಳಿಗೆ ಹಾಕುವ ಬಣ್ಣದಲ್ಲಿ ಸೀಸವನ್ನು ನಿಷೇಧಿಸಲಾಗಿತ್ತು.
ಚೀನದಿಂದ ಅತ್ಯಧಿಕ ಗೊಂಬೆಗಳನ್ನು ಆಮದು ಮಾಡಿಕೊಂಡಿದ್ದರಿಂದ ಸಮಸ್ಯೆ ಸೃಷ್ಯಿಯಾಗಿದೆ. ಅಮೆರಿಕದಲ್ಲಿ ಮಾರಾಟವಾಗುವ ಸುಮಾರು ಶೇ.80ರಷ್ಟು ಗೊಂಬೆಗಳು ಚೀನದಲ್ಲಿ ತಯಾರಾಗಿವೆ.