ವ್ಯಾಯಾಮ ಮಾಡಲೇಬೇಕು ಎಂಬುದಕ್ಕೆ ಈದೀಗ ಇನ್ನೊಂದು ಕಾರಣ ದೊರೆತಿದೆ, ವಯಸ್ಕರ ಮೇಲೆ ನಡೆಸಲಾದ ಸಂಶೋಧನೆಯ ಪ್ರಕಾರ ವ್ಯಾಯಾಮ ನಿಮ್ಮ ಹೃದಯವನ್ನು ಯೌವನಾವಸ್ಥೆಯಲ್ಲಿಯೇ ಇರುವಂತೆ ಮಾಡಬಲ್ಲುದು.
ವಾಷಿಂಗ್ಟನ್‌ನ ಸೈಂಟ್ ಲೂಯಿಸ್‌ನಲ್ಲಿರುವ ಯೂನಿವರ್ಸಿಟಿ ಸ್ಕೂಲ್ ಅಫ್ ಮೆಡಿಸಿನ್‌ನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ, ಒಂದು ವರ್ಷದ ತನಕ ಸಹಜ ವ್ಯಾಯಾಮಗಳನ್ನು ಮಾಡುತ್ತಿದ್ದರೆ ಹೃದಯ ಇನ್ನಷ್ಟು ಅರೋಗ್ಯಯುತವಾಗುತ್ತದೆ.
ಅಧ್ಯಯನದ ಪ್ರಕಾರ ಈ ರೀತಿ ವ್ಯಾಯಾಮ ಮಾಡುವುದರಿಂದ ಪುರುಷರಿಗಿಂತ ಮಹಿಳೆಯರಿಗೆ ಇದರಿಂದ ಹೆಚ್ಚು ಪ್ರಯೋಜನ ಇದೆ ಎಂಬುದು ತಿಳಿಸಿದೆ.
"ಜನರ ವಯಸ್ಸು ಹೆಚ್ಚಿದಂತೆ ಅವರ ಹೃದಯ ಕ್ಷೀಣಿಸುತ್ತದೆ ಮತ್ತು ಇದಕ್ಕೆ ಬಹುಪಾಲು ಅವರು ಹಿಂದಿನಷ್ಟು ಚಟುವಚಿಕೆಯಿಂದ ಕೂಡಿಲ್ಲದೆ ಇರುವುದೇ ಕಾರಣ" ಎನ್ನುತ್ತಾರೆ, ಹೃದಯಸಂಬಂಧಿ ವಿಭಾಗದ ಕಾರ್ಯನಿರ್ವಾಹಕ ಆಧಿಕಾರಿ ಪ್ಲಾಬೊ ಎಫ್ ಸೂಟೊ.
"ಈ ಹಿಂದಿನ ಅಧ್ಯಯನಗಳು ವ್ಯಾಯಾಮ ವಯಸ್ಸಾಗುವ ಪ್ರಕ್ರಿಯೆಯ ಕೆಲವು ಅಂಶಗಳನ್ನು ತಡೆಗಟ್ಟಬಲ್ಲದು ಎಂಬುದನ್ನು ಹೊರಗೆಡಹಿದ್ದವು, ಆದ್ದರಿಂದ ನಾವು ವಿಶೇಷವಾಗಿ ಇದು ಹೃದಯದ ಮೇಲೆ ಬೀರುವ ಪ್ರಭಾವವನ್ನು ಕಂಡುಹಿಡಿಯಲು ಬಯಸಿದ್ದೆವು" ಎಂದೂ ಎಫ್ ಸೂಟೊ ನುಡಿದರು.
ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಆರು ಜನ ಮಹಿಳೆಯರು ಹಾಗು ಆರು ಜನ ಪುರುಷರು, ಅವರ ವಯಸ್ಸು 60ರಿಂದ 75ವರ್ಷ. ಇವರುಗಳು ಅತಿಯಾದ ತೂಕ ಹೊಂದಿರಲಿಲ್ಲ ಆದರೆ ಚಟುವಟಿಕೆ ರಹಿತ ಜೀವನಕ್ರಮವನ್ನು ಹೊಂದಿದ್ದರು. ಇವರನ್ನು ತರಬೇತುಗಾರರ ಜಾಗರೂಕ ಮಾರ್ಗದರ್ಶನದಲ್ಲಿ 11 ತಿಂಗಳುಗಳ ಸಹಜವಾದ ವ್ಯಾಯಾಮ ಕಾರ್ಯಕ್ರಮದಡಿಯಲ್ಲಿ ಇರಿಸಲಾಯಿತು.
ಕೊನೆಯ ತೀರ್ಮಾನಕ್ಕೆ ತಲುಪಲು, ಅಧ್ಯಯನ ತಂಡದವರು ವಿಶ್ರಾಂತಿಯ ವೇಳೆ ಹಾಗು ಮನುಷ್ಯನ ಹೃದಯವು ಆತ ತೀವ್ರವಾದ ವ್ಯಾಯಾಮದಲ್ಲಿ ತೊಡಗಿಕೊಂಡಿರುವಂತೆ ಬಡಿದುಕೊಳ್ಳವಂತೆ ಮಾಡುವ ಡಬ್ಟಾಮಿನ್ ಎಂಬ ಔಷಧಿಯನ್ನು ನೀಡಿರುವ ಸಂದರ್ಭದಲ್ಲಿ, ಹೆಚ್ಚಾಗಿ ಕುಳಿತೇ ಕೆಲಸ ಮಾಡುವ ವಯಸ್ಕ ವ್ಯಕ್ತಿಗಳ ಹೃದಯದಲ್ಲಿ ಉಂಟಾಗುವ ಪರಿವರ್ತನೆಗಳನ್ನು ಮಾಪನ ಮಾಡಿದರು.
ಮೊದಲ ಮೂರು ತಿಂಗಳಿನಲ್ಲಿ ಅಧ್ಯಯನದಲ್ಲಿ ಭಾಗವಹಿಸಿದವರು ತಮ್ಮ ಸಾಮಥ್ಯಕ್ಕೆ ಅನುಗುಣವಾಗಿ 65 ಪ್ರತಿಶತದಷ್ಟು ವ್ಯಾಯಾಮವನ್ನು ಮಾಡಬೇಕಿತ್ತು. ಆನಂತರ ಅಧ್ಯಯನದ ಮುಂದಿನ ಹೆಜ್ಜೆಯಂತೆ ಅವರುಗಳು 75 ಪ್ರತಿಶತದಷ್ಟು ಅತ್ಯಧಿಕ ಮಟ್ಟವನ್ನು ತಲುಪಿದರು.
ಸಹನಶೀಲತೆಯ ವ್ಯಾಯಾಮ ಕ್ರಮಗಳಾದ ನಡೆಯುವುದು, ಓಡುವುದು ಅಥವಾ ಸೈಕಲಿಂಗ್ ಮುಂತಾದವುಗಳನ್ನು ವಾರದಲ್ಲಿ ಮೂರರಿಂದ ಐದು ದಿನಗಳಲ್ಲಿ, ಪ್ರತಿ ಅವಧಿಗೆ ಒಂದು ಗಂಟೆ ಕಾಲ ಒಳಗೊಂಡಾಗ ಭಾಗಿಗಳ ಹೃದಯವು, ಯುವ ಹೃದಯಗಳಂತೆ ಎರಡು ಪಟ್ಟು ಹೆಚ್ಚು ಗ್ಲೂಕೋಸ್ ಅನ್ನು ಒಳಗೆ ತೆಗೆದುಕೊಂಡಿತು.
ಸೂಟೊ ಅವರು ವಿವರಿಸುವ ಪ್ರಕಾರ ಹೆಚ್ಚಿನ ಶಕ್ತಿಯ ಬೇಡಿಕೆಗೆ ಅನುಗುಣವಾಗಿ ಹೃದಯ ಹೆಚ್ಚಿನ ಗ್ಲೂಕೋಸ್ ಅನ್ನು ತೆಗೆದುಕೊಳ್ಳದಿದ್ದರೆ ಅದು ಶಕ್ತಿ-ರಹಿತ ಸ್ಥಿತಿಗೆ ತಲುಪುತ್ತದೆ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಅದು ಹೆಚ್ಚಿನ ಗ್ಲೂಕೋಸ್ ಅನ್ನು ಬಳಸಿಕೊಂಡಲ್ಲಿ ಹೃದಯವು ಹೃದಯಾಘಾತದಿಂದ ಹೆಚ್ಚು ಸುರಕ್ಷಿತವಾಗಿರುತ್ತದೆ.