ಜೀವಕ್ಕೇ ಮಾರಕವಾಗಿರುವ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಇದೀಗ ಕೇವಲ ಕೆಲವೇ ನಿಮಿಷಗಳಲ್ಲಿ ಪತ್ತೆ ಹಚ್ಚಬಹುದಾಗಿದೆ. ವಿಜ್ಞಾನಿಗಳು ಜೀವ-ಸಂವೇದನಾ (ಬಯೋ-ಸೆನ್ಸರ್) ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ಕ್ಯಾನ್ಸರ್ ರೋಗವನ್ನು ಹದಿನೈದು ನಿಮಿಷಗಳೊಳಗೆ ಪತ್ತೆ ಹಚ್ಚಬಹುದು.
ಈ ತಂತ್ರಜ್ಞಾನದ ಪ್ರಕಾರ, ಮಾನವನ ದೇಹದಲ್ಲಿ ರೋಗ ಗುರುತಿಸುವ ಬಯೋಮಾರ್ಕರ್‌ಗಳೆಂಬ ಕಣಗಳನ್ನು ಪತ್ತೆ ಹಚ್ಚಲು ಜೀವಾಣುನಿರೋಧಕಗಳನ್ನು ಬಳಸಲಾಗುತ್ತದೆ. ಅವು ಈಗಿರುವ ತಪಾಸಣಾ ತಂತ್ರಗಳಿಗಿಂತ ಅತ್ಯಂತ ವೇಗವಾಗಿ ಕೆಲಸ ಮಾಡುತ್ತವೆ ಎಂದು ಲೀಡ್ಸ್ ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಸಿಬ್ಬಂದಿ, ಸಹ ಸಂಶೋಧಕ ಪೌಲ್ ಮಿಲ್ನರ್ ಹೇಳುತ್ತಾರೆ.
ಈ ತಂತ್ರಜ್ಞಾನವನ್ನು ಪುಟ್ಟ ಮೊಬೈಲ್ ಫೋನಿನಂತಹ ಸಾಧನಕ್ಕೆ ಅಳವಡಿಸಿ, ಯಾವ ರೋಗಕ್ಕೆ ಪರೀಕ್ಷೆ ಮಾಡಬೇಕು ಎಂಬುದನ್ನು ಅವಲಂಬಿಸಿ ಅದರೊಳಗೆ ವಿಭಿನ್ನ ಸಂವೇದನಾ ಚಿಪ್‌ಗಳನ್ನು ಸೇರಿಸಲಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಬಯೋ ಸೆನ್ಸರ್‌ಗಳನ್ನು ಬಳಸಲು ಮತ್ತು ಅರಿತುಕೊಳ್ಳಲು ಸುಲಭಸಾಧ್ಯವಾಗುವ ಸರಳ ಸಾಧನ ರೂಪಿಸುವ ಇರಾದೆ ನಮ್ಮದು. ಸದ್ಯಕ್ಕೆ ಡಯಾಬಿಟೀಸ್ ತಪಾಸಣೆಗೆ ಲಭ್ಯವಿರುವ ಗ್ಲುಕೋಸ್ ಬಯೋ-ಸೆನ್ಸರ್ ತಪಾಸಣಾ ಕಿಟ್‌ಗಳ ಮಾದರಿಯಲ್ಲೇ ಅವು ಇರುತ್ತವೆ. ಪ್ರಸ್ತುತ, ಮೂರು ದಶಕಗಳ ಹಿಂದಿನ ಎಲಿಸಾ (ಎಂಜೈಮ್ ಲಿಂಕ್‌ಡ್ ಇಮ್ಯುನೋಸಾರ್ಬೆಂಟ್ ಅಸ್ಸೇ) ಎಂಬ ವಿಧಾನದಲ್ಲಿ ರಕ್ತ, ಮೂತ್ರದಲ್ಲಿರುವ ರೋಗದ ಮಾರ್ಕರ್‌ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ದುಬಾರಿ ಎಂದು ಪರಿಗಣಿಸಲ್ಪಟ್ಟಿರುವ ಈ ವಿಧಾನಕ್ಕೆ ತಾಂತ್ರಿಕ ಪರಿಣತಿಯೂ ಬೇಕು ಮತ್ತು ಎರಡು ಗಂಟೆಗೂ ಹೆಚ್ಚು ಸಮಯ ತಗುಲುತ್ತದೆ.
ತ್ವರಿತ ತಪಾಸಣೆಗೆ ಮತ್ತು ನಿಖರವಾಗಿ ರೋಗ ಪತ್ತೆ ಹಚ್ಚಲು ಈ ತಂತ್ರಜ್ಞಾನವು ವೈದ್ಯರಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದು ಮಿಲ್ನರ್ ತಿಳಿಸಿದ್ದಾರೆ.
ಬಯೋ ಸೆನ್ಸರ್‌ಗಳು ಪ್ರೋಸ್ಟೇಟ್ ಮತ್ತು ಅಂಡಾಣು ಕ್ಯಾನ್ಸರ್, ಹೃದಯಾಘಾತ, ಮಲ್ಟಿಪಲ್ ಸ್ಕ್ಲಿರೋಸಿಸ್, ಹೃದ್ರೋಗ ಮತ್ತು ಫಂಗಸ್ ಸೋಂಕು ಮೊದಲಾದ ವೈವಿಧ್ಯಮಯ ರೋಗಗಳನ್ನು ಪತ್ತೆ ಹಚ್ಚುತ್ತವೆ ಎಂಬುದನ್ನು ಅಧ್ಯಯನ ಮೂಲಕ ಕಂಡುಕೊಳ್ಳಲಾಗಿದೆ. ಅಲ್ಲದೆ ಕ್ಷಯ ಮತ್ತು ಎಚ್ಐವಿ ಸೋಂಕು ಪತ್ತೆ ಹಚ್ಚುವುದಕ್ಕೂ ಇದು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿದೆ ಎಂದು ಸಂಶೋಧಕರು ಹೇಳುತ್ತಾರೆ.