ಗರ್ಭಿಣಿ ಮಹಿಳೆಯ ವಯಸ್ಸು ಮತ್ತು ಮಾನಸ್ಥಿತಿ,ಒತ್ತಡಗಳು ಗರ್ಭಪಾತಕ್ಕೆ ಕಾರಣವಾಗಬಹುದು ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಆದರೆ ಗರ್ಭಾವಸ್ಥೆಯಲ್ಲಿ ಕ್ರಿಯಾತ್ಮಕವಾಗಿ ಕೆಲಸದಲ್ಲಿ ತೊಡಗುವುದು ಗರ್ಭಪಾತಕ್ಕೆ ಕಾರಣವಾಗುತ್ತವೆ ಎಂಬ ಜನಪ್ರಿಯ ನಂಬುಗೆಗೆ ಯಾವುದೇ ಆಧಾರ ಪತ್ತೆಯಾಗಿಲ್ಲ ಎಂದು ಅಧ್ಯಯನ ಹೇಳಿದೆ.
ಹೆಚ್ಚಿನ ಗರ್ಭಪಾತಗಳಿಗೆ ಕಾರಣವೇನು ಎಂಬ ಅಂಶ ನಿಖರವಾಗಿ ಗೊತ್ತಾಗಿಲ್ಲ. ಹೆಚ್ಚಿನ ಅಪಾಯಕಾರಿ ಅಂಶಗಳು ವಿವಾದಾಸ್ಪದವಾಗಿವೆ ಮತ್ತು ದೃಢಗೊಂಡಿಲ್ಲ. ಆದರೆ ವಯಸ್ಸಾದ ಬಳಿಕ ಗರ್ಭಧಾರಣೆ, ಹಿಂದಿನ ಗರ್ಭಪಾತಗಳು ಮತ್ತು ಬಂಜೆತನ ಇದಕ್ಕೆ ಕಾರಣ ಎಂಬುದನ್ನು ಅಧ್ಯಯನ ದೃಢಪಡಿಸಿದೆ ಎಂದು ವರದಿ ಹೇಳಿದೆ.
ಕೆಲವು ಸಾಮಾಜಿಕ ಅಪಾಯಕಾರಿ ಅಂಶಗಳು ಮತ್ತು ವರ್ತನೆಗಳು ಇದಕ್ಕೆ ಕಾರಣವೆಂದು ಹೇಳಲಾಗಿದ್ದರೂ, ಲಭಿಸಿರುವ ಆಧಾರ ಅತ್ಯಲ್ಪ.
ಲಂಡನ್ ಸ್ಕೂಲ್ ಆಫ್ ಹಿಜಿನ್ ಮತ್ತು ಟ್ರೋಪಿಕಲ್ ಮೆಡಿಸಿನ್, 13 ವಾರಗಳೊಳಗಾಗಿ ಗರ್ಭಪಾತಕ್ಕೆ ತುತ್ತಾಗಿರುವ 18 ರಿಂದ 55ರ ಹರೆಯದ 55 ಮಹಿಳೆಯರ ಸಮೀಕ್ಷೆ ನಡೆಸಿತ್ತು. ಹೋಲಿಕೆಗಾಗಿ ಅಧ್ಯಯನದಲ್ಲಿ 12 ವಾರ ಕಳೆದ 6116 ಗರ್ಭಿಣಿಯರನ್ನು ಸೇರಿಸಲಾಗಿತ್ತು.
ಫಲವತ್ತತೆಗಾಗಿ ಚಿಕಿತ್ಸೆ, ಗರ್ಭಾವಸ್ಥೆಗೆ ಮುಂಚಿತವಾಗಿ ಕಡಿಮೆ ದೇಹತೂಕ, ದೊಡ್ಡ ಪ್ರಮಾಣದಲ್ಲಿ ದಿನನಿತ್ಯ ಮದ್ಯಪಾನ ಸೇವನೆ, ದೈನಂದಿನ ಒತ್ತಡ, ಗರ್ಭಾವಸ್ಥೆಗೆ ವಯಸ್ಕ ಪುರುಷ ಕಾರಣವಾಗಿರುವುದು ಗರ್ಭಪಾತಕ್ಕೆ ಕಾರಣ ಎಂಬ ಅಂಶ ಪತ್ತೆಯಾಗಿದೆ.