ಹಾಸಿಗೆಯಲ್ಲಿ ಮೈಯೊಡ್ಡಿ ಮಾತನಾಡುತ್ತಾ ಕಾಲ ಕಳೆಯುವುದು ಒಳ್ಳೆಯದೂಂತ ಅನಿಸಬಹುದು. ಆದರೆ ನಿದ್ದೆ ಹೋಗುವ ಮುನ್ನ ಮೊಬೈಲ್‌ನಲ್ಲಿ ಮಾತನಾಡುವುದಿದೆಯಲ್ಲ... ಅದು ಡೇಂಜರ್!
ನಿದ್ರಿಸುವ ಮುನ್ನ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಾ ಇದ್ದರೆ, ಹ್ಯಾಂಡ್‌ಸೆಟ್‌ನಿಂದ ಹೊರಸೂಸುವ ವಿಕಿರಣಗಳು ನಿದ್ರಾಹೀನತೆ ಮತ್ತು ತಲೆನೋವು ತಂದೊಡ್ಡಬಲ್ಲವು ಹಾಗೂ ಗಟ್ಟಿನಿದ್ರೆಯ ಅವಧಿಯನ್ನೂ ಕಡಿತಗೊಳಿಸಬಲ್ಲುದಂತೆ.
ಹೀಗಂತ ಅಧ್ಯಯನವೊಂದು ಹೇಳುತ್ತದೆ.
ನಿದ್ದೆ ಕಡಿಮೆಯಾಯಿತೆಂದರೆ ಇದ್ದೇ ಇದೆಯಲ್ಲ, ಖಿನ್ನತೆ, ಏಕಾಗ್ರತೆಯ ಕೊರತೆ, ಮತ್ತು ವ್ಯಕ್ತಿತ್ವದ ಬದಲಾವಣೆಗಳು... ನಿದ್ರಾ ಹೀನತೆಯು ಗಮನ ಕೊಡುವುದಕ್ಕೂ ಅಡ್ಡಿಯಾಗಬಹುದು ಮತ್ತು ಮಕ್ಕಳಲ್ಲಿ, ಯುವಕರಲ್ಲಿ ಶೈಕ್ಷಣಿಕವಾಗಿಯೂ ಹಿಂದುಳಿಯಲು ಕಾರಣವಾಗಬಲ್ಲುದು.
ಈ ಕುರಿತು ಸಂಶೋಧನೆ ಮಾಡಿದ್ದು ಸ್ವೀಡನ್‌ನ ಉಪ್ಸಲಾ ಯುನಿವರ್ಸಿಟಿಯ ಕರೊಲಿನ್‌ಸ್ಕಾ ಶಿಕ್ಷಣ ಸಂಸ್ಥೆ ಮತ್ತು ಮಿಚಿಗನ್‌ನ ವೇಯ್ನ್ ಸ್ಟೇಟ್ ಯುನಿವರ್ಸಿಟಿ.
ಮಲಗುವ ಮುನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡಿದ ಮಂದಿಗೆ ಗಾಢನಿದ್ರೆಗೆ ತೆರಳಲು ಸಾಕಷ್ಟು ಸಮಯ ಹಿಡಿಸುತ್ತದೆ ಮತ್ತು ಗಾಢನಿದ್ರೆಯಲ್ಲಿರುವ ಅವಧಿಯೂ ಕಿರಿದಾಗಿರುತ್ತದೆ ಎಂದು ಈ ಸಂಶೋಧನೆಯಿಂದ ಪತ್ತೆ ಹಚ್ಚಲಾಗಿದೆ.
ಗಾಢ ನಿದ್ರೆಯು ಅತ್ಯಂತ ಅವಶ್ಯಕ ಅವಧಿ. ಏಕೆಂದರೆ, ಆ ಅವಧಿಯಲ್ಲಿಯೇ ದೇಹವು ಜೀವಕೋಶಗಳನ್ನು ಪುನಶ್ಚೇತನಗೊಳಿಸುವುದು ಮತ್ತು ದಿನದ ಅವಧಿಯಲ್ಲಿ ಸಂಭವಿಸಿದ ಜೀವಕೋಶಗಳಿಗಾದ ಯಾವುದೇ ಹಾನಿಯನ್ನು ಸರಿಪಡಿಸುವುದು.
ಅಧ್ಯಯನದ ನೇತೃತ್ವ ವಹಿಸಿದ್ದ ಪ್ರೊ.ಬೆಂಟ್ ಆರ್ನೆಟ್ಸ್ ಹೇಳಿರುವ ಪ್ರಕಾರ, ಮೊಬೈಲ್ ಫೋ್ನ್‌ಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳೇನೆಂಬುದನ್ನು ಅವರು ಪತ್ತೆ ಹಚ್ಚಿದ್ದಾರೆ. ಅವು ಮೆದುಳಿನ ಮೇಲೆ ಮಾಪನ ಮಾಡಬಲ್ಲಷ್ಟು ಪರಿಣಾಮ ಉಂಟುಮಾಡುತ್ತವೆ. ಈ ರೇಡಿಯೋ ವಿಕಿರಣಗಳು ಮಿದುಳಿನ ಉದ್ವೇಗ ವ್ಯವಸ್ಥೆಯನ್ನು ಪ್ರಚೋದಿಸಿ, ಜನರನ್ನು ಹೆಚ್ಚು ಎಚ್ಚರದಲ್ಲಿರುವಂತೆ ಮತ್ತು ಕಡಿಮೆ ನಿದ್ರಿಸುವಂತೆ ಮಾಡುತ್ತದೆ.