ಮಾಂಸ, ಕಡಲೆ-ಗೋಡಂಬಿ ಮುಂತಾದ ಬೀಜಪದಾರ್ಥಗಳು, ಧಾನ್ಯ ಮತ್ತು ದ್ವಿದಳ ದಾನ್ಯಗಳಲ್ಲಿ ಇರುವ ವಿಟಮಿನ್ ಬಿ3ಗಳು ಸನ್ಸ್ಕ್ರೀನ್(ಬಿಸಿಲಿನಿಂದ ತ್ವಚೆಯನ್ನು ಕಾಪಾಡುವಂತಹ ಮುಲಾಮು)ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯವೆಸಗುತ್ತದೆ ಎಂಬುದಾಗಿ ಹೊಸ ಸಂಶೋಧನೆಯೊಂದು ಹೇಳಿದೆ.
ಈ ಮೇಲೆ ಹೇಳಿರುವ ವಸ್ತುಗಳಲ್ಲಿ ದೊರೆಯುವ ವಿಟಮಿನ್ಗಳನ್ನು ಗುಳಿಗೆಯ ರೂಪದಲ್ಲಿ ಪಡೆದರೆ ಅಥವಾ ಸನ್ಸ್ಕ್ರೀನ್ಗಳಿಗೆ ಸೇರಿಸಿದರೆ ಅದು ಸೂರ್ಯನ ಅತಿನೇರಳೆ ಕಿರಣಗಳಿಂದ(ಅಲ್ಟ್ರಾ ವೈಲೆಟ್) ಉಂಟಾಗುವ ನಿರೋಧಕ ಶಕ್ತಿಗಳ ತಡೆಯನ್ನು ತಡೆಗಟ್ಟುತ್ತದೆ. ಬಿ3 ವಿಟಮಿನ್ ಜೀವಕೋಶಗಳನ್ನು ಶಕ್ತಿಯುತವಾಗಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಎಂದು ಸಿಡ್ನಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಡಿಯೋನ ಡಾಮಿಯನ್ ಹೇಳಿದ್ದಾರೆ.
ಸೂರ್ಯನ ಪ್ರಕರ ಕಿರಣಗಳ ಅತಿನೇರಳೆ ವಿಕಿರಣಗಳು ತ್ವಚೆಯ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಇದು ಚರ್ಮದ ಕ್ಯಾನ್ಸರ್ಗೆ ಹಾದಿಯಾಗುತ್ತದೆ.
ಸನ್ಸ್ಕ್ರೀನ್ಗಳು ತ್ವಚೆಯನ್ನು ಯುವಿಬಿ ಕಿರಣಗಳಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದ್ದರೂ, ಯುವಿಎ ಕಿರಣಗಳಿಂದ ಚರ್ಮವನ್ನು ರಕ್ಷಿಸುವಲ್ಲಿ ಅಷ್ಟೊಂದು ಪರಿಣಾಮಕಾರಿಯಲ್ಲವಂತೆ. ನಿಕೋಟಿನಾಮೈಡ್ ಅಥವಾ ವಿಟಮಿನ್ ಬಿ3ಯು ಯುವಿಎ ಮತ್ತು ಯುವಿಬಿ ವಿಕಿರಣಗಳಿಂದ ಉಂಟಾಗು ರೋಗನಿರೋಧಕ ಶಕ್ತಿಯ ಕುಗ್ಗಿಸುವಿಕೆಯನ್ನು ತಡೆಯುವಲ್ಲಿ ಪರಿಣಾಕಾರಿ ಎಂದು ಡಾಮಿಯನ್ ಹೇಳಿದ್ದಾರೆ.
ಈ ಕುರಿತು ನಡೆಸಲಾಗಿರುವ ಪ್ರಯೋಗಗಳ ವೇಳೆ ನೀರಿನಲ್ಲಿ ಕರಗಬಲ್ಲಂತಹ ಬಿ3 ವಿಟಮಿನ್ಗಳು ಲೋಶನ್ ಮತ್ತು ಗುಳಿಗೆ ರೂಪದಲ್ಲೂ ಎರಡೂ ಮಾದರಿಯ ವಿಕಿರಣಗಳಿಂದ ತ್ವಚೆಯನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಎಂದಿರುವ ಅವರು ಚರ್ಮ ಕ್ಯಾನ್ಸರ್ ಅಪಾಯ ಎದುರಿಸುವವರು ಪೂರಕವಾಗಿ ವಿಟಮಿನ್ ಬಿ3ಯ ಸೇರ್ಪಡೆಯನ್ನು ಬಾಯ್ಮೂಲಕ ಸೇವಿಸಬಹುದಾಗಿದೆ ಎಂದು ಹೇಳಿದ್ದಾರೆ.
ಇದರ ಉತ್ಪಾದನೆ ತುಲನಾತ್ಮಕವಾಗಿ ಅಗ್ಗವಾಗಿದ್ದು, ಯಎವಿಯ ವಿರುದ್ಧ ಸನ್ಸ್ಕ್ರೀನ್ ಕಾರ್ಯಾಚರಣೆಯನ್ನು ಉತ್ತೇಜಿಸುವ ಸಲುವಾಗಿ ಇದನ್ನು ಸೇರಿಸಬಹುದು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.