ನಿಮ್ಮ ಮಕ್ಕಳು ಪ್ರತಿದಿನ ಬೆಳಗ್ಗಿನ ಉಪಹಾರವನ್ನು ಸೇವಿಸುತ್ತಿದ್ದಾರಾ? ಇದನ್ನು ನೀವು ಖುದ್ದು ಗಮನಿಸಲೇಬೇಕಾದ ಅನಿವಾರ್ಯತೆ ಬಂದಿದೆ. ಬೆಳಗ್ಗಿನ ಉಪಹಾರ ಸೇವಿಸದ ಮಕ್ಕಳಲ್ಲಿ ಎರಡರಷ್ಟು ಬೊಜ್ಜು ಬೆಳೆಯುವ ಸಾಧ್ಯತೆಯಿದೆ ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಯಾವ ಮಕ್ಕಳು ಬೆಳಗ್ಗಿನ ಉಪಹಾರವನ್ನು ನಿಯಮಿತವಾಗಿ ಸೇವಿಸುತ್ತಾರೋ, ಅವರು ಮಧ್ಯಾಹ್ನದ ಊಟ ಕಡಿಮೆ ಮಾಡುತ್ತಾರೆ ಮತ್ತು ನಂತರದಲ್ಲಿ ಹೆಚ್ಚು ಕ್ಯಾಲೋರಿಯ ತಿಂಡಿಗಳ ಸೇವನೆಯನ್ನು ನಿಲ್ಲಿಸುತ್ತಾರೆ ಎಂಬ ಮಾಹಿತಿಯನ್ನು ಬ್ರಿಟನ್ನಿನ ಸಂಶೋಧಕರು ಹೊರಗೆಡವಿದ್ದಾರೆ.
ಉದ್ಯೋಗಸ್ಥ ದಂಪತಿ ಮತ್ತು ನಿರುದ್ಯೋಗಿ ಹೆತ್ತವರಿಗೆ ಹೋಲಿಸಿದಾಗ, ನಿರುದ್ಯೋಗಿ ಹೆತ್ತವರ ಜತೆ ಮಕ್ಕಳು ಬೆಳಗ್ಗಿನ ಉಪಹಾರ ತಪ್ಪಿಸುವ ಪ್ರಮಾಣ ಮೂರರಷ್ಟು ಹೆಚ್ಚಿದೆ ಎನ್ನುತ್ತದೆ ಈ ಸಂಶೋಧನೆ.
ಮಕ್ಕಳು ಅಥವಾ ವಯಸ್ಕರು ಬೆಳಗ್ಗಿನ ಉಪಹಾರ ಸೇವಿಸದಿದ್ದಲ್ಲಿ ಮಧ್ಯಾಹ್ನದ ಊಟದ ಮೊದಲು ಹೆಚ್ಚು ಹಸಿವೆಯುಂಟಾಗುತ್ತದೆ. ಆಗ ಅವರು ಲಘುಪಹಾರದ ಮೊರೆ ಹೋಗುತ್ತಾರೆ. ಲಘುಪಹಾರವೆಂದ ಕೂಡಲೇ ಅಲ್ಲಿ ಸಕ್ಕರೆ, ಕೊಬ್ಬು ಅತ್ಯಧಿಕ ಪ್ರಮಾಣದಲ್ಲಿದ್ದು, ಅಡ್ಡ ಪರಿಣಾಮಗಳನ್ನೆದುರಿಸಬೇಕಾಗುತ್ತದೆ. ಸ್ಥೂಲಕಾಯ ಮತ್ತು ಬೆಳಗ್ಗಿನ ಉಪಹಾರ ಸೇವಿಸದಿರುವುದಕ್ಕಿರುವ ಸಂಬಂಧ ವಿವರಿಸಲು ಇದು ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
"ಯಾರು ಮಕ್ಕಳಿಗೆ ಬೆಳಗ್ಗಿನ ಉಪಹಾರ ಕೊಡುವುದಿಲ್ಲವೋ ಅಂಥವರು ತಮ್ಮ ಮಕ್ಕಳಿಗೆ ಪೌಷ್ಟಿಕಾಹಾರ ಕೊಡುವ ವಿಚಾರದಲ್ಲಿ ಸಾಮಾನ್ಯವಾಗಿ ಕಡಿಮೆ ವ್ಯವಸ್ಥಿತರಾಗಿರಬಹುದು" ಎಂದು ಸಂಶೋಧಕ ಫ್ರೊ. ಹೀಥರ್ ಜೋಶಿವರು ಹೇಳಿರುವುದನ್ನು 'ದಿ ಡೈಲೀ ಟೆಲಿಗ್ರಾಫ್' ಉಲ್ಲೇಖಿಸಿದೆ.
ಈ ಶತಮಾನದ ಪ್ರಥಮ ಎರಡು ವರ್ಷಗಳಲ್ಲಿ ಹುಟ್ಟಿದ ಐದು ವರ್ಷದ 15,000 ಮಕ್ಕಳನ್ನು ಆಧಾರವಾಗಿರಿಸಿಕೊಂಡು ಪರೀಕ್ಷೆಗೊಳಪಡಿಸಿ ಲಂಡನ್ ಯೂನಿವರ್ಸಿಟಿಯಲ್ಲಿನ ಪ್ರೋ| ಜೋಶಿ ಮತ್ತು ಸಹೋದ್ಯೋಗಿಗಳು ಈ ಕುತೂಹಲಕಾರಿ ಫಲಿತಾಂಶವನ್ನು ಕಂಡುಕೊಂಡಿದ್ದಾರೆ.
ಸಹಜ ತೂಕದ ಮಕ್ಕಳಿಗಿಂತ ಎರಡು ಪಟ್ಟು ಬೆಳಗಿನ ಉಪಹಾರ ಸೇವಿಸದ ಮಕ್ಕಳಲ್ಲಿ ಬೊಜ್ಜು ಬೆಳೆಯುತ್ತದೆ ಎಂದು ಮಿಲೇನಿಯಂ ಕೊಹೋರ್ಟ್ ಸ್ಟಡಿ ಎಂಬ ಹೆಸರಿನ ಅಧ್ಯಯನ ಕಂಡುಕೊಂಡಿದೆ. ಇಂತಹ ಮಕ್ಕಳಲ್ಲಿ ಐವರಲ್ಲಿ ಒಬ್ಬರಾದರೂ ಅವರು ಶಾಲೆಗೆ ಸೇರುವ ಹೊತ್ತಿಗೆ ಒಂದೋ ಅಧಿಕ ತೂಕ ಇಲ್ಲವೇ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾರೆ ಎಂದು ಅಧ್ಯಯನ ಹೇಳಿದೆ.
ಶೇಕಡಾ 17ರಷ್ಟು ಹುಡುಗಿಯರು ಮತ್ತು ಶೇಕಡಾ 13.5ರಷ್ಟು ಹುಡುಗರು ಅಧಿಕ ತೂಕ ಹೊಂದಿರುತ್ತಾರೆ. ಶೇಕಡಾ 6ರಷ್ಟು ಹುಡುಗಿಯರು ಮತ್ತು ಶೇಕಡಾ 5ರಷ್ಟು ಹುಡುಗರು ಬೊಜ್ಜು ಹೊಂದಿರುತ್ತಾರೆ ಎಂದೂ ಅಧ್ಯಯನದ ವರದಿ ಹೇಳುತ್ತದೆ.
ಇನ್ನು ಹೆತ್ತಮ್ಮನ ವಿದ್ಯಾಭ್ಯಾಸ ಮಟ್ಟಕ್ಕೂ ಅವರ ಮಕ್ಕಳ ತೂಕಕ್ಕೂ ಸಂಬಂಧವಿದೆ. ಪದವಿ ವಿದ್ಯಾಭ್ಯಾಸ ಮಾಡಿರುವ ತಾಯಿಯ ಮಕ್ಕಳಲ್ಲಿ ಶೇಕಡಾ 3ರಷ್ಟು ಬೊಜ್ಜು ಇದ್ದರೆ ಕಡಿಮೆ ವಿದ್ಯಾಭ್ಯಾಸ ಮಾಡಿರುವ ತಾಯಿಯ ಮಕ್ಕಳಲ್ಲಿ ಶೇಕಡಾ 8ರಷ್ಟಿರುತ್ತದೆ.