ತೂಕ ತಗ್ಗಿಸಿಕೊಳ್ಳಬೇಕೇ? ಪ್ರತಿದಿನ ಬೆಳಗ್ಗೆ ಭರ್ಜರಿ ಉಪಾಹಾರ ಸೇವಿಸಿ. ಆದರೆ ಸೇವಿಸುವ ಆಹಾರ ಆರೋಗ್ಯಕರವಾಗಿರಲಿ...
ಸಂಶೋಧಕರು ಪತ್ತೆ ಹಚ್ಚಿರುವ ಪ್ರಕಾರ, ಸಣ್ಣ ಬ್ರೇಕ್‌ಫಾಸ್ಟ್‌ನೊಂದಿಗೆ ದಿನ ಆರಂಭಿಸುವ ಮಹಿಳೆಯರಿಗೆ ಹೋಲಿಸಿದರೆ, ತಮ್ಮ ದೈನಂದಿನ ಕ್ಯಾಲೊರಿ ಸೇವನೆಯ ಅರ್ಧದಷ್ಟನ್ನು ಬೆಳಗಿನ ಉಪಾಹಾರದಲ್ಲೇ ಸೇವಿಸುವ ಮಹಿಳೆಯರು ಬೇಗನೇ ತೂಕ ಕಳೆದುಕೊಳ್ಳುತ್ತಾರೆ.
ಇನ್ನೂ ಗಮನಿಸಬೇಕಾದ ಅಂಶವೆಂದರೆ, ಒಳ್ಳೆಯ ಉಪಾಹಾರ ಸೇವಿಸುವವರು ಮರಳಿ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳೂ ಕಡಿಮೆ ಎಂಬುದನ್ನು ಈ ಅಧ್ಯಯನ ಕಂಡುಕೊಂಡಿದೆ.
ಪ್ರೊಟೀನ್ ಮತ್ತು ಕಾರ್ಬೊಹೈಡ್ರೇಟ್ಸ್ ಒಳಗೊಂಡಿರುವ ಬೆಳಗಿನ ಉಪಾಹಾರ ಸೇವನೆಯು, ದಿನದ ನಂತರದ ಅವಧಿಯಲ್ಲಿ ಬೇರೆ ಸಿಹಿತಿಂಡಿ ಅಥವಾ ಇತರ ಆಹಾರದ ತುಡಿತವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲದೆ, ದೇಹದ ಪಚನಕ್ರಿಯೆಯನ್ನೂ ಉತ್ತೇಜಿಸುತ್ತದೆ ಎನ್ನುತ್ತಾರೆ ಸಂಶೋಧಕರು.
ಕಾರ್ಬೊಹೈಡ್ರೇಟ್ ಅಂಶವಿಲ್ಲದ ಉಪಾಹಾರ ಸೇವನೆಯ ಆಹಾರ ಪದ್ಧತಿಯು ಬೊಜ್ಜು ಏರಲು ಕಾರಣವಾಗುವುದೇಕೆಂದರೆ, ಅದು ಕ್ಯಾಲೊರಿ-ಭರಿತ ಆಹಾರಕ್ಕಾಗಿನ ತುಡಿತವನ್ನು ತಡೆಯುವುದಿಲ್ಲ ಎನ್ನುತ್ತಾರೆ ಪ್ರಧಾನ ಸಂಶೋಧಕಿ ಡೇನಿಯೆಲಾ ಜಕುಬೊವಿಜ್. ವೆನೆಜುವೆಲಾದ ಹಾಸ್ಪಿಟಲ್ ಡಿ ಕ್ಲಿನಿಕಾಸ್‌ನ ಸಂಶೋಧಕರ ತಂಡವೊಂದು 100 ಮಂದಿ ಸ್ಥೂಲದೇಹಿ ತರುಣಿಯರ ಆಹಾರ ಸೇವನಾ ಪದ್ಧತಿ ಬಗ್ಗೆ ಸಂಶೋಧನೆ ನಡೆಸಿ ರೂಪಿಸಿದ ಅಧ್ಯಯನ ವರದಿಯನ್ನು ಬ್ರಿಟಿಷ್ ಪತ್ರಿಕೆ 'ಡೈಲಿ ಮೇಲ್' ವರದಿ ಮಾಡಿದೆ.