Select Your Language

Notifications

webdunia
webdunia
webdunia
webdunia

ತದ್ರೂಪಿ ಮಾನವ ಭ್ರೂಣ ಸೃಷ್ಟಿ

ನಿಮ್ಮದೇ ತದ್ರೂಪ ಸೃಷ್ಟಿಸುವಲ್ಲಿ ಮಹತ್ವದ ಹೆಜ್ಜೆ

ತದ್ರೂಪಿ ಮಾನವ ಭ್ರೂಣ ಸೃಷ್ಟಿ
ಇಬ್ಬರು ಪುರುಷರ ಚರ್ಮ ಕೋಶಗಳಿಂದ ಅಮೆರಿಕ ವಿಜ್ಞಾನಿಗಳು ಮೊದಲ ಬಾರಿಗೆ ತದ್ರೂಪಿ ಮಾನವ ಭ್ರೂಣವನ್ನು ಸೃಷ್ಟಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಬಳಕೆಯಾಗಬಲ್ಲ ವೈಯಕ್ತೀಕೃತ ಭ್ರೂಣದ ಕೋಶ (ಸ್ಟೆಮ್ ಸೆಲ್)ಗಳನ್ನು ರಚಿಸಲು ಸಾಧ್ಯ ಎಂಬ ವಾದಕ್ಕೆ ಪೂರಕವಾಗಿ ಇದೊಂದು ಮಹತ್ವದ ಹೆಜ್ಜೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ವಾಸ್ತವವಾಗಿ ಭ್ರೂಣಕೋಶಗಳನ್ನು ತೆಗೆಯಲಾಗುವ ಬ್ಲಾಸ್ಟೋಸಿಸ್ಟ್ ಎಂಬ ಹಂತ ತಲುಪಿದ ತದ್ರೂಪಿ ಭ್ರೂಣಗಳನ್ನು ರಚಿಸಲು ವಯಸ್ಕರ ಜೀವಕೋಶಗಳನ್ನು ಬಳಸಿದವರಲ್ಲಿ ತಾವೇ ಮೊದಲಿಗರು ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಕ್ಲೋನಿಂಗ್ ಮೂಲಕ ರೋಗಿ-ನಿರ್ದಿಷ್ಟಿತ ಸ್ಟೆಮ್ ಸೆಲ್‌ಗಳನ್ನು ರಚಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಬೋಸ್ಟನ್‌ನ ಹಾರ್ವರ್ಡ್ ಮತ್ತು ಮಕ್ಕಳ ಆಸ್ಪತ್ರೆಯ ಸ್ಟೆಮ್ ಸೆಲ್ ಸಂಶೋಧಕ ಡಾ.ಜಾರ್ಜ್ ಕ್ಯೂ. ಡೇಲೀ ತಿಳಿಸಿದ್ದಾರೆ.

ಭ್ರೂಣಗಳು ತೀರಾ ಆರಂಭಿಕ ಹಂತದವರೆಗಷ್ಟೇ ಬೆಳೆದಿದ್ದರೂ, ಬೇರೊಬ್ಬರ ಆನುವಂಶಿಕ ತದ್ರೂಪಗಳಂತಿರುವ ಮಕ್ಕಳನ್ನು ಸೃಷ್ಟಿಸುವಲ್ಲಿನ ಪ್ರಯತ್ನದ ಒಂದು ಅಂಗವಿದು ಎಂದೇ ತಾತ್ವಿಕವಾಗಿ ವಿಶ್ಲೇಷಿಸಲಾಗುತ್ತಿದೆ.

ವಿಜ್ಞಾನಿಗಳು ಭ್ರೂಣದ ಸ್ಟೆಮ್ ಸೆಲ್‌ಗಳನ್ನು ಉತ್ಪತ್ತಿ ಮಾಡದಿದ್ದರೂ, ರೋಗಿಯೊಬ್ಬನ ತದ್ರೂಪಿಯಿಂದ ರಚಿಸಲಾದ ಸ್ಟೆಮ್ ಸೆಲ್‌ಗಳನ್ನು ಪಾರ್ಕಿನ್ಸನ್ ಕಾಯಿಲೆ ಗುಣಪಡಿಸುವ ಮೆದುಳಿನ ಕೋಶಗಳಾಗಿ ಅಥವಾ ಡಯಾಬಿಟೀಸ್ ಗುಣಪಡಿಸಲು ಮೇದೋಜೀರಕಾಂಗ (ಪ್ಯಾಂಕ್ರಿಯಾಸ್) ಕೋಶಗಳಾಗಿ ಪರಿವರ್ತಿಸಬಹುದು ಎಂಬ ಆಲೋಚನೆ ವಿಜ್ಞಾನಿಗಳದು.

ಈ ಕ್ಲೋನಿಂಗ್‌ಗಾಗಿ ವಿಜ್ಞಾನಿಗಳು ಇಬ್ಬರು ಪುರುಷರ ಚರ್ಮದ ಕೋಶಗಳನ್ನು ಡಿಎನ್ಎ ಮೂಲವಾಗಿಯೂ, ತರುಣಿಯರು ದಾನ ಮಾಡಿದ್ದ 29 ಅಂಡಕೋಶಗಳನ್ನೂ ಉಪಯೋಗಿಸಿದ್ದರು.

ಐದು ಬ್ಲಾಸ್ಟೋಸಿಸ್ಟ್‌ಗಳನ್ನು ರಚಿಸಲಾಯಿತು. ಆನುವಂಶಿಕ ಪರೀಕ್ಷೆಯ ಮೂಲಕ ಅವುಗಳಲ್ಲೊಂದು ತದ್ರೂಪಿ ಎಂದು ತೋರಿಸಲಾಯಿತು. ಮತ್ತು ಉಳಿದ ಎರಡು ಬ್ಲಾಸ್ಟೋಸಿಸ್ಟ್‌ಗಳು ಕೂಡ ತದ್ರೂಪಿಯಾಗಿರುವ ಕುರಿತ ಲಕ್ಷಣಗಳನ್ನು ತೋರಿಸಿದವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Share this Story:

Follow Webdunia kannada