Select Your Language

Notifications

webdunia
webdunia
webdunia
webdunia

ಡೀಸೆಲ್ ಹೊಗೆಯಿಂದ ಹೆಚ್ಚಿದ ಆಸ್ತಮಾ ಲಕ್ಷಣ

ಡೀಸೆಲ್
ವಾಷಿಂಗ್ಟನ್ , ಗುರುವಾರ, 6 ಡಿಸೆಂಬರ್ 2007 (20:32 IST)
ಡೀಸೆಲ್ ಉರಿಸಿದಾಗ ಹೊರಸೂಸುವ ಹೊಗೆ ಆಸ್ತಮಾ ತೊಂದರೆಯಿರುವ ಜನರಿಗೆ ದುಷ್ಪರಿಣಾಮ ಬೀರುತ್ತದೆಂದು ಹೊಸ ಅಧ್ಯಯನವೊಂದು ತಿಳಿಸಿದೆ. ಕಡಿಮೆ ಮತ್ತು ಮಧ್ಯಮಪ್ರಮಾಣದ ಆಸ್ತಮಾದಿಂದ ಬಳಲುವ 60 ಜನರು ಲಂಡನ್‌ನ ಡೀಸೆಲ್ ಚಾಲಿತ ಟ್ಯಾಕ್ಸಿಗಳು ಮತ್ತು ಬಸ್ಸುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿರುವ ಜನದಟ್ಟಣೆಯ ಆಕ್ಸ್‌ಫರ್ಡ್ ಬೀದಿಯಲ್ಲಿ ನಡೆದು ಅವರ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲಾಯಿತು.

ಆಕ್ಸ್‌ಫರ್ಡ್ ಬೀದಿಯಲ್ಲಿ 2 ಗಂಟೆಗಳ ನಡಿಗೆ ಬಳಿಕ ಪರೀಕ್ಷೆಗೆ ಒಳಪಟ್ಟ ಸ್ವಯಂಸೇವಕರಿಗೆ ಆಸ್ತಮಾ ಲಕ್ಷಣಗಳು ಹೆಚ್ಚಿದ ಅನುಭವ ಉಂಟಾಯಿತಲ್ಲದೇ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತು. ಅವರು ಸಹಜ ಸ್ಥಿತಿಗೆ ಬರಲು ಕೆಲವು ಗಂಟೆಗಳು ಬೇಕಾಯಿತು. ಇಂಪೀರಿಯಲ್ ಕಾಲೇಜ್, ನ್ಯೂಜೆರ್ಸಿ ಕಾಲೇಜು ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಯ ಸಂಶೋಧಕರು ಈ ಅಧ್ಯಯನ ಕೈಗೊಂಡರು.

ಇದೇ ಸ್ವಯಂಸೇವಕರನ್ನು ಸಂಚಾರಮುಕ್ತ ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ನಡಿಗೆಗೆ ಬಿಡಲಾಯಿತು. ಅದೇ ರೀತಿಯ ಸಮಸ್ಯೆಗಳು ಅವರಿಗೆ ಉಂಟಾದರೂ ಅದರ ಪ್ರಮಾಣ ಕಡಿಮೆಯಾಗಿರುವುದು ಪತ್ತೆಯಾಯಿತು.

ವಾಹನಗಳ ಹೊಗೆಯಿಂದ ಆಸ್ತಮಾ ಲಕ್ಷಣಗಳು ಉಲ್ಬಣಿಸುವುದರ ಬಗ್ಗೆ ಪ್ರಯೋಗಾಲಯದ ಹೊರಗೆ ಅಧ್ಯಯನ ಕೈಗೊಂಡಿರುವುದು ಇದೇ ಮೊದಲಬಾರಿಯಾಗಿದೆ. ಮೂರನೇ ಎರಡರಷ್ಟು ಜನರು ಡೀಸೆಲ್ ಹೊಗೆಯಿಂದ ಆಸ್ತಮಾ ಕುರುಹುಗಳು ಹೆಚ್ಚಾಯಿತೆಂದು ನಂಬಿದ್ದಾರೆ.

ಡೀಸೆಲ್‌ನಿಂದ ಹೊರಹೊಮ್ಮುವ ಧೂಳಿನ ಕಣಗಳು, ಹೊಗೆ ಗಾಳಿಯಲ್ಲಿ ಸೇರಿ 2.5 ಮೈಕ್ರಾನ್‌ಗಿಂತ ಸಣ್ಣದಾಗಿರುವ ಕಣಗಳು ಉಸಿರಾಟ ವ್ಯವಸ್ಥೆಯಲ್ಲಿ ಪ್ರವೇಶಿಸುತ್ತವೆ. ಈ ಕಣಗಳು ಅತೀ ಸಣ್ಣದಾಗಿರುವುದರಿಂದ ಶ್ವಾಸಕೋಶದೊಳಗೆ ಉಸಿರಾಟದ ಮೂಲಕ ಪ್ರವೇಶಿಸುತ್ತದಲ್ಲದೇ ರಕ್ತವು ಕೂಡ ಈ ಕಣಗಳನ್ನು ಹೀರಿಕೊಂಡು ಹಾನಿಕರ ಪರಿಣಾಮ ಉಂಟುಮಾಡಬಹುದು.

ಡೀಸೆಲ್ ಎಂಜಿನ್‌ಗಳು ಕಾರ್ಬನ್ ಮಾನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ಪೆಟ್ರೋಲ್ ಎಂಜಿನ್‌ಗಿಂತ ಕಡಿಮೆ ಪ್ರಮಾಣದಲ್ಲಿ ವಾತಾವರಣಕ್ಕೆ ಬಿಡುತ್ತವೆ. ಆದರೆ ಪೆಟ್ರೋಲ್ ಎಂಜಿನ್‌ಗಳಿಗಿಂತ ಕ್ರಮಿಸಿದ ದೂರದಲ್ಲಿ 100 ಪಟ್ಟು ಹೆಚ್ಚು ಕಣಗಳನ್ನು ಹೊರಸೂಸುವುದರಿಂದ ವಾತಾವರಣದ ಮಾಲಿನ್ಯಕ್ಕೆ ಹೆಚ್ಚು ಕೊಡುಗೆ ನೀಡುತ್ತದೆ.

ಜನರ ಆರೋಗ್ಯ ರಕ್ಷಣೆಗೆ ವಾಯುಮಾಲಿನ್ಯವನ್ನು ಕಡಿಮೆ ಮಾಡಬೇಕೆಂಬುದು ನಮ್ಮ ಅಧ್ಯಯನದಿಂದ ತಿಳಿದುಬಂದ ಸಂಗತಿ ಎಂದು ಲಂಡನ್ ಇಂಪೀರಿಯಲ್ ಕಾಲೇಜಿನ ಹೃದಯ ಮತ್ತು ಶ್ವಾಸಕೋಶ ಸಂಸ್ಥೆಯ ಪ್ರೊ,ಪಾನ್ ಚಂಗ್ ಹೇಳಿದ್ದಾರೆ.

Share this Story:

Follow Webdunia kannada