Select Your Language

Notifications

webdunia
webdunia
webdunia
webdunia

ಜೀನ್ ಶಾಪಿಂಗ್ ಮೂಲಕ ಡಿಸೈನರ್ ಬೇಬಿ!

ಜೀನ್ ಶಾಪಿಂಗ್
ಭಾರತದ ಐವರು ದಂಪತಿಗಳಲ್ಲಿ ಒಂದು ಜೋಡಿಯು ಬಂಜೆತನದ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಫಲವತ್ತತೆ ರಹಿತತೆಯು 300 ಕೋಟಿ ಡಾಲರ್‌ಗಳ ಉದ್ದಿಮೆಗೆ ಹಾದಿಯೊದಗಿಸಿದೆ.

ಕೃತಕ ರೀತಿಯಲ್ಲಿ ಮಗು ಹಡೆಯುವ ವಿಧಾನದತ್ತ ಬಂಜೆ ದಂಪತಿಗಳು ಆಕರ್ಷಿತರಾಗುತ್ತಿದ್ದು, ಇದೀಗ, ಜಾಣ, ಬುದ್ಧಿವಂತ ಮಕ್ಕಳನ್ನು ಪಡೆಯಲು ಇಂತಹ ವೀರ್ಯಗಳ ಖರೀದಿಯ ಭರಾಟೆ ಜೋರಾಗಿದೆಯಂತೆ!

ಜೀನ್ ಶಾಪಿಂಗ್ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು, ಇದು ಕೋಟ್ಯಂತರ ರೂಪಾಯಿಯ ವಹಿವಾಟಿಗೆ ಕಾರಣವಾಗಿದೆ. ಧಾತು ದಾನಿಯು ಉತ್ತಮ ವ್ಯಕ್ತಿತ್ವ, ಬುದ್ಧಿಶಕ್ತಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಆರೋಗ್ಯವಂತ ವೈದ್ಯಕೀಯ ಚಾರಿತ್ರ್ಯವನ್ನು ಹೊಂದಿರಬೇಕು. ಹಾಗಾಗಿ 'ವಿನ್ಯಾಸಿತ ಮಗುವಿಗೆ' ರೋಗಗ್ರಸ್ತ ವಂಶವಾಹಿನಿಗಳು ದಾಟಲಾರದು.

ಮಗುವಿನ ವಿನ್ಯಾಸ ಪರಿಕಲ್ಪನೆಯ ಕುರಿತು ಪ್ರತಿಕ್ರಿಯಿಸುವ ಫಲವತ್ತತೆ ತಜ್ಞರೊಬ್ಬರು ಹೇಳುವಂತೆ, ಇದೊಂದು ಬೇಡಿಕೆ ಮತ್ತು ಪೂರೈಕೆ ಕಾರ್ಯ. ಮಕ್ಕಳನ್ನು ಹಡೆಯುವ ಆಕಾಂಕ್ಷೆ ಎಂದಿಗೂ ಕಮರದು. ಅಂತೆಯೇ ಆರೋಗ್ಯವಂತ ದಾನಿಗಳಿಂದ ಇದನ್ನು ಪೂರೈಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಅವರ ನಿಲುವು. ಈ ವಿಧಾನಗಳಿಂದ ಹಲವು ಅನಾನುಕೂಲತೆಗಳಿದ್ದರೂ ದಂಪತಿಗಳು ಈ ವಿಧಾನಕ್ಕೆ ಮುಂದಾಗುತ್ತಾರೆ ಎಂದೂ ಅವರು ಹೇಳುತ್ತಾರೆ.

ಈ ವಿಧಾನದಲ್ಲಿ ಮಗುವನ್ನು ಹಡೆಯಲು ಅಗತ್ಯವಿರುವ ಅಂಡಾಶಯಗಳ ಉತ್ಪತ್ತಿಗಾಗಿ ಹೈಡೋಸ್ ಹಾರ್ಮೋನ್‌ಗಳನ್ನು ಮಹಿಳೆಯೊಬ್ಬಳಿಗೆ ನೀಡಲಾಗುತ್ತದೆ. ಇದರಿಂದ ದೈಹಿಕ ನೋವಿನೊಂದಿಗೆ, ರಕ್ತದೊತ್ತಡ ಮತ್ತು ಡಯಾಬಿಟೀಸ್‌ನಂತಹ ಅಪಾಯಕ್ಕೂ ಹಾದಿಯಾಗುವ ಸಾಧ್ಯತೆಗಳಿವೆ.

ಅಲ್ಲದೆ, ಇಂತಹ ವಿಧಾನದಿಂದ ಹುಟ್ಚಿದ ಮಕ್ಕಳು ಹೆಚ್ಚಿನ ಸಮಸ್ಯೆಯನ್ನು ಹೊಂದಿರುತ್ತವೆ ಎಂದು ಹೇಳಲಾಗಿದೆ. ಅವಧಿ ಮುಂಚಿತ ಹೆರಿಗೆ, ಕಡಿಮೆ ತೂಕ, ಭ್ರೂಣದ ಅಸಹಜತೆ ಮುಂತಾದ ಸಮಸ್ಯೆಗಳನ್ನು ಹೊಂದಿರುತ್ತದೆ. ಆದರೂ ಪ್ರತಿವರ್ಷ ಈ ಉದ್ದಿಮೆಯು ಶೇ.35ರಷ್ಟು ಬೆಳೆಯುತ್ತದೆ.

ಕೃತಕ ವಿಧಾನದಲ್ಲಿ ಮಕ್ಕಳನ್ನು ಬಯಸುವ ದಂಪತಿಗಳಲ್ಲಿ ಕೆಲವರು, ಐಶ್ವರ್ಯಳಂತೆ ಸುಂದರ ಮಕ್ಕಳನ್ನು ಬಯಸುತ್ತಿದ್ದು, ಅತಿಸುಂದರವಾಗಿರುವ ಉತ್ತರ ಭಾರತೀಯ ದಾನಿಗಳ ರೇತಸ್ಸನ್ನು ಬಯಸುತ್ತಾರಂತೆ. ನಾವು ಹೇಗಿದ್ದರೂ ಮುಂದಿನ ವಂಶ ಸುಂದರವಾಗಿರಲಿ ಎಂಬ ಉದ್ದೇಶದಿಂದ ದಂಪತಿಗಳು ಇದಕ್ಕೆ ತಯಾರಿರುತ್ತಾರೆ ಎಂದು ತಜ್ಞರೊಬ್ಬರು ಹೇಳುತ್ತಾರೆ.

ವೈದ್ಯಕೀಯ ವಿಜ್ಞಾನದ ಈ ಬೆಳವಣಿಗೆಯು ಇದೀಗ ಜೀನ್ ಶಾಪಿಂಗ್, ಡಿಸೈನರ್ ಬೇಬಿ ಮುಂತಾದ ಪರಿಕಲ್ಪನೆಗಳನ್ನು ಹುಟ್ಟುಹಾಕಿದ್ದು, ರೇತಸ್ಸು ಖರೀದಿ ಅಂತರ್ಜಾಲದ ಮೂಲಕವೂ ನಡೆಯುತ್ತಿದೆಯಂತೆ!

Share this Story:

Follow Webdunia kannada