Select Your Language

Notifications

webdunia
webdunia
webdunia
webdunia

ಚೂಯಿಂಗ್ ಗಮ್ ಜಗಿದರೆ ಸರ್ಜರಿಯಿಂದ ಚೇತರಿಕೆ ಶೀಘ್ರ

ಚೂಯಿಂಗ್ ಗಮ್ ಸರ್ಜರಿ ಆರೋಗ್ಯ
ಚೂಯಿಂಗ್ ಗಮ್ ಜಗಿಯುತ್ತಿದ್ದರೆ ಶಸ್ತ್ರಕ್ರಿಯೆಯಿಂದ ಬಲು ಬೇಗನೆ ಚೇತರಿಸಿಕೊಳ್ಳಬಹುದೇ? ಈ ಪ್ರಶ್ನೆಗೆ ಬ್ರಿಟಿಷ್ ಸಂಶೋಧಕರು ಉತ್ತರ ಕಂಡುಕೊಂಡಿದ್ದಾರೆ. ಕೆಲವು ರೋಗಿಗಳಿಗೆ ಈ ವಿಧಾನ ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಮಿಸಿದೆ ಎನ್ನುತ್ತಾರವರು.

ದೊಡ್ಡಕರುಳಿನ ಶಸ್ತ್ರಕ್ರಿಯೆಯ ಬಳಿಕ ಮಲವಿಸರ್ಜನೆಯು ಸಾಮಾನ್ಯ ಮತ್ತು ಆರೋಗ್ಯಪೂರ್ಣ ಸ್ಥಿತಿಗೆ ಮರಳಲು ಚೂಯಿಂಗ್ ಗಮ್ ನೆರವಾಗಬಹುದು ಎಂದು ಐದು ಅಧ್ಯಯನಗಳನ್ನೊಳಗೊಂಡ ವಿಶ್ಲೇಷಣೆಯೊಂದು ತಿಳಿಸಿದೆ. ದೊಡ್ಡ ಕರುಳಿನ ಸರ್ಜರಿ ಬಳಿಕ ಕೆಲವು ರೋಗಿಗಳಿಗೆ ಮಲ ವಿಸರ್ಜನೆಯಲ್ಲಿ ಸಮಸ್ಯೆಯುಂಟಾಗಿತ್ತು. ಆದರೆ ಗಮ್ ಜಗಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆದಿದೆ ಎಂದು ದೇಹವನ್ನು ಫೂಲ್ ಮಾಡಬಹುದಂತೆ!

ಚೂಯಿಂಗ್ ಗಮ್ ಜಗಿಯುತ್ತಿರುವಾಗ ಹೆಚ್ಚು ಹೆಚ್ಚು ರಸವು ಸ್ರವಿಸಲ್ಪಡುತ್ತದೆ. ಲಾಲಾ ರಸದೊಂದಿಗೆ, ಅದು ಅನ್ನನಾಳದ ಹಾರ್ಮೋನುಗಳು ಮತ್ತು ಮೇದೋಜೀರಕಾಂಗದ ಸ್ರಾವಗಳನ್ನೂ ಉತ್ತೇಜಿಸುತ್ತದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.

ಆರ್ಕೈವ್ಸ್ ಆಫ್ ಸರ್ಜರಿ ಎಂಬ ನಿಯತಕಾಲಿಕದ ಆಗಸ್ಟ್ ಸಂಚಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. 158 ರೋಗಿಗಳನ್ನು ಒಳಗೊಂಡ ಐದು ಅಧ್ಯಯನಗಳ ಸಮೂಹವಾಗಿದೆ ಈ ವರದಿ. ದೊಡ್ಡ ಕರುಳಿನ ಶಸ್ತ್ರಕ್ರಿಯೆಗೊಳಗಾದ ರೋಗಿಗಳಲ್ಲಿ ಕೆಲವರು ದಿನಕ್ಕೆ ಮೂರು ಬಾರಿ ಐದರಿಂದ 45 ನಿಮಿಷಗಳ ಕಾಲ ಸಕ್ಕರೆ-ರಹಿತ ಗಮ್ ಜಗಿದರು. ಉಳಿದವರು ಗಮ್ ಜಗಿಯಲೇ ಇಲ್ಲ.

ಗಮ್ ಜಗಿದವರ ಮಲವಿಸರ್ಜನೆ ಕ್ರಿಯೆಯು ಬೇಗನೆ ಸಾಮಾನ್ಯಸ್ಥಿತಿಗೆ ಮರಳಿತು. ರೋಗಿಗಳು ಎಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂಬುದನ್ನೂ ಅಧ್ಯಯನ ಮಾಡಲಾಯಿತು. ಗಮ್ ಜಗಿದವರು ಸರಾಸರಿಯಾಗಿ ಒಂದು ದಿನ ಮೊದಲೇ ಆಸ್ಪತ್ರೆಯಿಂದ ಬಿಡುಗಡೆ ಪಡೆದರು. ಇದೇ ಸಂದರ್ಭದಲ್ಲಿ ಗಮ್‌ನಿಂದಾಗಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ ಎಂಬುದನ್ನೂ ಕಂಡುಕೊಳ್ಳಲಾಯಿತು.

ಹಾಗಿದ್ದರೆ, ಚೂಯಿಂಗ್ ಗಮ್‌ಗಾಗಿ ಒಂದೆರಡು ರೂಪಾಯಿ ಖರ್ಚು ಮಾಡಿದರೆ, ಆಸ್ಪತ್ರೆ ವೆಚ್ಚದಲ್ಲಿ ಸಾವಿರಾರು ರೂಪಾಯಿಗಳನ್ನು ಉಳಿಸಲೂಬಹುದು. ಆದರೆ ಯಾವುದೇ ಗಮ್ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Share this Story:

Follow Webdunia kannada