ಕರುಳುಗಳಲ್ಲಿ ಮಾತ್ರ ಕಾಣುವ ಪ್ರೊಟೀನೊಂದು ಕರುಳು ಕ್ಯಾನ್ಸರ್ ಮತ್ತು ಸಂಭಾವ್ಯವಾಗಿ ಇತರ ಗಡ್ಡೆಗಳಿಗೆ ಚಿಕಿತ್ಸೆ ನೀಡಲೂ ಸಹಾಯಕವಾಗಬಹುದು ಎಂಬ ಅಂಶವನ್ನು ಅಮೆರಿಕ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಈ ಲಸಿಕೆಯ ಪ್ರಯೋಗವನ್ನು ಇಲಿಯೊಂದರ ಮೇಲೆ ಮಾಡಲಾಗಿದ್ದು, ಪ್ರೊಟೀನಿನ ಲಸಿಕೆ ನೀಡಿದ ಬಳಿಕ ಸೋಂಕು ತಗುಲಿದ ಗಡ್ಡೆಗಳು ಶ್ವಾಸಕೋಶ ಮತ್ತು ಲಿವರ್‌ಗೆ ಹರಡುವ ಪ್ರಮಾಣ ಇತರ ಪ್ರಕರಣಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ರಾಷ್ಚ್ರೀಯ ಕ್ಯಾನ್ಸರ್ ಸಂಸ್ಥೆಯ ಪತ್ರಿಕೆ ಪ್ರಕಟಿಸಿದೆ.
ಹಲವು ಕ್ಯಾನ್ಸರ್ ಲಸಿಕೆಗಳ ಕುರಿತು ಅವರು ಕಾರ್ಯನಿರ್ವಹಿಸುತ್ತಿದ್ದರೂ, ಸೂಕ್ತ ಗುರಿತಲುಪಲು ಸೂಕ್ತ ಲಸಿಕೆಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ. ಆಂಟಿಜೆನ್ಸ್ ಎಂದು ಕರೆಯಲ್ಪಡುವ ಈ ಪ್ರೊಟೀನು, ಗಡ್ಡೆಗಳಲ್ಲಿ ಮಾತ್ರ ಕಂಡುಬರುತ್ತಿದ್ದು, ಇದು ಆರೋಗ್ಯವಂತ ಟಿಷ್ಯೂವಿನಲ್ಲಿ ಕಂಡುಬರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆಡಂ ಸ್ನೂಕ್ ಮತ್ತು ಫಿಲಡೆಲ್ಫಿಯಾದ ಥಾಮಸ್ ಜಫರ್ಸನ್ ವಿಶ್ವವಿದ್ಯಾನಿಲಯದ ಡಾ| ಸ್ಕಾಟ್ ವಾಲ್ಡ್‌ಮನ್ ಮತ್ತು ಅವರ ಸಹೋದ್ಯೋಗಿಗಳು ಕರುಳು ಕ್ಯಾನ್ಸರ್ ಕುರಿತಂತೆ ನಿರ್ದಿಷ್ಟವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಜಾಗತಿಕವಾಗಿ ಪ್ರತಿವರ್ಷ 1.2 ದಶಲಕ್ಷ ಮಂದಿಗೆ ಕರುಳು ಕ್ಯಾನ್ಸರ್ ತಗುಲುತ್ತಿದ್ದರೆ, ಈ ರೋಗ ತಗುಲಿದ 1,30,000 ಮಂದಿ ಪ್ರತಿವರ್ಷ ಸಾಯುತ್ತಿದ್ದಾರೆ ಎಂದು ವರದಿ ಹೇಳಿದೆ.