ಅತಿಯಾದ ಕಾಫಿ ಸೇವನೆಯಿಂದ ನಿದ್ರಾಹೀನತೆ
ವಾಷಿಂಗ್ಟನ್ , ಸೋಮವಾರ, 10 ಡಿಸೆಂಬರ್ 2007 (18:41 IST)
ನೀವು ರಾತ್ರಿ ಎಚ್ಚರವಾಗಿರಲು ಕಾಫಿ ಕುಡಿಯಲು ಬಯಸಿದ್ದೀರಾದರೆ ತೊಂದರೆಗೆ ಸಿಕ್ಕಿಕೊಳ್ಳುವುದು ಖಂಡಿತ. ಹೊಸ ಅಧ್ಯಯನವೊಂದರ ಪ್ರಕಾರ ಶಕ್ತಿ ವರ್ಧನೆಗೆ ಕೆಫೀನ್ ಸೇವನೆ ಮಾಡುವುದರಿಂದ ಗಂಭೀರ ನಿದ್ರಾಹೀನತೆಯ ಸಮಸ್ಯೆಗಳು ಉದ್ಭವಿಸುತ್ತದೆ. ಅನೇಕ ಮಂದಿಗೆ ಕೆಫೀನ್ ಸೇವನೆ ಶಕ್ತಿವರ್ಧಿತ ಮತ್ತು ಉತ್ತೇಜನಕಾರಿ ಎಂಬ ಭಾವನೆ ಉಂಟಾಗಿದೆಯೆಂದು ಹೌಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಯ ವೈದ್ಯ ಸೆಪ್ಟಿಮಸ್ ಹೇಳುತ್ತಾರೆ.ಕೆಫೀನ್ ಅನೇಕ ಸಸ್ಯಗಳ ಎಲೆಗಳಲ್ಲಿ ಮತ್ತು ಬೀಜಗಳಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗುವ ಉತ್ತೇಜಕವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.ಅನೇಕ ಮಂದಿಗೆ ಸೀಮಿತ ಪ್ರಮಾಣದಲ್ಲಿ ಕಾಫಿ ಸೇವನೆಯಿಂದ ಉತ್ತೇಜನಕಾರಿ ಮತ್ತು ಜಾಗೃತ ಮನೋಭಾವ ಉಂಟಾಗುತ್ತದೆ. ಆದರೆ ಕೆಫೀನ್‌ನ ಅತ್ಯಧಿಕ ಡೋಸ್ ಅಂದರೆ 500ರಿಂದ 600 ಮಿಲಿಗ್ರಾಂ ಅಥವಾ ದಿನಕ್ಕೆ 4ರಿಂದ 7 ಕಪ್ ಕಾಫಿ ಕುಡಿಯುವುದರಿಂದ ನಿದ್ರಾಹೀನತೆಯ ಸಮಸ್ಯೆಗಳು ಉಂಟಾಗುತ್ತದೆ ಮತ್ತು ಹೃದಯಬಡಿತ, ತಲೆನೋವು ಮತ್ತು ಸ್ನಾಯುಸೆಳೆತಗಳು ಕಾಣಿಸಿಕೊಳ್ಳುತ್ತವೆ.ಈ ಕಾರಣಗಳಿಂದಾಗಿ 200 ಮಿಲಿಗ್ರಾಂಗಿಂತ ಹೆಚ್ಚಿಗೆ ಕೆಫೀನ್ ಸೇವಿಸಬಾರದೆಂದು ವೈದ್ಯರು ಸಲಹೆ ಮಾಡುತ್ತಾರೆ.ರಾತ್ರಿ ಎಚ್ಚರವಾಗಿರಲು ಕೆಫೀನ್ ಮೇಲೆ ಅವಲಂಬಿತವಾಗಿರುವವರು ನಿದ್ರೆ ಮಾಡಲು ತೊಂದರೆ ಉಂಟಾಗುವುದೇಕೆಂದು ಪತ್ತೆಹಚ್ಚುವ ಅಗತ್ಯವಿದೆ. ನಿದ್ರೆಗೆ ಅಡ್ಡಿಯಾಗುವ ಸಮಸ್ಯೆಗಳಿಗೆ ಅನೇಕ ಮಂದಿ ಗುರಿಯಾಗುತ್ತಿದ್ದು, ಅದು ಅವರಿಗೆ ತಿಳಿಯುವುದೇ ಇಲ್ಲ.ಮೂಗಿನ ಹೊಳ್ಳೆಗಳಲ್ಲಿ ಉಸಿರಾಟಕ್ಕೆ ಅಡ್ಡಿಯಾಗುವುದರಿಂದ ರಾತ್ರಿ ಗಾಢ ನಿದ್ರೆಯಲ್ಲಿರುವಾಗ ಅನೇಕ ಬಾರಿ ಎಚ್ಚರಾಗುತ್ತಾರೆ. ಬೆಳಿಗ್ಗೆ ಎದ್ದಾಗ ಅತಿಯಾದ ಆಯಾಸವುಂಟಾಗಿ ಕೆಫೀನ್ ಪೇಯ ಸೇವಿಸಲು ಸಿದ್ಧರಾಗಿರುತ್ತಾರೆ. ಇಂತಹ ಪರಿಸ್ಥಿತಿಯು ದಿಢೀರ್ ಹೃದಯಸ್ತಂಭನ, ಪಾರ್ಶ್ವವಾಯು ಮತ್ತು ನಿದ್ರಾಹೀನತೆಗೆ ಮಾರ್ಗ ಕಲ್ಪಿಸುತ್ತದ್ದಾರಿಂದ ವೈದ್ಯರನ್ನು ನೋಡುವುದು ಒಳ್ಳೆಯದು ಎಂದು ಸೆಪ್ಟಿಮಸ್ ಹೇಳುತ್ತಾರೆ.ನಿದ್ರಾಹೀನತೆಯು ಕಾರ್ ಅಪಘಾತ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಾದ ಖಿನ್ನತೆ, ಅಧಿಕ ರಕ್ತದ ಒತ್ತಡ ಮತ್ತು ಸ್ಮರಣೆಕುಂಠಿತ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ರಾತ್ರಿ 8 ಗಂಟೆಗಳಷ್ಟು ನಿದ್ರೆಗೆ ಅವಕಾಶ ಸಿಕ್ಕಿದರೆ ಅವರೆಷ್ಟು ಚೈತನ್ಯಶೀಲರಾಗುತ್ತಾರೆನ್ನುವುದು ಅನೇಕ ಮಂದಿಗೆ ಅರಿವಿರುವುದಿಲ್ಲ.