Webdunia - Bharat's app for daily news and videos

Install App

ಹೃದ್ರೋಗ ತಪಾಸಣೆಗೆ ಒತ್ತಡ ಪರೀಕ್ಷೆ

Webdunia
ಶನಿವಾರ, 22 ನವೆಂಬರ್ 2014 (11:36 IST)
ಹೃದಯಕ್ಕೆ ವ್ಯಾಯಾಮ ಪರೀಕ್ಷೆ
 
ರೋಗಿಗಳು ವಿಶ್ರಾಂತ ಸ್ಥಿತಿಯಲ್ಲಿರುವಾಗ ಕೆಲವು ರೀತಿಯ ಹೃದ್ರೋಗಗಳು ಗೋಚರವಾಗುವುದಿಲ್ಲ. ವಿಶ್ರಾಂತ ಸ್ಥಿತಿಯಲ್ಲಿ ದೈಹಿಕ ತಪಾಸಣೆ ಮತ್ತು ಇಸಿಜಿ ತಪಾಸಣೆಗಳು ಸಂಪೂರ್ಣವಾಗಿ ಸಹಜವಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಹೃದಯಕ್ಕೆ ಹೆಚ್ಚಿನ ಕೆಲಸದ ಹೊರೆ ನೀಡಿದಾಗ ಮಾತ್ರ ಹೃದಯದ ಏರುಪೇರುಗಳು ಕಂಡುಬರುತ್ತವೆ.
ವ್ಯಾಯಾಮದ ವೇಳೆ ಹೃದಯ ಮತ್ತು ರಕ್ತನಾಳ ವ್ಯವಸ್ಥೆಯ ಮೌಲ್ಯಮಾಪನಕ್ಕಾಗಿಒತ್ತಡ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಿಂದ ಎರಡು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಲಭ್ಯ.
 
1). ಸಾಮಾನ್ಯ ತಿಳಿವಿಗೆ ಮೀರಿದ ಆದರೆ, ವ್ಯಾಯಾಮದಿಂದ ಹೃದಯಕ್ಕೆ ಒತ್ತಡ ಹೇರಿದಾಗ ಮಾತ್ರ ಗೋಚರವಾಗುವ ಯಾವುದಾದರೂ  ಹೃದಯ ಖಾಯಿಲೆ ಇದೆಯೇ?
2) ಒಂದೊಮ್ಮೆ ಅಂತಹ ಖಾಯಿಲೆಗಳಿದ್ದರೆ ಅದು ಎಷ್ಟರ ಮಟ್ಟಿಗೆ ತೀವ್ರವಾಗಿದೆ?
ಒತ್ತಡ ಪರೀಕ್ಷೆಯನ್ನು ನಡೆಸುವ ಬಗೆ ಹೇಗೆ?
 
ರೋಗಿಯನ್ನು ಇಸಿಜಿ ಮೆಶಿನ್‌ಗೆ ಸಂಯೋಜಿಸಿ, ಮತ್ತು ರಕ್ತದೊತ್ತಡ ಪರೀಕ್ಷೆಯ ಉಪಕರಣವನ್ನು ಒಂದು ತೋಳಿಗೆ ಸುತ್ತಿರಬೇಕು. ಕೆಲವೊಮ್ಮೆ ರಕ್ತದಲ್ಲಿನ ಆಕ್ಸಿಜನ್ ಅಳೆಯಲು ಕೈ ಬೆರಳ ತುದಿಗೆ ಬಟ್ಟೆಒಣ ಹಾಕುವ ವೇಳೆಗೆ ಬಳಸುವ ಕ್ಲಿಪ್ಪಿನಂತಹ ಸಂವೇದನಾ ವಸ್ತುವನ್ನು ಬಳಸಲಾಗುತ್ತದೆ. ಮೂಲಮಟ್ಟದ ಇಸಿಜಿ ಪಡೆದ ಮೇಲೆ ಟ್ರೇಡ್‌ಮಿಲ್‌ನಲ್ಲಿ ನಡೆಯುವ ಮೂಲಕ ಅಥವಾ ವ್ಯಾಯಾಮ ಸೈಕಲ್ ತುಳಿಯುವ ಮೂಲಕ ರೋಗಿಯಿಂದ ಕಡಿಮೆ ಮಟ್ಟದ ವ್ಯಾಯಾಮ ಆರಂಭವಾಗುತ್ತದೆ. ವ್ಯಾಯಾಮದ ಪ್ರತೀ ಹಂತದಲ್ಲೂ ರೋಗಿಯು ಅನುಭವಿಸುತ್ತಿರುವ ಯಾವುದೇ ರೋಗ ಲಕ್ಷಣದೊಂದಿಗೆ, ರೋಗಿಯ ನಾಡಿಮಿಡಿತ, ರಕ್ತದೊತ್ತಡ, ಮತ್ತು ಇಸಿಜಿಯನ್ನು ದಾಖಲಿಸಲಾಗುತ್ತದೆ.
 
ಗರಿಷ್ಠಪ್ರಮಾಣದ(ಮಾಗ್ಸಿಮಲ್) ಒತ್ತಡ ಪರೀಕ್ಷೆಯಲ್ಲಿ ನಿಧಾನಕ್ಕೆ ವ್ಯಾಯಾಮದ ಮಟ್ಟವನ್ನು ಏರಿಸಲಾಗುತ್ತದೆ. ಆಯಾಸ, ಅಥವಾ ಎದೆನೋವು, ಉಸಿರಾಟದ ನಿಧಾನಗತಿ ಅಥವಾ ತಲೆಸುತ್ತುವಿಕೆ ಯಂತಹ ಲಕ್ಷಣಗಳು ವ್ಯಾಯಾಮಕ್ಕೆ ತಡೆಯೊಡ್ಡುವ ತನಕ ಅಥವಾ ಇಸಿಜಿಯು ಹೃದಯದ ತೊಂದರೆಯನ್ನು ಸೂಚಿಸುವ ತನಕ ವ್ಯಾಯಾಮವನ್ನು ಹೆಚ್ಚಿಸಲಾಗುತ್ತದೆ. ಪರಿಧಮನಿ ಅಪಧಮನಿ ರೋಗದ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಪತ್ತೆಹಚ್ಚುವ ಉದ್ದೇಶ ಇದ್ದಾಗ ಮಾತ್ರ ಮ್ಯಾಕ್ಸಿಮಲ್ ಒತ್ತಡ ಪರೀಕ್ಷೆಗಳನ್ನು ಮಾಡಬೇಕು.
 
ಸಬ್‌ಮ್ಯಾಕ್ಸಿಮಲ್ ಒತ್ತಡ ಪರೀಕ್ಷೆ ವೇಳೆ ರೋಗಿಯಿಂದ ಪೂರ್ವನಿಗದಿತ ಮಟ್ಟದ ತನಕ ಮಾತ್ರ ವ್ಯಾಯಾಮ ಮಾಡಲಾಗುತ್ತದೆ. ಅಪಧಮನಿ ರೋಗಪತ್ತೆಯಾಗಿರುವ ರೋಗಿಗಳು ನಿರ್ದಿಷ್ಟ ಮಟ್ಟದ ವ್ಯಾಯಾಮವನ್ನು ಸುರಕ್ಷಿತವಾಗಿ ಮಾಡಬಹುದೆ ಎಂಬುದನ್ನು ಪತ್ತೆಹಚ್ಚಲು ಈ ವ್ಯಾಯಾಮ ಮಾಡಲಾಗುತ್ತದೆ.
 
ಪರೀಕ್ಷೆ ಬಳಿಕ ಎಲ್ಲ ಲಕ್ಷಣಗಳು ಮಾಯವಾಗುವ ತನಕ ಮತ್ತು ನಾಡಿಮಿಡಿತ, ರಕ್ತದೊತ್ತಡ ಮತ್ತು ಇಸಿಜಿ ಮೂಲಮಟ್ಟಕ್ಕೆ ಹಿಂತಿರುಗುವ ತನಕ ರೋಗಿಯ ಮೇಲೆ ನಿಗಾ ವಹಿಸಲಾಗುತ್ತದೆ.
 
ಒತ್ತಡ ಪರೀಕ್ಷೆಯ ಮೂಲಕ ಯಾವ ರೀತಿಯ ಹೃದ್ರೋಗಗಳನ್ನು ಪತ್ತೆ ಹಚ್ಚಬಹುದು?
ಒತ್ತಡ ಪರೀಕ್ಷೆಯು ಪ್ರಮುಖವಾಗಿ ಪರಿಧಮನಿ ರೋಗವನ್ನು ಪತ್ತೆಹಚ್ಚಲು ಪ್ರಯೋಜನಕಾರಿಯಾಗಿದೆ. ಪರಿಧಮನಿ ರೋಗವು, ಹೃದಯದ ಸ್ನಾಯುಗಳಿಗೆ ರಕ್ತ ಸರಬರಾಜು ಮಾಡುವ ಪರಿಧಮನಿ ರಕ್ತನಾಳಗಳಲ್ಲಿ ತಡೆಗಳನ್ನು ಉಂಟುಮಾಡುತ್ತದೆ. ಆಂಶಿಕತಡೆ ಇದ್ದಲ್ಲಿ ವಿಶ್ರಾಂತ ಸ್ಥಿತಿಯಲ್ಲಿ ಹೃದಯದ ಸ್ನಾಯುಗಳಿಗೆ ಅಗತ್ಯವಿರುವಷ್ಟು ರಕ್ತವನ್ನು ಅದು ಪಡೆಯಬಹುದು. ಆದರೆ, ರೋಗಿ ವ್ಯಾಯಾಮ ಮಾಡುತ್ತಿದ್ದರೆ, ಹೃದಯದ ಸ್ನಾಯುಗಳಿಗೆ ಪ್ರಸ್ತುತ ಅಗತ್ಯವಿರುವಷ್ಟು ಉನ್ನತ ಮಟ್ಟದಲ್ಲಿ ರಕ್ತ ಪೂರೈಸಲು ಆಂಶಿಕ ತಡೆ ಬಾಧಿಸುತ್ತಿರುವ ರಕ್ತನಾಳಕ್ಕೆ ಸಾಧ್ಯವಾಗಲಾರದು. 
 
ಇದ್ದಕ್ಕಿದ್ದಂತೆ ಹೃದಯದ ಸ್ನಾಯುವಿನ ಒಂದು ಭಾಗವು ಸಾಕಷ್ಟು ರಕ್ತದ ಹರಿವು ಪಡೆಯದೇ ಇದ್ದಾಗ, ಅದು ಆಮ್ಲಜನಕ ಕೊರತೆ ಅಥವಾ ರಕ್ತದ ಕೊರತೆ ಎದುರಿಸುತ್ತದೆ. ರಕ್ತಕೊರತೆಯ ಸ್ನಾಯುವಿನಿಂದಾಗಿ ಆಗಾಗ್ಗೆ ಹೃದಯದ ಅಸ್ವಸ್ಥತೆ (‘ಆಂಜಿನ’ ಅಥವಾ ಎದೆಹಿಡಿತದ ಲಕ್ಷಣ) ಉಂಟಾಗುತ್ತದೆ ಮತ್ತು ಇಸಿಜಿಯ ಗುಣಲಕ್ಷಣಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದು ಹೃದಯ ಬಡಿತದಲ್ಲಿ ಅಥವಾ ರಕ್ತದೊತ್ತಡದಲ್ಲೂ ಬದಲಾವಣೆ ಉಂಟುಮಾಡಬಹುದು. 
 
ಹೃದಯಕ್ಕೆ ಒತ್ತಡದ ವ್ಯಾಯಾಮ ನೀಡುವುದರಿಂದ ಪರಿಧಮನಿ ರಕ್ತನಾಳಗಳಲ್ಲಿ ಆಂಶಿಕ ತಡೆಗಳಿಂದಾಗಿ ಉಂಟಾಗಿರುವ ಅಸಹಜತೆಗಳನ್ನು ಗೊತ್ತುಪಡಿಸುತ್ತದೆ- ವಿಶ್ರಾಂತ ಸ್ಥಿತಿಯಲ್ಲಿ ಗೋಚರವಾಗದ ಅಸಹಜತೆಗಳು. ಏಕೆಂದರೆ, ವ್ಯಾಯಾಮ ಉದ್ವೇಗಕಾರಕ ಹಾರ್ಮೋನುಗಳಾದ ಅಡ್ರೆನೆಲಿನ್‌ಗಳನ್ನು ಹೆಚ್ಚಿಸುತ್ತದೆ, ಮತ್ತು ಅಡ್ರೆನೆಲಿನ್‌ ಮಟ್ಟ ಹೆಚ್ಚಿದಾಗ ಉಂಟಾಗುವ ಹೃದಯ ಬಡಿತದ ಏರುಪೇರುಗಳನ್ನು ಪತ್ತೆಹಚ್ಚಲೂ ಒತ್ತಡ ಪರೀಕ್ಷೆಯು ಪ್ರಯೋಜನಕಾರಿಯಾಗಿದೆ.
 
ಒತ್ತಡ ಪರಿಕ್ಷೆಯು ರೋಗಿಯ ಹೃದಯದ ಕಾರ್ಯಾಚರಣೆ ಸಾಮರ್ಥ್ಯವನ್ನು ಅಳೆಯಲೂ ಸಹಾಯ ಮಾಡುತ್ತದೆ. ಇದರಿಂದ ರಕ್ತನಾಳದ ಆಂಶಿಕ ತಡೆಯ ತೀವ್ರತೆಯನ್ನು ಪತ್ತೆಹಚ್ಚಬಹುದು. ರಕ್ತದ ಕೊರತೆಯು ವ್ಯಾಯಾಮದ ಅಲ್ಪಮಟ್ಟದಲ್ಲೇ ಕಂಡುಬಂತೆಂದಾದಲ್ಲಿ ಈ ತಡೆಗಳು ಹೆಚ್ಚು ತೀವ್ರವಾಗಿವೆ ಎಂದರ್ಥ. ಒಂದುವೇಳೆ  ಹೆಚ್ಚಿನ ಮಟ್ಟದ ವ್ಯಾಯಾಮದ ವೇಳೆ ಕಂಡುಬಂತೆಂದಾದಲ್ಲಿ ರಕ್ತನಾಳಗಳ ತಡೆಗಳು ಅಷ್ಟೊಂದು ತೀವ್ರವಾಗಿಲ್ಲ.ನಿಯತ ಪರೀಕ್ಷೆಗಳು ರೋಗಿಗಳ ರೋಗಸ್ಥಿತಿಯ ಪತ್ತೆಗೆ ಸಹಾಯಕಾರಿ. ಈ ಮೂಲಕ ರೋಗಿಗೆ ನೀಡುವ ಚಿಕಿತ್ಸೆಯನ್ನು ಅವಶ್ಯಕತೆಗೆ ತಕ್ಕಂತೆ ಹೊಂದಿಸಿಕೊಳ್ಳಲು ಅನುಕೂಲವಾಗುತ್ತದೆ.
 
ಒತ್ತಡ ಪರೀಕ್ಷೆಯ ಅಪಾಯಗಳಾವುವು?
ಒತ್ತಡ ಪರೀಕ್ಷೆಗಳು ಸುರಕ್ಷಿತವೆಂದು ಸಾಬೀತಾಗಿವೆ. ವೇಗದ ನಡಿಗೆ ಅಥವಾ ಬೆಟ್ಟ ಏರುವಾಗಿನ ಅಪಾಯದ ಮಟ್ಟವನ್ನೇ ಒತ್ತಡ ಪರೀಕ್ಷೆ ಒಳಗೊಂಡಿದೆ. ಒತ್ತಡದಿಂದ ಉಂಟಾಗುವ ರಕ್ತದ ಕೊರತೆಯು ಹೃದಯಾಘಾತಕ್ಕೆ ದಾರಿಯಾಗಬಹುದು ಅಥವಾ ಗಂಭೀರವಾದ ಹೃದಯಬಡಿತದ ಏರುಪೇರುಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಹೊಂದಿದೆಯಾದರೂ ಪ್ರಾಯೋಗಿಕವಾಗಿ ಇಂತಹ ಘಟನೆಗಳು ತುಂಬ ಅಪರೂಪ. ಒಂದೊಮ್ಮೆ ಇಂತಹ ಗಂಭೀರ ಘಟನೆಗಳು ಸಂಭವಿಸಿದರೂ, ಇದು ವೈದ್ಯರ ಎದುರಲ್ಲೇ ಸಂಭವಿಸುವ ಕಾರಣ ಅವರು ತಕ್ಷಣ ಸೂಕ್ತ ಚಿಕಿತ್ಸೆನೀಡಬಲ್ಲರು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

Show comments