ಅವಿವಾಹಿತರಾಗಿಯೇ ಉಳಿದ ಮಹಿಳೆಯರು ಖುಷಿ ಪಡುವಂತ ಸಂಗತಿಯೊಂದು ಬೆಳಕಿಗೆ ಬಂದಿದೆ. ಆದರೆ ಈ ಸಂಶೋಧನೆಯು ಪುರುಷರನ್ನು ಕೆರಳಿಸಬಹುದು ಮತ್ತು ವಿವಾಹವಾಗದೇ ಒಂಟಿಯಾಗಿ ಉಳಿಯುವುದಕ್ಕೆ ಮಹಿಳೆಯರಿಗೆ ಪ್ರೋತ್ಸಾಹವನ್ನೂ ನೀಡಬಹುದು.
ಬ್ರಿಟನ್ ಸಂಶೋಧಕರು ಅಧ್ಯಯನವೊಂದನ್ನು ಕೈಗೊಂಡು 60 ವರ್ಷ ದಾಟಿದ ಒಂಟಿ ಮಹಿಳೆಯರು ತಮ್ಮ ಪುರುಷ ಸಹವರ್ತಿಗಳಿಗಿಂತ ಸಂತೋಷ ಮತ್ತು ಆರೋಗ್ಯವಂತರಾಗಿ ಸುಖೀಜೀವನ ನಡೆಸುತ್ತಾರೆಂದು ಡೇಲಿ ಟೆಲಿಗ್ರಾಫ್ ಶುಕ್ರವಾರ ವರದಿ ಮಾಡಿದೆ.
60 ವರ್ಷ ವಯಸ್ಸು ದಾಟಿದ ಸಂಗಾತಿರಹಿತ ಒಂಟಿ ಮಹಿಳೆಯು ಆರೋಗ್ಯ ಮತ್ತು ಸಂತೋಷದ ಭಾವನೆ ಅನುಭವಿಸಲು ಕಾರಣವೇನಿರಬಹುದು? ಸಂಶೋಧಕರ ಪ್ರಕಾರ ಒಂಟಿ ಮಹಿಳೆಗೆ ತಮಗಿಂತ ವಯಸ್ಸಾದ ಪುರುಷರನ್ನು 24 ಗಂಟೆಯೂ ಆರೈಕೆ ಮಾಡುವಂತ ತಾಪತ್ರಯ ಇರುವುದಿಲ್ಲ. ಮಹಿಳೆಗೆ 60 ದಾಟಿದ ವಿವಾಹಿತ ಮಹಿಳೆಯ ಪತಿರಾಯರೂ ವೃದ್ಧಾಪ್ಯದ ಅಂಚಿನಲ್ಲಿರುವುದು ಸಹಜ.
ವೃದ್ದಾಪ್ಯದ ಅಂಚಿನಲ್ಲಿರುವ ಪತಿರಾಯನ ಆರೋಗ್ಯದ ಬಗ್ಗೆ ವೃದ್ಧಪತ್ನಿಯೇ ಕಾಳಜಿ ವಹಿಸಬೇಕಾಗುತ್ತದೆ. ಪತಿಯ ಬೇಕು, ಬೇಡಗಳನ್ನು ಗಮನಿಸುತ್ತಾ, ಅವರ ಆರೈಕೆ ಮಾಡುವಷ್ಟರಲ್ಲಿ ಪತ್ನಿ ಸುಸ್ತುಹೊಡೆದು ಹೋಗಿರುತ್ತಾರೆ. ಆಗ ಸಂತೋಷ, ಸಡಗರ, ಆರೋಗ್ಯವೆಲ್ಲ ಮಾಯವಾಗಿರುತ್ತದೆ.
ಯೂರೋಪ್ನ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಸ್ಕಾಂಡಿನೇವಿಯಾದ ವೃದ್ಧ ಮಹಿಳೆಯರು ಸಂತೋಷದಲ್ಲಿರುತ್ತಾರೆಂದು ಸಂಶೋಧನೆ ಗಮನಸೆಳೆದಿದೆ. ಸ್ಕಾಂಡಿನೇವಿಯಾದಲ್ಲಿ ವೃದ್ಧ ಮಹಿಳೆಯರಿಗಾಗಿ ಉದಾರ ಅಭಿವೃದ್ಧಿ ವ್ಯವಸ್ಥೆಗಳಿವೆ.
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಒಂಟಿಯಾಗಿ ಬದುಕುವ ವೃದ್ಧಮಹಿಳೆಯರ ಆರೋಗ್ಯ ಸಮಾನ ವಯಸ್ಕ ವಿವಾಹಿತ ಮಹಿಳೆಯರಿಗಿಂತ ಉತ್ತಮವಾಗಿರುತ್ತದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ಬಗ್ಗೆ ವಹಿಸುವ ತೀವ್ರ ಕಾಳಜಿಯಿಂದ ಸ್ವತಃ ಮಹಿಳೆಯರ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಪಾಪ್ಯುಲೇಷನ್ ಸ್ಟಡೀಸ್ ಕೇಂದ್ರದ ಸಂಶೋಧಕ ಪ್ರೊ. ಎಮಿಲಿ ಗ್ರಂಡಿ ತಿಳಿಸಿದ್ದಾರೆ.
ಸಂಶೋಧನೆಯಿಂದ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಪತ್ನಿಯ ಜತೆ ವಾಸಿಸುವ ಪುರುಷರಿಗಿಂತ ಸಂಬಂಧಿ ಅಥವಾ ಸ್ನೇಹಿತರ ಜತೆ ವಾಸಿಸುವ ಅವಿವಾಹಿತ ಪುರುಷರು ಹೆಚ್ಚು ತೃಪ್ತಿ ಅಥವಾ ಸಂತೋಷದಿಂದ ಕೂಡಿರುವುದಿಲ್ಲ ಎಂದು ಅಧ್ಯಯನದ ವರದಿ ತಿಳಿಸಿದೆ.