Select Your Language

Notifications

webdunia
webdunia
webdunia
webdunia

ಹೃದಯಾಘಾತ ನೋವು ಎಡಭಾಗದಲ್ಲೇ ಬರಬೇಕೆಂದಿಲ್ಲ

ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಸಂದರ್ಶನ

ಹೃದಯಾಘಾತ
ನ್ಯೂಸ್ ರೂಂ, ಬೆಂಗಳೂರು
NRB
ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಅವರು ಕರ್ನಾಟಕದ ಹೆಸರಾಂತ ಹೃದ್ರೋಗ ತಜ್ಞರು. ರಾಜ್ಯದ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರೂ ಹೌದು. ಹೃದ್ರೋಗಕ್ಕೆ ಸಂಬಂಧಿಸಿ ಜನಸಾಮಾನ್ಯರಲ್ಲಿ ತಿಳಿವಳಿಕೆ, ಜಾಗೃತಿ ಮೂಡಿಸುತ್ತ ತಮ್ಮ ವೃತ್ತಿಯೊಂದಿಗೆ ಜನಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೃದ್ರೋಗಕ್ಕೆ ಸಂಬಂಧಿಸಿ ಜನಸಾಮಾನ್ಯರಿಗೆ ತಮ್ಮ ಉಪನ್ಯಾಸಗಳ ಮುಖೇನ ಮಾರ್ಗದರ್ಶನ ನೀಡುತ್ತಿದ್ದಾರೆ. ಸೆಪ್ಟೆಂಬರ್ 30 ವಿಶ್ವ ಹೃದಯ ದಿನಾಚರಣೆ. ಆ ಪ್ರಯುಕ್ತ ವೆಬ್‌ದುನಿಯಾಕ್ಕೆ ಅವರು ನೀಡಿದ ಸಂದರ್ಶನ ವಿವರ ಇಲ್ಲಿದೆ. ವೈದ್ಯರಾಗಿದ್ದುಕೊಂಡು ಸದಾ ಜನಸೇವೆಯ ಆಶಯವನ್ನು ಹೊತ್ತುಕೊಂಡಿರುವ ಇವರು ಹೃದ್ರೋಗ ಬರಲು ಕಾರಣಗಳೇನು, ಬಾಲ್ಯದಲ್ಲೇ ಹೃದ್ರೋಗ ಸಮಸ್ಯೆ ಹುಟ್ಟಿಕೊಳ್ಳುವ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಪ್ರ : ಹೃದಯಾಘಾತದ ಲಕ್ಷಣಗಳೇನು ?
ಹೃದಯಾಘಾತವಾಗುವ ರೋಗಿಗೆ ವಿಪರೀತ ಎದೆ ನೋವು ಕಾಣಿಸಿಕೊಳ್ಳಬಹುದು. ಮೈಯೆಲ್ಲಾ ಬೆವರಿ ತಲೆಸುತ್ತು ಕಂಡು ಬರುವ ಸಾಧ್ಯತೆಯಿದೆ. ಉಸಿರಾಡಲು ಕಷ್ಟವಾಗಬಹುದು. ವಾಂತಿಯಾಗಬಹುದು. ಹಾಗೂ ಪ್ರಜ್ಞೆ ತಪ್ಪಿ ಬೀಳಬಹುದು. ಅಂತಹ ಸಂದರ್ಭದಲ್ಲಿ ರೋಗಿ ಇದ್ದಕ್ಕಿದ್ದಂತೆ ಮರಣ ಹೊಂದಲೂಬಹುದು.

ಹೃದಯಾಘಾತ ನೋವು ಎಲ್ಲರಿಗೂ ಎದೆಯ ಎಡಭಾಗದಲ್ಲೇ ಬರಬೇಕೆಂದಿಲ್ಲ. ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ಭುಜಗಳಲ್ಲಿ, ಗಂಟಲುಗಳಲ್ಲಿ, ದವಡೆಗಳಲ್ಲಿ ಇನ್ನು ಕೆಲವೊಮ್ಮೆ ಗಂಟಲುಗಳ ಮೇಲ್ಭಾಗದಲ್ಲೂ ಕಂಡು ಬರಬಹುದು. ಸಕ್ಕರೆ ಕಾಯಿಲೆಯಿರುವವರಿಗೆ ಹೃದಯಾಘಾತ ನೋವಿಲ್ಲದೆಯೇ ಆಗಬಹುದು.

ಪ್ರ: ಮೊದಲ ಹೃದಯಾಘಾತದ ನಂತರ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳೇನು ?
ಒಮ್ಮೆ ಹೃದಯಾಘಾತ ಆದ ನಂತರ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದರಿಂದ ಮುಂದೆ ಪುನರಾವರ್ತನೆಯಾಗುವುದನ್ನು ತಪ್ಪಿಸಬಹುದು. ಆದರೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಹೃದಯಾಘಾತ ಆಗುವ ಮೊದಲೇ ಮಾಡಿಕೊಳ್ಳುವುದು ಸೂಕ್ತ. ಇದಕ್ಕೆ ಬಹು ಮುಖ್ಯವಾಗಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

ಪ್ರ : ಜೀವನ ಶೈಲಿಯನ್ನು ಹೇಗೆ ಬದಲಾಯಿಸಿಕೊಳ್ಳಬಹುದು ?
webdunia
WD
ಧೂಮಪಾನ ಸೇವನೆಯನ್ನು ಕಡ್ಡಾಯವಾಗಿ ಬಿಡಬೇಕು. ಇತರರೂ ಬಿಡುವಂತೆ ಪ್ರೇರಣೆಯಾಗಬೇಕು. ಹೃದಯಾಘಾತ ಬರುವಲ್ಲಿ ಧೂಮಪಾನ ಪ್ರಮುಖ ಪಾತ್ರವಹಿಸುತ್ತದೆ ಎಂಬ ವಿಷಯವನ್ನು ಎಲ್ಲರೂ ಮನದಲ್ಲಿಟ್ಟಿರಬೇಕು. ಧೂಮಪಾನ ಮಾಡುವವರಲ್ಲಿ ಹೃದಯಾಘಾತ ಎರಡರಿಂದ 3 ಪಟ್ಟು ಹೆಚ್ಚಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಆಗುವುದಕ್ಕೆ ಧೂಮಪಾನವೇ ಪ್ರಮುಖ ಕಾರಣ.

ನಿತ್ಯವೂ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ವ್ಯಾಯಾಮ ರಹಿತ ಜೀವನ ಶೈಲಿ ಹೃದ್ರೋಗ ಬರುವುದಕ್ಕೆ ಪ್ರಮುಖ ಕಾರಣ. ವೇಗವಾಗಿ ನಡೆಯುವುದು, ಸೈಕಲ್ ಸವಾರಿ, ಈಜುವುದು ಇತ್ಯಾದಿ ವ್ಯಾಯಾಮಗಳನ್ನು ಮಾಡುವುದು ಉತ್ತಮ.

ಪ್ರ: ಜನ್ಮಜಾತ ಹೃದಯ ರೋಗಗಳಿಗೆ ಏನು ಕಾರಣ ?
ಸಾಮಾನ್ಯವಾಗಿ ಹುಟ್ಟು ಹೃದಯ ರೋಗಗಳು ವಯಸ್ಕರಾದ ಬಳಿಕ ಬೆಳಕಿಗೆ ಬರುತ್ತದೆ. ಇಂದು ಹುಟ್ಟುವ 500 ಮಕ್ಕಳಲ್ಲಿ ಒಂದು ಮಗುವಿಗೆ ತೀವ್ರ ಹೃದಯದ ಕಾಯಿಲೆಗಳಿರುವುದು ಪತ್ತೆಯಾಗಿದೆ. ಗರ್ಭಿಣಿಯರು ಕೆಲವು ಔಷಧ ಸೇವನೆಯಿಂದ, ಕೆಲವು ಸೋಂಕು ರೋಗಗಳಿಂದ ಹಾಗೂ ವಂಶಪಾರಂಪರ್ಯವಾಗಿಯೂ ಹುಟ್ಟುವ ಮಗುವಿಗೆ ಹೃದ್ರೋಗ ಸಮಸ್ಯೆ ಬರಬಹುದು.

ಪ್ರ : ರಕ್ತದೊತ್ತಡಕ್ಕೂ ಹೃದ್ರೋಗಕ್ಕೂ ಸಂಬಂಧವಿದೆಯೇ ?
ರಕ್ತದ ಏರೊತ್ತಡ ಅದೊಂದು ವಿಶಿಷ್ಟ ಕಾಯಿಲೆ. ಇದು ಬಹಳ ಸಮಯದವರೆಗೂ ಏನೂ ತೊಂದರೆ ಕಾಣಿಸಿಕೊಳ್ಳದೆ ಒಳಗಿಂದೊಗೇ ದೇಹದ ಪ್ರಮುಖ ಅಂಗಗಳಾದ ಹೃದಯ, ಮೆದುಳು ಮತ್ತು ಮೂತ್ರ ಜನಕಾಂಗಗಳಿಗೆ ಧಕ್ಕೆ ಉಂಟು ಮಾಡುತ್ತದೆ. ಆದ್ದರಿಂದ ಈ ಏರು ಒತ್ತಡವನ್ನು ಮೊದಲೇ ಹತೋಟಿಯಲ್ಲಿಟ್ಟುಕೊಂಡರೆ ಮುಖ್ಯ ಅಂಗಗಳನ್ನು ರಕ್ಷಿಸಿಕೊಳ್ಳಬಹುದು.

ಪ್ರ : ಮಧ್ಯ ವಯಸ್ಕರಿಗೆ ನಿಮ್ಮ ಸಲಹೆ ಏನು ?
40 ವರ್ಷ ದಾಟುತ್ತಿದ್ದಂತೆಯೇ ಹೃದಯಕ್ಕೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಗಳಿದ್ದರೂ, ಇಲ್ಲದಿದ್ದರೂ ಒಮ್ಮೆ ಕೊಲೆಸ್ಟರಾಲ್ ಪರೀಕ್ಷೆ ಮಾಡಿಸುವುದು ಉತ್ತಮ. ಏನೂ ತೊಂದರೆ ಕಂಡು ಬರದಿದ್ದರೂ ಪ್ರತೀ 2 ವರ್ಷಗಳಿಗೊಮ್ಮೆ ಮೇಲೆ ಹೇಳಿದ ಪರೀಕ್ಷೆಗಳನ್ನು ಮಾಡಿಸುವುದು ಒಳ್ಳೆಯದು. ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಇರುವವವರು, ಸಂಬಂಧಿಕರಲ್ಲಿ ಹೃದಯಾಘಾತ ಇರುವವರು, ಈ ಪರೀಕ್ಷೆಗಳನ್ನು ಮೊದಲೇ ಮಾಡಿಸುವುದು ಸೂಕ್ತ.

Share this Story:

Follow Webdunia kannada