ಹಿಂಸಾ ದೃಶ್ಯಗಳನ್ನು ವೈಭವೀಕರಿಸುವ ಚಲನಚಿತ್ರಗಳು ಮತ್ತು ಟಿವಿಗಳನ್ನು ನೋಡಿದ ವ್ಯಕ್ತಿಗಳ ಮೆದುಳುಗಳಲ್ಲಿ ಬದಲಾವಣೆಯನ್ನು ಅಳೆದಾಗ ಇಂತಹ ದೃಶ್ಯಗಳನ್ನು ವೀಕ್ಷಿಸುವ ವ್ಯಕ್ತಿಗಳ ಮೆದುಳಿನಲ್ಲಿ ವ್ಯಗ್ರ ನಡವಳಿಕೆ ನಿಯಂತ್ರಿಸುವ ಭಾಗ ಕಡಿಮೆ ಕ್ರಿಯಾಶೀಲತೆ ಹೊಂದಿರುವುದನ್ನು ನರವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಕೊಲಂಬಿಯ ವಿವಿ ವೈದ್ಯಕೀಯ ಕೇಂದ್ರದ ಸಂಶೋಧಕರು ಫಂಕ್ಷನಲ್ ಮ್ಯಾಗ್ನೆಟಿಕ್ ರಿಸೋನೆಸ್ಸ್ ಇಮೇಜಿಂಗ್(ಕ್ರಿಯಾಶೀಲವಾದ ಮೆದುಳಿನ ಭಾಗಕ್ಕೆ ರಕ್ತದ ಹರಿವನ್ನು ದಾಖಲಿಸುವುದು) ತಂತ್ರವನ್ನು ತಮ್ಮ ಅಧ್ಯಯನದಲ್ಲಿ ಬಳಸಿದರು.
ಕೆಲವು ಜನಪ್ರಿಯ ಚಿತ್ರಗಳಿಂದ ಹಲವಾರು ಹಿಂಸಾದೃಶ್ಯದ ಕ್ಲಿಪ್ಗಳನ್ನು ಪ್ರೇಕ್ಷಕರು ವೀಕ್ಷಿಸಿದ ಬಳಿಕ ಅಸಮಂಜಸ ಅಥವಾ ನಿರೀಕ್ಷಿಸದ ವ್ಯಗ್ರ ನಡವಳಿಕೆಯನ್ನು ದಮನಿಸಲು ಕಾರಣವಾದ ಮೆದುಳಿನ ಜಾಲ ಸೇರಿದಂತೆ ಬಲ ಲ್ಯಾಟರಲ್ ಆರ್ಬಿಟೊಫ್ರಂಟಲ್ ಕಾರ್ಟೆಕ್ಸ್ ಮತ್ತು ಅಮಿಗ್ಡಾಲಾ ಕ್ರಿಯಾಶೀಲತೆ ಕಡಿಮೆಯಾಯಿತು.
ಇಂತಹ ಬದಲಾವಣೆಗಳಿಂದ ತಮ್ಮ ಕೋಪೋದ್ರಿಕ್ತ ನಡವಳಿಕೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆಂದು ಸಂಶೋಧಕರು ಹೇಳುತ್ತಾರೆ.ಹಿಂಸಾಚಾರದ ದೃಶ್ಯಗಳನ್ನು ಮತ್ತೆ ಮತ್ತೆ ವೀಕ್ಷಿಸುವುದರಿಂದ ನಡವಳಿಕೆಯನ್ನು ಯೋಜಿಸುವ ಮೆದುಳಿನ ಭಾಗ ಹೆಚ್ಚು ಕ್ರಿಯಾಶೀಲವಾಗಿ ನಡವಳಿಕೆ ಸಂಬಂಧಿತ ಸಂಸ್ಕರಣೆಗೆ ತಡೆನೀಡುವ ಮೆದುಳಿನ ಸಾಮರ್ಥ್ಯವನ್ನು ಕುಂದಿಸುತ್ತದೆಂದು ಅಧ್ಯಯನ ತಿಳಿಸಿದೆ.
ವೀಕ್ಷಕರು ಅಹಿಂಸಾ ದೃಶ್ಯಗಳುಳ್ಳ ಚಿತ್ರಗಳು, ಭಯಾನಕ ದೃಶ್ಯಗಳು ಅಥವಾ ದೈಹಿಕ ಚಟುವಟಿಕೆಯ ಚಿತ್ರಗಳನ್ನು ವೀಕ್ಷಿಸಿದಾಗ ಇಂತಹ ಬದಲಾವಣೆ ದಾಖಲಾಗಲಿಲ್ಲ. ಹಿಂಸಾಚಾರದ ದೃಶ್ಯಗಳನ್ನು ಮತ್ತೆ ಮತ್ತೆ ವೀಕ್ಷಿಸಿದಾಗ ಮಾತ್ರ ಮೆದುಳಿನ ನಿಯಂತ್ರಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದ್ದು ಗಮನಕ್ಕೆ ಬಂತು ಎಂದು ವೈದ್ಯರು ಹೇಳಿದ್ದಾರೆ.
ಇಂದಿನ ಚಲನಚಿತ್ರಗಳಲ್ಲಿ ಹಿಂಸಾಚಾರದ ದೃಶ್ಯಗಳು ಸಾಮಾನ್ಯವಾಗಿದ್ದು, ವ್ಯಗ್ರತೆ ಮುಂತಾದ ನಡವಳಿಕೆ ನಿಯಂತ್ರಿಸುವ ಮೆದುಳಿನ ಭಾಗಗಳ ಸಂಸ್ಕರಣೆ ಮೇಲೆ ಪ್ರಭಾವ ಬೀರುತ್ತದೆಂದು ನಮ್ಮ ಸಂಶೋಧನೆ ಪತ್ತೆಹಚ್ಚಿದೆಯೆಂದು ವೈದ್ಯರು ಹೇಳಿದ್ದಾರೆ. ಈ ಬದಲಾವಣೆಗಳು ನಿಜ ಜೀವನದ ನಡವಳಿಕೆ ಮೇಲೆ ಹೇಗೆ ಪರಿಣಾಮ ಬೀರುತ್ತದೆಂದು ಸೂಕ್ಷ್ಮವಾಗಿ ಗಮನಿಸಲು ಇನ್ನಷ್ಟು ಸಂಶೋಧನೆ ಅಗತ್ಯವಾಗಿದೆ ಎಂದು ಅವರು ನುಡಿದಿದ್ದಾರೆ.