Select Your Language

Notifications

webdunia
webdunia
webdunia
webdunia

ವರ್ಷದ ಮಗುವಿನ ಕಣ್ಣಿನೊಳಗೆ ಹೊಕ್ಕ ಸೂಜಿ ತೆಗೆದರು!

ಕಣ್ಣಿನೊಳಗೆ ಸೂಜಿ
ಆರಿಂಚು ಉದ್ದದ ಕೊಕ್ಕೆ ಸೂಜಿ (ಸ್ವೆಟರ್ ನೇಯಲು ಕೈಯಲ್ಲಿ ಉಪಯೋಗಿಸುವ) ಕಣ್ಣಿಗೆ ಚುಚ್ಚಿ, ಮೆದುಳಿನವರೆಗೆ ಹೊಕ್ಕ ಬಳಿಕವೂ ಒಂದು ವರ್ಷದ ಮಗುವೊಂದು ಪವಾಡ ಸದೃಶವಾಗಿ ಬದುಕುಳಿದಿದ್ದು, ನವದೆಹಲಿಯ ಎಐಐಎಂಎಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದಾರೆ.

ಒಂದು ವರ್ಷದ ಬಾಲಕಿ ಕುಂಕುಮ್ ಆಸ್ಪತ್ರೆಗೆ ದಾಖಲಾದಾಗ ಒಂದು ಕಣ್ಣಿನಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಕೊಕ್ಕೆಸೂಜಿಯು ಕಣ್ಣಿನ ಗೋಳದ ಮೂಲಕ ಮೆದುಳಿನ ಭಾಗಕ್ಕೆ ತಲುಪಿತ್ತು ಎಂದು ಎಐಐಎಂಎಸ್ ತುರ್ತು ಚಿಕಿತ್ಸಾ ವಿಭಾಗದ ನರರೋಗ-ತಜ್ಞ ದೀಪಕ್ ಗುಪ್ತಾ ತಿಳಿಸಿದ್ದಾರೆ.

ಆಕೆಯ ಪ್ರಕರಣವು ನಮಗೆ ಸುಪ್ರತಿಮ್ ದತ್ತಾ ಪ್ರಕರಣವನ್ನು ನೆನಪಿಸಿತು. ಇದು ನೇಯುವ ಸೂಜಿಯಾಗಿದ್ದು, ಮಾಮೂಲಿ ಹೊಲಿಗೆ ಸೂಜಿಗಿಂತ ದಪ್ಪವಾಗಿತ್ತು. ಅದು ಮೆದುಳಿನವರೆಗೂ ತಲುಪಿದ್ದರಿಂದ ಮತ್ತು ಸೂಕ್ಷ್ಮ ಜೀವಕೋಶಗಳಿಗೆ ಹಾನಿ ಮಾಡಿದ್ದಿರಬಹುದಾದ್ದರಿಂದ ಎಚ್ಚರಿಕೆಯಿಂದ ಮುಂದುವರಿಯಬೇಕಿತ್ತು. ಹೀಗಾಗಿ ಕಣ್ಣು ಮಾತ್ರವೇ ಅಲ್ಲ, ಮೆದುಳನ್ನೂ ನಾವು ಉಳಿಸಿಕೊಳ್ಳಬೇಕಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.

ದೀಪಕ್ ಗುಪ್ತಾ, ಕಪಿಲ್ ದೇವ್ ಸೋನಿ, ಶೈಲೇಶ್ ಮತ್ತು ಬಬಿತಾ ಅವರ ತಂಡವು ಈ ಸೂಕ್ಷ್ಮ ಶಸ್ತ್ರಕ್ರಿಯೆ ನಡೆಸಲು ನಿರ್ಧರಿಸಿತು. ಮೂರುವರೆ ಗಂಟೆಗಳ ಪರಿಶ್ರಮದ ಬಳಿಕ ಅವರು ಈ ಸೂಜಿಯನ್ನು ಹೊರಗೆಳೆಯುವಲ್ಲಿ ಸಫಲರಾದರು. ಕುಂಕುಮ್‌ನ ಬಾಧಿತ ಕಣ್ಣು ಸದ್ಯಕ್ಕೆ ಊದಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಣ್ಣಿನೊಳಗೆ ಸೂಜಿ ಚುಚ್ಚಿದ ಪ್ರಕರಣಗಳ ಬಗ್ಗೆ ಕೇಳಿದ್ದೇವೆ. ಆದರೆ ಅವೆಲ್ಲವೂ ಹೊಲಿಯುವ ಸೂಜಿಗಳ ಗಾತ್ರದ್ದಾಗಿದ್ದವು. ಅವುಗಳು ಇಂಜೆಕ್ಷನ್ ನೀಡುವಾಗಲೇ ಅಥವಾ ಹೊಲಿಗೆ ಯಂತ್ರದಲ್ಲಿ ಕೆಲಸ ಮಾಡುತ್ತಿರುವಾಗಲೋ ದೇಹದೊಳಗೆ ಹೊಕ್ಕಿದ್ದಿರಬಹುದು. ಆದರೆ ಈ ಪುಟ್ಟ ಬಾಲಕಿಯ ವಯಸ್ಸು ಮತ್ತು ಸೂಜಿಯ ಗಾತ್ರ ಮಾತ್ರವಲ್ಲದೆ ಅದು ಒಳಗೆ ಹೊಕ್ಕ ರೀತಿ ನೋಡಿದರೆ, ಇದು ಖಂಡಿತವಾಗಿಯೂ ದೊಡ್ಡ ಸವಾಲಿನ ಸಂಗತಿ. ಬಹುಶಃ ಇದು ಭಾರತದಲ್ಲಿ ಪ್ರಥಮ ಪ್ರಕರಣ ಎನ್ನುತ್ತಾರೆ ಗುಪ್ತಾ.

ಐದು ಅಡಿ ಉದ್ದ, ಎರಡು ಇಂಚು ಅಗಲದ ಕಬ್ಬಿಣದ ಸಲಾಕೆಯೊಂದು ದೇಹದ ಎದೆಭಾಗದಲ್ಲಿ ಒಳಗೆ ಹೊಕ್ಕ ಸುಪ್ರತೀಮ್‌ನ ಯಶಸ್ವೀ ಶಸ್ತ್ರಕ್ರಿಯೆಯ ಬಳಿಕ, ಎಐಐಎಂಎಸ್ ವೈದ್ಯರು ಮಾಡಿದ ಎರಡನೇ ಪವಾಡಮಯ ಶಸ್ತ್ರಚಿಕಿತ್ಸೆ ಇದಾಗಿದೆ.

Share this Story:

Follow Webdunia kannada