Select Your Language

Notifications

webdunia
webdunia
webdunia
webdunia

ಮೊಬೈಲ್ ಬಳಕೆಯಿಂದ ದುಷ್ಪರಿಣಾಮವಿಲ್ಲ

ಮೊಬೈಲ್ ಫೋನ್
ವಾಷಿಂಗ್ಟನ್ , ಗುರುವಾರ, 13 ಸೆಪ್ಟಂಬರ್ 2007 (18:43 IST)
WDWD
ದಿನನಿತ್ಯದ ಜೀವನದಲ್ಲಿ ಮೊಬೈಲ್ ಫೋನ್ ಇಂದು ಅನಿವಾರ್ಯವೆನಿಸಿದೆ. ದೂರದಲ್ಲಿರುವ ಸ್ನೇಹಿತರಿಗೆ, ಬಂಧುಗಳಿಗೆ ತುರ್ತು ಸುದ್ದಿ ಮುಟ್ಟಿಸಲು, ಸಂದೇಶ ತಲುಪಿಸಲು, ವ್ಯವಹಾರ ಮಾತುಕತೆಗೆ ಮೊಬೈಲ್ ಅತ್ಯವಶ್ಯಕವೆನಿಸಿದೆ.

ಆದರೆ ಮೊಬೈಲ್ ಫೋನಿನ ಸತತ ಬಳಕೆ ಮೆದುಳಿನ ಮೇಲೆ ದುಷ್ಪರಿಣಾಮ ಬೀರಬಹುದೇ ಎನ್ನುವುದು ಈಗ ಚರ್ಚೆಗೆ ಆಸ್ಪದಮಾಡಿದೆ. ಮೊಬೈಲ್ ಧ್ವನಿತರಂಗಗಳು ಮೆದುಳಿನ ಮೇಲೆ ಅಡ್ಡಪರಿಣಾಮ ಉಂಟುಮಾಡಬಹುದೆಂಬ ಊಹಾಪೋಹದ ವರದಿಗಳ ನಡುವೆ ಮೊಬೈಲ್ ಪೋನ್ ಬಳಕೆದಾರರು ನಿಟ್ಟುಸಿರುವ ಬಿಡುವ ಸಂಗತಿಯೊಂದು ಈಗ ವರದಿಯಾಗಿದೆ.

ಮೊಬೈಲ್ ಫೋನ್ ಬಳಕೆ ಅಲ್ಪಾವಧಿಯಲ್ಲಿ ಜೈವಿಕ ಪರಿಣಾಮ ಅಥವಾ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಸಂಶೋಧನೆಯೊಂದು ರುಜುವಾತುಮಾಡಿದೆ.

ಮೊಬೈಲ್ ಫೋನ್ ತಂತ್ರಜ್ಞಾನದಿಂದ ಆರೋಗ್ಯದ ಮೇಲೆ ಸಂಭವನೀಯ ಪರಿಣಾಮಗಳ ಬಗ್ಗೆ ಬ್ರಿಟನ್‌ನ ಮೊಬೈಲ್ ಟೆಲಿಕಮ್ಯುನಿಕೇಷನ್ಸ್ ಮತ್ತು ಆರೋಗ್ಯ ಸಂಶೋಧನೆ(ಎಂಟಿಎಚ್ಆರ್)ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ನಾಟಿಂಗ್‌ಹಾಮ್ ವಿಶ್ವವಿದ್ಯಾಲಯದ ಬೌತಶಾಸ್ತ್ರದ ಪ್ರೊ.ಲಾರೀ ಚಾಲಿಸ್ ಸುಮಾರು 6 ವರ್ಷಗಳವರೆಗೆ ಮೊಬೈಲ್ ಫೋನ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿದರು.

ಕಾರ್ಯಕರ್ತರ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಮೊಬೈಲ್ ಫೋನ್ ಸಂಕೇತಗಳಿಂದ ಅಥವಾ ತುರ್ತು ಸೇವೆಗಳು(ಟೆಟ್ರಾ) ಬಳಸುವ ಸಂಕೇತಗಳಿಂದ ಮೆದುಳಿನ ಕಾರ್ಯನಿರ್ವಹಣೆ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಪುರಾವೆ ಇಲ್ಲವೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಈ ಫಲಿತಾಂಶ ಮೊಬೈಲ್ ಬಳಕೆದಾರರಿಗೆ ಉತ್ತೇಜನಕಾರಿಯಾಗಿದೆ ಎಂದು ಎಂಟಿಎಚ್‌ಆರ್ ಅಧ್ಯಕ್ಷ ಪ್ರೊ. ಚಾಲ್ಲಿಸ್ ತಿಳಿಸಿದ್ದಾರೆ.ಈ ಅಧ್ಯಯನದ ವರದಿಯು ಎಲ್ಲಾ ವೈಜ್ಞಾನಿಕ ಮತ್ತು ಮೆಡಿಕಲ್ ಜರ್ನಲ್‌ಗಳಲ್ಲಿ ಪ್ರಕಟವಾಗಿದೆ ಎಂದು ಅವರು ನುಡಿದಿದ್ದಾರೆ.

ಇಲ್ಲಿವರೆಗಿನ ಫಲಿತಾಂಶ ಭರವಸೆದಾಯಕವಾಗಿದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ವಯಸ್ಕರು ದೀರ್ಘಾವಧಿ ಮೊಬೈಲ್ ಫೋನ್ ಬಳಸುವುದರಿಂದ ಉಂಟಾಗುವ ದುಷ್ಪರಿಣಾಮ ಮತ್ತು ಮಕ್ಕಳು ಮೊಬೈಲ್ ಬಳಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಕೂಡ ವಿಶೇಷವಾಗಿ ಸಂಶೋಧನೆ ಅಗತ್ಯವಿದೆ ಎಂದು ಪ್ರೊ. ಚಾಲ್ಲಿಸ್ ಹೇಳಿದರು.

ಈ ಸಂಶೋಧನೆ ವರದಿಯು ಅಲ್ಪಾವಧಿ ಮೊಬೈಲ್ ಬಳಕೆದಾರರಿಗೆ ಸಂಬಂಧಿಸಿದ್ದಾಗಿದೆ. ಆದರೆ ದೀರ್ಘಾವಧಿ ಮೊಬೈಲ್ ಬಳಕೆಗೆ ಇದು ಸಂಬಂಧಿಸಿಲ್ಲ ಎಂದು ಅವರು ಹೇಳಿದರು. ದೀರ್ಘಾವಧಿ ಮೊಬೈಲ್ ಬಳಕೆಯಿಂದ ಕಾನ್ಸರ್ ಸಂಭವಿಸಬಹುದೆಂಬ ಸಾಧ್ಯತೆಯನ್ನು ತಳ್ಳಿಹಾಕುಂತಿಲ್ಲ ಎಂದು ಪ್ರೊ. ಚಾಲ್ಲಿಸ್ ಡೈಲಿ ಮೇಲ್‌ಗೆ ತಿಳಿಸಿದರು.

ಮೊಬೈಲ್‌ಗಳನ್ನು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ಬಳಸಿದ ಸೀಮಿತ ಸಂಖ್ಯೆಯಲ್ಲಿ ಪಾಲ್ಗೊಂಡವರನ್ನು ಅಧ್ಯಯನದಲ್ಲಿ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆಯಿಂದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಕುರಿತು ಪರಿಶೀಲನೆಗೆ ಇನ್ನೂ ಹೆಚ್ಚು ಸಂಶೋಧನೆ ಅಗತ್ಯವಿದೆ ಎಂದು ಅವರು ನುಡಿದರು.

ಮೊಬೈಲ್ ಬಳಕೆಯಿಂದ ಕೆಲವು ವರ್ಷಗಳ ಬಳಿಕ ಕ್ಯಾನ್ಸರ್ ಸಂಭವಿಸುವ ಸಾಧ್ಯತೆಯನ್ನು ನಾವು ಈ ಹಂತದಲ್ಲಿ ತಳ್ಳಿಹಾಕುವಂತಿಲ್ಲ. ಏಕೆಂದರೆ ಜನಸಂಖ್ಯೆ ಆಧಾರಿತ ರೋಗದ ಪುರಾವೆ ಅದನ್ನು ನಿರಾಕರಿಸುವಷ್ಟು ಬಲವಾಗಿಲ್ಲ. ಏಕೆಂದರೆ ಬಹುತೇಕ ಕ್ಯಾನ್ಸರ್‌ಗಳನ್ನು 10 ವರ್ಷಗಳ ತನಕ ಗುರುತಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಧೂಮಪಾನದಿಂದ ಕೂಡ 10 ವರ್ಷಗಳವರಿಗೆ ಯಾವುದೇ ಕ್ಯಾನ್ಸರ್‌ನ ಕುರುಹು ಕಾಣಿಸುವುದಿಲ್ಲ ಎಂದು ಅವರು ಹೇಳಿದರು. ವಾಹನ ಚಾಲನೆ ಮಾಡುವಾಗ ಕೈಯಲ್ಲಿ ಅಥವಾ ಕೈಯಲ್ಲಿ ಹಿಡಿಯದೇ ಮೊಬೈಲ್ ಫೋನ್ ಬಳಕೆ ಕಾರ್ಯನಿರ್ವಹಣೆ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಹೆಚ್ಚುವರಿ ಅಧ್ಯಯನದಿಂದ ದೃಢಪಟ್ಟಿದೆ.

ಎಂಟಿಎಚ್‌ಆರ್ ಕಾರ್ಯಕ್ರಮವನ್ನು 8.8 ದಶಲಕ್ಷ ಪೌಂಡ್ ಸರ್ಕಾರ ಮತ್ತು ಉದ್ಯಮದ ಜಂಟಿ ಹಣಕಾಸು ನೆರವಿನಿಂದ 2001ರಲ್ಲಿ ಹಮ್ಮಿಕೊಳ್ಳಲಾಯಿತು.

Share this Story:

Follow Webdunia kannada