ಯುವಜನರಲ್ಲಿ ಮೊಬೈಲ್ ಫೋನ್‌ಗಳನ್ನು ಅತಿಯಾಗಿ ಬಳಸುವ ಕ್ರೇಜ್ ಹುಟ್ಟಿಕೊಂಡಿದೆ. ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆಯೇ ಎನ್ನುವುದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.
ಇತ್ತೀಚೆಗೆ ವಿದೇಶದಲ್ಲಿ ನಡೆದ ಸಂಶೋಧನೆ ವರದಿಯಲ್ಲಿ ಮೊಬೈಲ್ ಫೋನ್‌ನ ಸೀಮಿತ ಬಳಕೆಯಿಂದ ಯಾವುದೇ ದುಷ್ಪರಿಣಾಮವಿಲ್ಲ ಎಂದು ದೃಢಪಡಿಸಿದೆ. ಈ ನಡುವೆ ಮೊಬೈಲ್ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಲು ಕೇಂದ್ರಸರ್ಕಾರ ಯೋಜಿಸಿದೆ.
ಮೊಬೈಲ್ ಮತ್ತು ಮೊಬೈಲ್ ಟವರ್‌ಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಪತ್ತೆಹಚ್ಚಲು ನಾವು ದೀರ್ಘಕಾಲೀನ ಅಧ್ಯಯನ ನಡೆಸಲು ಯೋಜಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅನ್ಬುಮಣಿ ರಾಮದಾಸ್ ಶುಕ್ರವಾರ ತಿಳಿಸಿದರು.
ವೈದ್ಯಕೀಯ ಸಂಶೋಧನೆಯ ಭಾರತೀಯ ಮಂಡಳಿಗೆ ಈ ಕುರಿತು ಅಧ್ಯಯನ ನಡೆಸಲು ಸೂಚಿಸಿದ್ದೇವೆ ಎಂದು ರಾಮದಾಸ್ ಹೇಳಿದರು.ಮೊಬೈಲ್ ಫೋನ್‌ಗಳನ್ನು ಚಿಕ್ಕಮಕ್ಕಳು ಕೂಡ ಬಳಸುತ್ತಿದ್ದಾರೆ. ಆ ಮಕ್ಕಳು ಆಗಾಗ್ಗೆ ತಲೆನೋವು ಉಂಟಾಗುವ ಬಗ್ಗೆ ದೂರಿವೆ ಎಂದು ಅವರು ನುಡಿದರು.
ಇದು ದೀರ್ಘಾವಧಿಯ ಅಧ್ಯಯನವಾಗಿದ್ದು, ಅದರ ವರದಿಗೆ ಕನಿಷ್ಠ 10 ವರ್ಷಗಳಾದರೂ ಬೇಕಾಗಬಹುದು ಎಂದು ರಾಮದಾಸ್ ಹೇಳಿದರು. ಬಿಪಿಒ ಮತ್ತು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರೋಗ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಯೋಜನೆಯನ್ನು ಹೊಂದಿರುವುದಾಗಿ ಸಚಿವರು ಹೇಳಿದರು.
ಅವು ನಮ್ಮ ಮುಖ್ಯ ಉದ್ಯಮವಾಗಿದ್ದು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕ್ಷೇಮಕ್ಕೆ ಏನನ್ನಾದರೂ ಮಾಡಲೇಬೇಕಾಗಿದೆ ಎಂದು ರಾಮದಾಸ್ ಹೇಳಿದರು. ಈ ಕೈಗಾರಿಕೆಗಳಲ್ಲಿ ಎಳೆಯ ಯುವಕರು 24 ವರ್ಷ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾದ ಮತ್ತು ಮಧುಮೇಹ ಕಾಯಿಲೆ ಅಂಟಿಸಿಕೊಂಡ ಪ್ರಸಂಗಗಳಿವೆ.
ಮಾಹಿತಿ ತಂತ್ರಜ್ಞಾನ ಸಚಿವರಾದ ಡಿ. ರಾಜಾ ಜತೆಗೂಡಿ ಐಟಿ, ಬಿಪಿಒ ಕಂಪನಿಗಳಿಗೆ ಮಾರ್ಗದರ್ಶಕಗಳಿರುವ ಶ್ವೇತಪತ್ರ ಸಿದ್ಧಪಡಿಸುತ್ತಿದ್ದೇವೆ ಎಂದು ಅವರು ಹೇಳಿದರು. ಸಮಗ್ರ ಮಾರ್ಗದರ್ಶಕದಲ್ಲಿ ಉದ್ಯೋಗಿಗಳು ಎದುರಿಸುವ ತಂಬಾಕು ಚಟ, ಮದ್ಯಪಾನ ಮತ್ತು ಚರ್ಮದ ಸಮಸ್ಯೆಗಳನ್ನು ನಿಬಾಯಿಸುವುದು ಕೂಡ ಸೇರಿದೆ ಎಂದು ಹೇಳಿದರು.