ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಬುದ್ಧಿವಂತರಾಗಬೇಕೆಂದು ಬಯಸುವುದು ಸಹಜ. ಆದರೆ ಬುದ್ಧಿವಂತರಾಗಲು ನಿಮ್ಮ ಬುದ್ಧಿಮತ್ತೆ ಹೆಚ್ಚಿಸಿಕೊಂಡರೆ ಮಾತ್ರ ಸಾಧ್ಯ. ಮೆದುಳಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಕ್ಷಣದ ಕ್ರಮವೇನು ಎನ್ನುವ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಕುತೂಹಲಿಗಳಾಗಿರುತ್ತಾರೆ. ಒಂದು ಪ್ರಮುಖ ಸಭೆಯಲ್ಲಿ ಅಥವಾ ನಿರ್ಣಾಯಕ ಪರೀಕ್ಷೆ ಅಥವಾ ಚೆಸ್ ಸ್ಪರ್ಧೆಯಲ್ಲಿ ಸೋಲಲು ನಿಮಗೆ ಇಷ್ಟವಿರುವುದಿಲ್ಲ.
ಆಗ ತಕ್ಷಣವೇ ನಿಮ್ಮ ಬುದ್ಧಿಮತ್ತೆಗೆ ಚೇತರಿಕೆ ನೀಡಬೇಕಾಗುತ್ತದೆ. ನೀವು ಫಲಿತಾಂಶ ಬಯಸುವಿರಾದರೆ ಮತ್ತು ಬುದ್ದಿಮತ್ತೆಯ ವ್ಯಾಖ್ಯಾನದ ಬಗ್ಗೆ ವಾದವಿವಾದ ಇಷ್ಟವಿಲ್ಲವೆಂದಾದರೆ ಕೆಳಗಿನ ಪ್ರಯತ್ನಗಳನ್ನು ಮಾಡಿ-
ಬುದ್ಧಿಮತ್ತೆ ಹೆಚ್ಚಳಕ್ಕೆ ಉಸಿರಾಟ
ದೀರ್ಘವಾದ ಉಸಿರಾಟ ಕೈಗೊಳ್ಳಿ. ಮೆದುಳಿನ ಕಾರ್ಯನಿರ್ವಹಣೆಯ ತಕ್ಷಣದ ಸುಧಾರಣೆಗೆ ದೀರ್ಘ ಉಸಿರಾಟ ಪರಿಣಾಮಕಾರಿ ಕ್ರಮಗಳಲ್ಲೊಂದು. ದೀರ್ಘ ಉಸಿರಾಟದಿಂದ ನಮಗೆ ರಿಲ್ಯಾಕ್ಸ್ ಉಂಟಾಗುತ್ತದೆ ಮತ್ತು ರಕ್ತದಲ್ಲಿ ಹೆಚ್ಚಿನ ಆಮ್ಲಜನಕ ಸಂಗ್ರಹವಾಗಿ ಮೆದುಳಿಗೂ ರವಾನೆಯಾಗುತ್ತದೆ. ನೀವು ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಮೂಗಿನ ಮೂಲಕ ಮೊದಲಿಗೆ ದೀರ್ಘವಾಗಿ ಉಸಿರೆಳೆದುಕೊಳ್ಳಿ, ಬಳಿಕ ನಿಮಗೆ ಸರಿಕಂಡ ರೀತಿಯಲ್ಲಿ ಉಸಿರಾಡಿ. ಮನಸ್ಸಿನಲ್ಲಿ ಉದ್ಭವವಾಗುವ ಆಲೋಚನೆಗಳನ್ನು ತ್ಯಜಿಸಿ ಮತ್ತು ಉಸಿರಾಟದ ಕಡೆ ಗಮನಕೊಡಿ. ಕೆಲವು ನಿಮಿಷಗಳ ಕಾಲ ಹಾಗೆ ಮಾಡಿ.
ನೇರವಾದ ಭಂಗಿ
ನಿಮ್ಮ ಐಕ್ಯೂ ಅಥವಾ ಬುದ್ಧಿಮತ್ತೆ ಹೆಚ್ಚಳಕ್ಕೆ ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಒಳ್ಳೆಯ ಭಂಗಿಯು ನಮ್ಮ ಮನಸ್ಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಸ್ವಲ್ಪ ಮಟ್ಟಿನ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆಯು ನೀವು ಉತ್ತಮವಾಗಿ ಯೋಚಿಸಲು ಮೆದುಳಿಗೆ ರಕ್ತ ಪೂರೈಸುತ್ತದೆ. ನಡಿಗೆ ಒಳ್ಳೆಯ ಪರಿಣಾಮ ಬೀರುತ್ತದೆ ಜತೆಗೆ ಕೆಲವು ದೈಹಿಕ ವ್ಯಾಯಾಮಗಳೂ ಒಳ್ಳೆಯದು.
ಗಿಂಕ್ಗೊ ಬಿಲೋಬಾ
ಗಿಂಕ್ಗೊ ಬಿಲೋಬಾ ಸೇವಿಸಿರಿ. ಗಿಂಕ್ಗೊ ಬಿಲೋಬಾದ ಎಲೆಗಳಿಂದ ತೆಗೆದ ರಸದಿಂದ ಮೆದುಳಿಗೆ ಹೆಚ್ಚು ರಕ್ತ ಪೂರೈಕೆಯಾಗಿ ಅದರ ಶಕ್ತಿಯನ್ನು ವೃದ್ಧಿಸುತ್ತದೆ. ಸ್ಮರಣೆ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಇವು ಮಾತ್ರೆಗಳ ರೂಪದಲ್ಲೂ ಸಿಗುತ್ತದೆ ಅಥವಾ ಚಹ ರೂಪದಲ್ಲಿ ಸೇವಿಸಬಹುದು. ಇದರ ಸೇವನೆಯಿಂದ ತಕ್ಷಣದ ಪರಿಣಾಮ ಉಂಟಾಗುತ್ತದೆ.
ಸ್ವಲ್ಪ ಮಟ್ಟಿಗೆ ಕಾಫಿ ಸೇವನೆ ಅಭ್ಯಾಸ ಮಾಡಿಕೊಳ್ಳಿ. ಕೆಫೀನ್ ಮೆದುಳಿಗೆ ಚೇತರಿಕೆ ನೀಡುತ್ತದೆ. ಆದರೆ ಇದು ತಾತ್ಕಾಲಿಕ ಪರಿಣಾಮ. ಸಿಹಿಯನ್ನು ಹೆಚ್ಚಾಗಿ ತಿನ್ನುವುದನ್ನು ಬಿಟ್ಟುಬಿಡಿ. ಏಕೆಂದರೆ ಇನ್ಸುಲಿನ್ ನಿಮ್ಮ ರಕ್ತನಾಳದಲ್ಲಿ ಶೇಖರವಾಗುವುದರಿಂದ ಯೋಚನಾ ಶಕ್ತಿ ಕುಂಠಿತಗೊಳ್ಳುತ್ತದೆ.