ಪ್ರಾಸ್ಟೇಟ್ ಕ್ಯಾನ್ಸರ್:ಸ್ಥೂಲಕಾಯದವರಿಗೆ ಅಪಾಯ ಹೆಚ್ಚು
ವಾಷಿಂಗ್ಟನ್ , ಸೋಮವಾರ, 12 ನವೆಂಬರ್ 2007 (18:09 IST)
ಪುರುಷರು ಮಿತಿಮೀರಿದ ಕೊಬ್ಬಿನ ಅಂಶದ ಆಹಾರ ತಿಂದು ದೇಹದ ತೂಕವನ್ನು ಹೆಚ್ಚಿಸುತ್ತಾ ಹೋಗುವುದು ಖಂಡಿತ ಒಳ್ಳೆಯದಲ್ಲ ಎಂದು ಬೋಸ್ಟನ್‌ನ ಮಸಾಚುಸೆಟ್ಸ್ ಜನರಲ್ ಆಸ್ಪತ್ರೆಯ ಅಧ್ಯಯನವೊಂದು ತಿಳಿಸಿದೆ. ಸ್ಥೂಲಕಾಯದ ವ್ಯಕ್ತಿಗಳಲ್ಲಿ ಮೂತ್ರಕೋಶದ ಕಂಠವನ್ನು ಬಳಸಿರುವ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಾಗ ಸಾವಿನ ಪ್ರಮಾಣ ಹೆಚ್ಚಾಗಿರುವುದು ಸಾಬೀತಾಗಿದೆ. ಹೆಚ್ಚಿದ ದೇಹದ ತೂಕದ ಸೂಚ್ಯಂಕವು ಪ್ರಾಸ್ಟೇಟ್ ಕ್ಯಾನ್ಸರ್ ಸಾವಿಗೆ ಅಪಾಯದ ಅಂಶಗಳಲ್ಲಿ ಒಂದಾಗಿದೆ ಎಂದು ಸಂಶೋಧನೆ ದೃಢಪಡಿಸಿದೆ. ಪ್ರಾಸ್ಟೇಟ್ ಕ್ಯಾನ್ಸರ್ ರೋಗ ಗುರುತಿಸಿದಾಗ ಸ್ಥೂಲಕಾಯದ ವ್ಯಕ್ತಿಗಳಿಗೆ ಸಾಮಾನ್ಯ ಬಿಎಂಐ(ದೇಹ ತೂಕದ ಸೂಚ್ಯಂಕ) ವ್ಯಕ್ತಿಗಳಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಎರಡು ಪಟ್ಟು ಹೆಚ್ಚಿಗಿರುತ್ತದೆ.2007
ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 218,000 ಜನರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಗುರುತಿಸಲಾಯಿತು.ಅವರಲ್ಲಿ 27,000 ಜನರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಬಲಿಯಾದರು. ಪ್ರಾಸ್ಟೇಟ್ ಗ್ರಂಥಿಯನ್ನು ಶಸ್ತ್ರಚಿಕಿತ್ಸೆಮೂಲಕ ಪೂರ್ಣವಾಗಿ ತೆಗೆದುಹಾಕುವುದು, ಬಾಹ್ಯ ರೇಡಿಯೋ ವಿಕಿರಣದ ಚಿಕಿತ್ಸೆ ಮತ್ತು ಹಾರ್ಮೊನಲ್ ಥೆರಪಿ ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಸೇರಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಗಂಭೀರ ಹಂತಕ್ಕೆ ಮುಟ್ಟಿದ 788 ರೋಗಿಗಳ ಅಧ್ಯಯನದಲ್ಲಿ ಬಿಎಂಐ(ದೇಹ ತೂಕದ ಸೂಚ್ಯಂಕ) ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ನಡುವೆ ಸಂಬಂಧವನ್ನು ಕುರಿತು 8 ವರ್ಷಗಳವರೆಗೆ ಪರಿಶೀಲನೆ ನಡೆಸಲಾಯಿತು.ಈ ಅಧ್ಯಯನದಲ್ಲಿ ರೋಗ ಗುರುತಿಸುವಾಗ ಸ್ಥೂಲಕಾಯ ಅಥವಾ ಹೆಚ್ಚಿನ ತೂಕವಿರುವುದು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ವಿಶಿಷ್ಠ, ಅಪಾಯಕಾರಿ ಅಂಶವಾಗಿದೆ. 25ಕ್ಕಿಂತ ಕಡಿಮೆಯಿರುವ ಸಾಮಾನ್ಯ ಬಿಎಂಐಗಿಂತ 25ರಿಂದ 30 ನಡುವೆ ಬಿಎಂಐ ಹೊಂದಿರುವ ವ್ಯಕ್ತಿಗಳು ಕ್ಯಾನ್ಸರ್‌ನಿಂದ ಸಾವಿಗೀಡಾಗುವ ಅಪಾಯ 1.5ಪಟ್ಟು ಹೆಚ್ಚಿಗಿರುತ್ತದೆ. ಈ ಅಧ್ಯಯನವು ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ "ಕ್ಯಾನ್ಸರ್" ಜರ್ನಲ್‌ನ 2007ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ.