Select Your Language

Notifications

webdunia
webdunia
webdunia
webdunia

ಪೋಷಕರಿಂದ ನಿರ್ಲಕ್ಷ್ಯ:ಮಕ್ಕಳಿಗೆ ಸ್ಥೂಲಕಾಯ

ರುಜುವಾತು
ವಾಷಿಂಗ್ಟನ್ , ಬುಧವಾರ, 14 ನವೆಂಬರ್ 2007 (16:52 IST)
PTI
ತಂದೆ, ತಾಯಿಗಳಿಂದ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳು ಸ್ಥೂಲಕಾಯದ ದೇಹ ಬೆಳೆಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧನೆಯೊಂದು ರುಜುವಾತು ಮಾಡಿದೆ.ಬಾಲ್ಯದ ಸ್ಥೂಲಕಾಯದ ರಿಸ್ಕ್ ತಪ್ಪಿಸಲು ಆಹಾರ ಸೇವಿಸುವ ಅಭ್ಯಾಸಗಳಲ್ಲಿ ಸುಧಾರಣೆ ಮತ್ತು ದೈಹಿಕ ಚಟುವಟಿಕೆ ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳುವುದಲ್ಲದೇ ಸಕಾರಾತ್ಮಕ ಆರೈಕೆ, ಪೋಷಣೆಯೂ ಅಗತ್ಯವೆನಿಸಿದೆ.

ಬಾಲ್ಯಾವಸ್ಥೆಯಲ್ಲಿ ಪೋಷಕರಿಂದ ಉಪೇಕ್ಷೆ ಮತ್ತು ಬಾಲ್ಯದ ಸ್ಥೂಲಕಾಯದ ನಡುವೆ ಸಂಬಂಧವನ್ನು ತೋರಿಸುವ ಮೊದಲ ಅಧ್ಯಯನ ಇದಾಗಿದೆ. ಪೋಷಕರಿಗೆ ದಿನಬೆಳಗಾದರೆ ನಾನಾ ಕೆಲಸದ ಒತ್ತಡಗಳು. ಅವರದೇ ಆದ ಅನೇಕ ಸಮಸ್ಯೆಗಳಿರುತ್ತವೆ. ಇದರಿಂದಾಗಿ ಮಕ್ಕಳ ಕಡೆ ಹೆಚ್ಚಿನ ಗಮನನೀಡದಿರುವುದು, ಮಕ್ಕಳಿಗೆ ಪ್ರೀತಿಯ ಸಿಂಚನ ನೀಡದಿರುವುದು ಉಪೇಕ್ಷೆಗಳಲ್ಲಿ ಸೇರಿದೆ.

ಮಕ್ಕಳಿಗೆ ಕಾಯಿಲೆ ಬಂದಾಗ ವೈದ್ಯರ ಬಳಿ ಕರೆದೊಯ್ಯದಿರುವುದು, ಸೂಕ್ತ ಮೇಲ್ವಿಚಾರಣೆ ಇಲ್ಲದೇ ಮಗುವನ್ನು ಮನೆಯಲ್ಲಿ ಬಿಡುವುದು ಕೂಡ ಉಪೇಕ್ಷೆಗಳಿಗೆ ಉದಾಹರಣೆಯಾಗಿದೆ.

ಅಮೆರಿಕದ 20 ದೊಡ್ಡ ನಗರಗಳಲ್ಲಿ 1998ರಿಂದ 2000ದ ನಡುವೆ ಜನಿಸಿದ 4,898 ಮಕ್ಕಳ ಬಗ್ಗೆ ಈ ಕುರಿತು ಸಂಶೋಧನೆ ನಡೆಸಲಾಯಿತು. ಮೂರು ವರ್ಷದ ವಯೋಮಿತಿಯ 2.412 ಮಕ್ಕಳ ಎತ್ತರ ಮತ್ತು ತೂಕವನ್ನು ಅಳೆಯಲಾಯಿತು.

ಮಕ್ಕಳ ತಾಯಂದಿರು ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಂಡ ಮೂರು ವಿಧಾನಗಳ ಬಗ್ಗೆ ಉತ್ತರಿಸಿದರು. ನಿರ್ಲಕ್ಷ್ಯ(ಮಕ್ಕಳ ಬಗ್ಗೆ ಸೂಕ್ತ ಮೇಲ್ವಿಚಾರಣೆ ವಹಿಸದಿರುವುದು), ದೈಹಿಕ ದಂಡನೆ(ಮಕ್ಕಳ ಹಿಂಭಾಗಕ್ಕೆ ಥಳಿಸುವುದು) ಮತ್ತು ಮಾನಸಿಕ ಆಕ್ರಮಣದ ಮನೋಭಾವ(ಥಳಿಸುವ ಬೆದರಿಕೆ ಹಾಕುವುದು) ಇವುಗಳಲ್ಲಿ ಸೇರಿವೆ.

ಅವುಗಳಲ್ಲಿ ಶೇ. 18ರಷ್ಟು ಮಕ್ಕಳು ಸ್ಥೂಲಕಾಯದ ದೇಹ ಹೊಂದಿದ್ದು, ಮಕ್ಕಳ ಬಗ್ಗೆ ನಿರ್ಲಕ್ಷ್ಯ, ದೈಹಿಕ ದಂಡನೆ ಮತ್ತು ಮಾನಸಿಕ ಆಕ್ರಮಣದ ವಿದ್ಯಮಾನಗಳು ಕ್ರಮವಾಗಿ ಶೇ. 11, ಶೇ.84 ಮತ್ತು ಶೇ.93ರಷ್ಟಿತ್ತು. ನಿರ್ಲಕ್ಷ್ಯದ ಅನುಭವಕ್ಕೆ ಒಳಗಾದ ಮಕ್ಕಳ ಸ್ಥೂಲಕಾಯದ ಸ್ಥಿತಿ ಶೇ.50ರಷ್ಟು ಹೆಚ್ಚಿನ ಪ್ರಮಾಣದಲ್ಲಿರುವುದು ಪತ್ತೆಯಾಯಿತು.

ದೈಹಿಕ ದಂಡನೆ ಮತ್ತು ಮಾನಸಿಕ ಆಕ್ರಮಣದ ಪ್ರಮಾಣಕ್ಕೂ ಮತ್ತು ಸ್ಥೂಲಕಾಯದ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂತು. ಮಕ್ಕಳ ಅಶಿಸ್ತಿನ ನಡವಳಿಕೆಯನ್ನು ಹದ್ದುಬಸ್ತಿನಲ್ಲಿಡಲು ದೈಹಿಕ ದಂಡನೆ ಮತ್ತು ಮಾನಸಿಕ ದಾಳಿ ಶಿಸ್ತನ್ನು ಮೂಡಿಸುವ ತಂತ್ರಗಳಾಗಿದ್ದು, ತಮ್ಮ ದುರ್ನಡತೆಯ ಪರಿಣಾಮ ಎಂದು ಮಗು ಸಮಾಧಾನ ಪಟ್ಟುಕೊಳ್ಳುತ್ತದೆ.

ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪೋಷಕರು ತನ್ನನ್ನು ನಿರ್ಲಕ್ಷಿಸಲು, ತನ್ನ ಬೇಕುಬೇಡಗಳ ಬಗ್ಗೆ ಗಮನನೀಡದಿರಲು ಕಾರಣವೇನೆಂಬುದು ಮಕ್ಕಳಿಗೆ ಸರಿಯಾಗಿ ತಿಳಿಯದೇ ಅವಕ್ಕೆ ಅಪರಾಧಿ ಮನೋಭಾವ ಆವರಿಸುತ್ತದೆ ಎಂದು ವೈದ್ಯ ವಿಟಾಕರ್ ಹೇಳಿದ್ದಾರೆ. ನಿರ್ಲಕ್ಷ್ಯದ ಈ ಅನುಭವಗಳು ಮಕ್ಕಳಿಗೆ ಮಾನಸಿಕ ಒತ್ತಡ ಉಲ್ಬಣಿಸುವಂತೆ ಮಾಡಿ ಅವರ ಭಾವನೆಗಳು, ಆಹಾರ ಮತ್ತು ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ವಯಸ್ಕರು ಆಹಾರವನ್ನು ಹೆಚ್ಚು ಹೆಚ್ಚು ಸೇವಿಸುವ ವಾಡಿಕೆಯಂತೆ ಮಕ್ಕಳ ವಿಷಯದಲ್ಲೂ ಅದು ನಿಜ.

Share this Story:

Follow Webdunia kannada