ಒಡೆದ ಹೃದಯಗಳಿಗೆ ಕಾರಣವಾಗುವ ಪುಟ್ಟ ವಸ್ತುವೊಂದನ್ನು ಪತ್ತೆ ಮಾಡಿರುವ ವಿಜ್ಞಾನಿಗಳು ಒಡೆದ ಹೃದಯಿಗಳಿಗೆ, ತಂಪೆರೆಯುವ ಸುದ್ದಿಯನ್ನು ನೀಡಿದ್ದಾರೆ.
ಆದರೆ ಇದು ವಿಫಲ ಪ್ರೇಮದಿಂದ ಒಡೆದ ಹೃದಯಿಗಳಿಗಲ್ಲ. ಈ ವಸ್ತುವು ಹೃದಯಾಘಾತದ ವೇಳೆ ಸ್ನಾಯುಗಳಲ್ಲಿ ಉಂಟಾಗುವ ಬಿರುಕಿಗೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಟಿಶ್ಯೂವಿನಲ್ಲಿ ಗಾಯಗೊಳ್ಳಲು ಕೊಲಾಜಿನ್ ಕಾರಣ. ಈ ಕೊಲಾಜಿನ್ ಸಂಗ್ರಕ್ಕೆ ಕಾರಣವಾಗಿರುವ sFRP2 ಪ್ರೋಟೀನ್ ಅನ್ನು ಪತ್ತೆ ಹಚ್ಚಿದ್ದಾರೆ.
"ಹಲವಾರು ಗಾಯಗಳು ಮತ್ತು ಖಾಯಿಲೆಗಳಿಂದ ದೊಡ್ಡ ಪ್ರಮಾಣದ ಕೊಲಾಜಿನ್‌ಗಳು ನಿರ್ಮಾಣಗೊಂಡು ಟಿಶ್ಯೂಗಳಲ್ಲಿ ಸಂಗ್ರಹವಾಗುತ್ತಿದ್ದು, ಇದು ಹೃದಯದಲ್ಲಿನ ಗಾಯಕ್ಕೆ ಕಾರಣವಾಗುತ್ತದೆ" ಎಂದು ವಿಸ್ಕೋನ್‌ಸಿನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಪಬ್ಲಿಕ್ ಹೆಲ್ತ್‌ನ ಪೆಥಾಲಜಿ ಪ್ರೊಫೆಸರ್ ಡೇನಿಯಲ್ ಎಸ್. ಗ್ರೀನ್‌ಸ್ಪಾನ್ ಅವರು ಹೇಳಿದ್ದಾರೆ.
ಫೈಬ್ರೋಸಿಸ್ ಹೃದಯ, ಶ್ವಾಸಕೋಶ, ಲಿವರ್ ಮತ್ತು ಇತರ ಟಿಶ್ಯೂಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರೊಟೀನ್‌ಗಳು ಪಿತ್ತಜನಕಾಂಗ ಮತ್ತು ಶ್ವಾಸಕೋಶದ ಸಮಸ್ಯೆಗಳ ಚಿಕಿತ್ಸೆಗೂ ಸಹಾಯಕಾರಿಯಾಗಬಹುದು ಎಂದು ಅವರು ಹೇಳಿದ್ದಾರೆ.
ಇದೀಗಾಗಲೇ ಇದರ ಪ್ರಯೋಗವನ್ನು ಪ್ರಾಣಿಗಳ ಮೇಲೆ ಮಾಡಲಾಗಿದ್ದು, ಅವುಗಳ ಹೃದಯದ ರಕ್ತ ಸಂಚಾರವನ್ನು ನಿಯಂತ್ರಿಸಿ ಕೃತಕ ಹೃದಯಾಘಾತ ಮಾಡಿದಾಗ sFRP2 ಮುಕ್ತವಾಗಿರುವ ಪ್ರಾಣಿಗಳಲ್ಲಿ ಹೃದಯದ ಮೇಲಿನ ಗಾಯದ ಪ್ರಮಾಣ ಪ್ರಮುಖವಾಗಿ ಕಡಿಮೆಯಾಗಿರುವುದು ಕಂಡು ಬಂದಿತ್ತು.