ದಿನಕ್ಕೊಂದು ಮೊಟ್ಟೆ, ತುಂಬವುದು ಹೊಟ್ಟೆ ಎಂದಿದ್ದ ಘೋಷಣೆಯನ್ನು ಒಂದಿಷ್ಟು ಬದಲಿಸಬೇಕು ಎಂಬಂತಾಗಿದೆ ಈಗ. ವಾರಕ್ಕೆ ಏಳು ಅಥವಾ ಅದಕ್ಕಿಂತ ಜಾಸ್ತಿ ಮೊಟ್ಟೆಗಳನ್ನು ತಿನ್ನುವಂತವರು ಒಂದಿಷ್ಟು ಬೇಗನೆ ಇಹಲೋಕದ ವ್ಯವಹಾರ ಚುಕ್ತಾ ಮಾಡುತ್ತಾರೆ ಅನ್ನುತ್ತಿದೆ ಅಧ್ಯಯನ.
ದಿನನಿತ್ಯ ಮೊಟ್ಟೆ ತಿನ್ನುವ ಮಧ್ಯವಯಸ್ಕರಲ್ಲಿ ಅಕಾಲಿಕ ಸಾವಿನ ಪ್ರಮಾಣ ಶೇ.23ರಷ್ಟು ಹೆಚ್ಚು ಎಂದು ಸಂಶೋಧನೆ ಪ್ರತಿಪಾದಿಸಿದೆ. ಹಾಗಾದರೆ ಎಷ್ಟು ಮೊಟ್ಟೆ ತಿನ್ನುವುದು ಸುರಕ್ಷಿತ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತದೆ ಈ ಸಂಶೋಧನೆ.
ಮೊಟ್ಟೆ ಸೇವನೆಯ ಅನುಕೂಲಗಳು ಮತ್ತು ಅದರಲ್ಲಿನ ಕೊಲೆಸ್ಟರಾಲ್ ಪ್ರಮಾಣದ ಹಾನಿಗಳು ತದ್ವಿರುದ್ಧ ಫಲಿತಾಂಶಗಳನ್ನು ನೀಡುತ್ತವೆ. ಮೊಟ್ಟೆಯೊಂದರ ಹಳದಿಯಲ್ಲಿರುವ ಸುಮಾರು 220 ಮಿಲಿಗ್ರಾಮ್‌ಗಳಷ್ಟು ಕೊಬ್ಬು ಬ್ಲಡ್ ಕೊಲೆಸ್ಟರಾಲ್ ಹಾಗೂ ಹೃದ್ರೋಗ ಅಪಾಯವನ್ನು ಹೆಚ್ಚಿಸುತ್ತದೆ.
ಸಂಶೋಧಕರಾದ ಲ್ಯೂಕ್ ಡಿಜೌಸ್ಸೆ ಮತ್ತು ಜೆ ಮೈಕೆಲ್ ಗಝಿಯಾನೊ ಅವರುಗಳು ನಡೆಸಿರುವ ಅಧ್ಯಯನವು ಅಮೆರಿಕದ ಕ್ಲಿನಿಕಲ್ ನ್ಯೂಟ್ರಿಶನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅಧಿಕ ಮೊಟ್ಟೆ ಸೇವನೆಯು ಸಾವಿಗೆ ಕಾರಣವಾಗುತ್ತದೆ ಎಂದು ಹೇಳಿದೆ. ಸಕ್ಕರೆ ಕಾಯಿಲೆ ಇರುವ ಗಂಡಸರು ಮೊಟ್ಟೆ ಸೇವಿಸಿದಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯ ಹೆಚ್ಚಿದೆ ಎಂದೂ ಅಧ್ಯಯನ ಕಂಡುಕೊಂಡಿದೆ.
ಹೆಚ್ಚು ಮೊಟ್ಟೆಗಳನ್ನು ತಿನ್ನುವ ಗಂಡಸರು, ಹೆಚ್ಚು ದಪ್ಪವಿರುವವರು, ವಯಸ್ಸಾದವರು, ಮದ್ಯಪಾನಿಗಳು ಮತ್ತು ಧೂಮಪಾನಿಗಳು ಮತ್ತು ವ್ಯಾಯಾಮ ಮಾಡದಿರುವ ಕಾರಣವೂ ಹೃದಯಾಘಾತ ಮತ್ತು ಸಾವಿನ ಅಪಾಯ ಒಡ್ಡಬಹುದು ಎಂದು ಅಧ್ಯಯನ ಹೇಳಿದೆ.