Article God Goddess %e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%95%e0%b2%b0%e0%b3%8d%e0%b2%a4 %e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae 107052800016_1.htm

Select Your Language

Notifications

webdunia
webdunia
webdunia
webdunia

ಸೃಷ್ಟಿಕರ್ತ ಬ್ರಹ್ಮ

ಸೃಷ್ಟಿಕರ್ತ ಬ್ರಹ್ಮ
ಹಿಂದೂ ಧರ್ಮದ ತ್ರಿಮೂರ್ತಿಗಳಲ್ಲಿ ಬ್ರಹ್ಮ ಒಬ್ಬ. ಬ್ರಹ್ಮ, ವಿಷ್ಣು, ಮಹೇಶ್ವರರನ್ನು ತ್ರಿಮೂರ್ತಿಗಳೆಂದು ಕರೆಯಲಾಗುತ್ತದೆ. ಬ್ರಹ್ಮ ಸೃಷ್ಟಕರ್ತ.

ಪುರಾಣಗಳ ಪ್ರಕಾರ ಬ್ರಹ್ಮ ಸ್ವಂ ಜನಿಸಿದಾತ. ವಿಷ್ಣುವಿನ ಹೊಕ್ಕಳದಲ್ಲಿ ಬೆಳೆದ ತಾವರೆಯಲ್ಲಿ ಬ್ರಹ್ಮ ಜನಿಸಿದ ಕಾರಣ ಬ್ರಹ್ಮನಿಗೆ ನಾಭಿಜನೆಂಬ ಹೆಸರೂ ಇದೆ. ಇನ್ನೊಂದು ದಂತಕತೆಯ ಪ್ರಕಾರ ಬ್ರಹ್ಮ ನೀರಿನಲ್ಲಿ ಜನಿಸಿದನೆಂದು ಹೇಳಲಾಗಿದೆ. ಇದರ ಪ್ರಕಾರ ಬೀಜವೊಂದು ನಂತರ ಚಿನ್ನ ಮೊಟ್ಟೆಯಾಯಿತು. ಈ ಚಿನ್ನದ ಮೊಟ್ಟೆಯಿಂದ ಬ್ರಹ್ಮ ಜನಿಸಿದ್ದು, ಹಿರಣ್ಯಗರ್ಭವೆಂದು ಕರೆಯಲಾಗುತ್ತದೆ.

ಬ್ರಹ್ಮನ ಜನನದ ಬಳಿಕ ಚಿನ್ನದ ಮೊಟ್ಟೆಯ ಉಳಿದ ವಸ್ತುಗಳು ಬ್ರಹ್ಮಾಂಡ ಅಥವಾ ವಿಶ್ವವಾಗಿ ವಿಸ್ತಾರವಾಯಿತು. ಬ್ರಹ್ಮ ನೀರಿನಲ್ಲಿ ಜನಿಸಿದ ಕಾರಣ ಕಂಜ ಎಂದು ಕರೆಯಲಾಗುತ್ತದೆ. ಬ್ರಹ್ಮನನ್ನು, ವಿಶ್ವದ ಶ್ರೇಷ್ಠ ಶಕ್ತಿ ಬ್ರಹ್ಮನ್ ಮತ್ತು ಸ್ತ್ರೀ ಶಕ್ತಿ ಪ್ರಕೃತಿ ಅಥವಾ ಮಾಯೆಯ ಪುತ್ರನೆಂದು ಹೇಳಲಾಗುತ್ತದೆ.

ಸೃಷ್ಟಿ ಕ್ರಿಯೆಯ ಆರಂಭದಲ್ಲಿ ಬ್ರಹ್ಮ 11 ಪ್ರಜಾಪತಿಗಳನ್ನು ಸೃಷ್ಟಿಸಿದ್ದು ಇವರನ್ನು ಮನು ಕುಲದ ಪಿತರೆಂದು ನಂಬಲಾಗಿದೆ. ಇವರನ್ನು ಮನುಸ್ಮೃತಿಯಲ್ಲಿ ಮಾರಿಚಿ, ಅತ್ರಿ, ಅಗ್ನಿರಸ, ಪುಲಸ್ತ್ಯ, ಪುಲಹ, ಕೃತು, ವಶಿಷ್ಠ, ಪ್ರಚೇತ ಅಥವಾ ದಕ್ಷ, ಭೃಗು ಮತ್ತು ನಾರದ ಎಂದು ಹೇಳಲಾಗಿದೆ. ಇದಲ್ಲದೆ ವಿಶ್ವವನ್ನು ಸೃಷ್ಟಿಸಲು ನೆರವಾಗುವಂತೆ ಸಪ್ತಋಷಿಗಳನ್ನು ಸೃಷ್ಟಿಸಿದ್ದು, ಇವರನೆಲ್ಲ ಬ್ರಹ್ಮ ತನ್ನ ಮನಸ್ಸಿನಿಂದ ಸೃಷ್ಟಿಸಿದ ಕಾರಣ ಇವರೆಲ್ಲ ಬ್ರಹ್ಮನ ಮಾನಸ ಪುತ್ರರು.

ಸಾಮಾನ್ಯಕ್ಕೆ ಬ್ರಹ್ಮ ಇತರ ದೇವತೆಗಳ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಒಂದೊಮ್ಮೆ ಮಾಡಿದರೂ ಅತೀ ಅಪರೂಪಕ್ಕೆ. ಬ್ರಹ್ಮನನ್ನು ನಾಲ್ಕು ತಲೆ ಮತ್ತು ನಾಲ್ಕು ಕೈಗಳುಳ್ಳವನೆಂದು ಸಾಂಪ್ರದಾಯಿಕವಾಗಿ ಚಿತ್ರಿಸಲಾಗಿದೆ. ತನ್ನ ನಾಲ್ಕು ತಲೆಗಳ ಮುಖಾಂತರ ಬ್ರಹ್ಮ ನಿರಂತರವಾಗಿ ನಾಲ್ಕು ವೇದಗಳಲ್ಲಿ ಒಂದನ್ನು ಪಠಿಸುತ್ತಿರುತ್ತಾನೆ. ಬ್ರಹ್ಮನನ್ನು ಬಿಳಿಯ ಗಡ್ಡ ಹಾಗೂ ನಾಲ್ಕು ಕೈಗಳಿರುವಂತೆ ಚಿತ್ರಿಸಲಾಗಿದೆ.

ಸಾಮಾನ್ಯವಾಗಿ ಹಿಂದೂ ದೇವರುಗಳು ತಮ್ಮ ಕೈಯಲ್ಲಿ ಆಯುಧ ಹಿಡಿದಂತೆ ಬಿಂಬಿಸಲಾಗುತ್ತಿದ್ದರೂ, ಬ್ರಹ್ಮ ತನ್ನ ಯಾವುದೇ ಕೈಗಳಲ್ಲಿ ಆಯುಧ ಹಿಡಿದಂತೆ ತೋರಿಸಲಾಗಿಲ್ಲ. ಬ್ರಹ್ಮನ ಕೈಯೊಂದರಲ್ಲಿ ದಂಡವೊಂದಿದ್ದು, ಅದರಿಂದ ಪವಿತ್ರು ತುಪ್ಪ ಅಥವಾ ತೈಲ ಸುರಿಯುತ್ತಿದೆ. ಇದು ಬ್ರಹ್ಮ ತ್ಯಾಗದೇವತೆ ಎಂಬುದನ್ನು ಸಂಕೇತಿಸುತ್ತದೆ.

ಇನ್ನೊಂದು ಕೈಯಲ್ಲಿ ನೀರಿನ ಮಡಿಕೆ ಇದೆ. ಇದು ಎಲ್ಲ ಸೃಷ್ಟಿ ಕ್ರಿಯೆಯಲ್ಲಿ ನೀರಿನಂಶ ಇದೆ ಎಂಬುದನ್ನು ಹೇಳುತ್ತದೆ. ಇನ್ನೊಂದು ಕೈಯಲ್ಲಿ ಜಪಮಾಲೆಯೊಂದಿದ್ದು, ಇದರ ಮೂಲಕ ಬ್ರಹ್ಮ ವಿಶ್ವದ ಮೇಲಿನ ಸಮಯದ ಮೇಲೆ ನಿಗಾ ಇಡುತ್ತಾನೆ ಎಂದು ಹೇಳಲಾಗಿದೆ. ಮತ್ತೊಂದು ಕೈಯಲ್ಲಿ ವೇದಗಳನ್ನು ಹಿಡಿದಂತೆ, ಕೆಲವೊಮ್ಮೆ ತಾವರೆ ಹೂವನ್ನು ಹಿಡಿದಂತೆಯೂ ತೋರಿಸಲಾಗಿದೆ.

ಬ್ರಹ್ಮನ ನಾಲ್ಕು ತಲೆಯ ಕುರಿತು ಇನ್ನೊಂದು ಕತೆ ಇದೆ. ಬ್ರಹ್ಮ ಬ್ರಹ್ಮಾಂಡದ ಸೃಷ್ಟಿಯ ವೇಳೆಗೆ ಶತರೂಪವೆಂಬ ಸುಂದರ ದೇವತೆಯನ್ನು ಸೃಷ್ಟಿಸಿದ. ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡ. ಬ್ರಹ್ಮನ ದೃಷ್ಟಿಯನ್ನು ತಪ್ಪಿಸಲು ಶತರೂಪ ವಿವಿಧ ದಿಕ್ಕುಗಳಲ್ಲಿ ಸಾಗಿದಳಾದರೂ, ಆಕೆಯನ್ನು ಹಿಂಬಾಲಿಸಲು ಬ್ರಹ್ಮ ತಲೆಯೊಂದನ್ನು ರೂಪಿಸಿದ. ಹಾಗಾಗಿ ನಾಲ್ಕುದಿಕ್ಕುಗಳು ಮತ್ತು ಇವುಗಳ ಮೇಲೊಂದು ಹೀಗೆ ಒಟ್ಟು ಐದು ತಲೆಯನ್ನು ಬ್ರಹ್ಮ ಹೊಂದಿದ.

ಬ್ರಹ್ಮನನ್ನು ನಿಯಂತ್ರಿಸಲು ಶಿವ ಮೇಲಿನ ತಲೆಯನ್ನು ಕತ್ತರಿಸಿ ಹಾಕಿದ. ಶತರೂಪಳನ್ನು ಬ್ರಹ್ಮನೇ ಸೃಷ್ಟಿಸಿದ ಕಾರಣ ಆಕೆಯನ್ನು ಮೋಹಿಸುವುದು ತಪ್ಪೆಂದು ಶಿವ ನಿರ್ಧರಿಸಿದ. ಹಾಗಾಗಿ 'ಅಪವಿತ್ರ' ಬ್ರಹ್ಮನಿಗೆ ಯಾರೂ ಪೂಜೆ ಸಲ್ಲಿಸಬಾರದೆಂದು ಶಿವ ನಿರ್ದೇಶನ ನೀಡಿದನೆಂದು ಹೇಳಲಾಗಿದೆ. ಹಾಗಾಗಿ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಬ್ರಹ್ಮನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಆ ಘಟನೆಯ ಬಳಿಕ ಪಶ್ಚಾತಾಪವಾಗಿ ಬ್ರಹ್ಮ ವೇದಗಳ ಪಠಣ ಆರಂಭಿಸಿದ.
ಸರಸ್ವತಿ ಬ್ರಹ್ಮನ ಪತ್ನಿ. ಹಾಗೂ ಹಂಸ ಬ್ರಹ್ಮನ ವಾಹನ.

(-ಸ್ನೇಹಾ)

Share this Story:

Follow Webdunia kannada