Article God Goddess %e0%b2%97%e0%b2%a3%e0%b2%aa%e0%b2%a4%e0%b2%bf%e0%b2%af %e0%b2%b9%e0%b3%81%e0%b2%9f%e0%b3%8d%e0%b2%9f%e0%b2%bf%e0%b2%a8 %e0%b2%95%e0%b3%81%e0%b2%b0%e0%b2%bf%e0%b2%a4 %e0%b2%a8%e0%b2%82%e0%b2%ac%e0%b3%81%e0%b2%97%e0%b3%86%e0%b2%97%e0%b2%b3%e0%b3%81 107052800017_1.htm

Daily Horoscope

Select Your Language

Notifications

webdunia
webdunia
webdunia
webdunia

ಗಣಪತಿಯ ಹುಟ್ಟಿನ ಕುರಿತ ನಂಬುಗೆಗಳು

ಗಣಪತಿಯ ಹುಟ್ಟಿನ ಕುರಿತ ನಂಬುಗೆಗಳು
ಶಿವ ಪಾರ್ವತಿಯರ ಮಗನಾಗಿರುವ ಗಣಪತಿಗೆ ವಿಘ್ನವಿನಾಶಕನೆಂಬ ಹೆಸರು. ಯಾವುದೇ ಶುಭ ಸಂದರ್ಭದಲ್ಲಿ ಮೊದಲ ಪೂಜೆ ಗಣೇಶನಿಗೆ. ಗಣೇಶನನ್ನು ವಂದಿಸಿಯೇ ಇತರ ಕೆಲಸ ಆರಂಭಿಸುವುದು ಹಿಂದೂ ಆಸ್ತಿಕ ಸಂಪ್ರದಾಯ.

ಗಣಪತಿಯ ಜನನದ ಕುರಿತು ಮತ್ತು ಆತನ ಆನೆಯ ತಲೆಯ ಕುರಿತು ಬೇರೆ ಬೇರೆ ಕಥೆಗಳಿವೆ. ಶಿವ ಪುರಾಣದಲ್ಲಿರುವ ಅತ್ಯಂತ ಜನಪ್ರಿಯ ಕಥೆಯ ಪ್ರಕಾರ-
ಒಂದು ದಿನ ಶಿವನ ಪತ್ನಿ ಪಾರ್ವತಿ ಸ್ನಾನಕ್ಕೆ ಹೊರಟಿದ್ದಳು. ಆ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಯಾರಾದರೂ ಬಂದು ಆಕಸ್ಮಿಕವಾಗಿ ಮನೆಗೆ ನುಗ್ಗಿದರೆ ತಡೆಯಲು ಯಾರೂ ಇರಲಿಲ್ಲ.

ಹಾಗಾಗಿ ಪಾರ್ವತಿ ತಾನು ಸ್ನಾನಕ್ಕೆ ಬಳಸಲು ಸಿದ್ಧಪಡಿಸಿಟ್ಟ ಅರಿಶಿನದ ಪುಡಿಯಿಂದ ಬಾಲಕನ ಮೂರ್ತಿಯೊಂದನ್ನು ಸೃಷ್ಟಿಸಿ, ತನ್ನ ಶಕ್ತಿಯಿಂದ ಮೂರ್ತಿಗೆ ಜೀವತುಂಬಿದಳು. ನಂತರ ತಾನು ಸ್ನಾನಕ್ಕೆ ತೆರಳುವುದಾಗಿಯೂ ಮನೆಯೊಳಗೆ ಯಾರನ್ನೂ ಬಿಡಬಾರದೆಂದು ಬಾಲಕನಿಗೆ ಆಜ್ಞಾಪಿಸಿದಳು.

ಪಾರ್ವತಿ ಸ್ನಾನಕ್ಕೆ ತೆರಳಿದ ಸ್ವಲ್ಪ ಹೊತ್ತಿನಲ್ಲಿ ಹೊರಗಡೆ ತೆರಳಿದ್ದ ಶಿವ ಮನೆಗೆ ಮರಳಿದ. ತಾಯಿಯ ಅಜ್ಞಾಪಾಲಕನಾಗಿದ್ದ ಗಣಪತಿ ಶಿವನನ್ನು ಮನೆಯೊಳಗೆ ಬಿಡಲಿಲ್ಲ. ತಾನು ಪಾರ್ವತಿಯ ಗಂಡನೆಂದು ಪರಿಪರಿಯಾಗಿ ತಿಳಿಹೇಳಿದರೂ ಗಣೇಶ ಶಿವನಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸಿಟ್ಟಿನಿಂದ ಸಹನೆ ಕಳೆದುಕೊಂಡ ಶಿವ ತನ್ನ ತ್ರಿಶೂಲದಿಂದ ಬಾಲಕನ ಶಿರಚ್ಛೇದಿಸಿದ.

ಸ್ನಾನ ಮುಗಿಸಿ ಹೊರಬಂದ ಪಾರ್ವತಿ ತನ್ನ ಪುತ್ರನ ದುಸ್ಥಿತಿ ಕಂಡು ತೀವ್ರವಾಗಿ ಮರುಗಿದಳಲ್ಲದೆ ಅತೀವ ಕೋಪಗೊಂಡಳು. ತನ್ನ ಮಗನಿಗೆ ಮತ್ತೆ ಜೀವದಾನ ನೀಡುವಂತೆ ಶಿವನನ್ನು ವಿನಂತಿಸಿದಳು. ಆದರೆ ಶಿವನ ತ್ರಿಶೂಲ ಅತ್ಯಂತ ಶಕ್ತಿಯುತವಾಗಿದ್ದು, ಬಾಲಕನ ತಲೆಯನ್ನು ಬಹುದೂರ ಎಸೆಯಲ್ಪಟ್ಟಿತ್ತು. ತಲೆಯನ್ನು ಹುಡುಕಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು.

ಕೊನೆಯದಾಗಿ ಶಿವ ಬ್ರಹ್ಮನೊಡನೆ ಸಮಾಲೋಚನೆ ನಡೆಸಿದ. ಈ ವೇಳೆಗೆ ಬ್ರಹ್ಮ, ಪ್ರಥಮವಾಗಿ ದೃಷ್ಟಿಗೆ ಬಿದ್ದ ಉತ್ತರಕ್ಕೆ ತಲೆ ಮಾಡಿ ಮಲಗಿದ್ದ ಯಾವುದೇ ಜೀವಿಯ ತಲೆಯನ್ನು ತಂದು ಬಾಲಕನಿಗೆ ಜೋಡಿಸುವಂತೆ ಸಲಹೆ ನೀಡಿದರು.

ಶಿವ ತನ್ನ ಗಣವನ್ನು ಕರೆದು, ಉತ್ತರಕ್ಕೆ ತಲೆ ಹಾಕಿ ಮಲಗಿರುವ ಯಾವುದೇ ಜೀವಿಯ ತಲೆಯನ್ನು ತರುವಂತೆ ಆದೇಶಿಸಿದ. ಶಿವನ ಆದೇಶದಂತೆ ತೆರಳಿದ ಗಣಕ್ಕೆ ಉತ್ತರಕ್ಕೆ ತಲೆಹಾಕಿ ಮಲಗಿದ್ದು ಸಾಯುವ ಸ್ಥಿತಿಯಲ್ಲಿರುವ ಆನೆಯೊಂದು ಕಂಡು ಬಂತು. ಆನೆ ಸತ್ತಬಳಿಕ ಆನೆಯ ತಲೆಯನ್ನು ತಂದು ಬಾಲಕನಿಗೆ ಜೋಡಿಸಿ ಮರುಜೀವ ನೀಡಲಾಗಿ, ಗಣಪತಿ ಅಥವಾ ಗಣಗಳ ನಾಯಕನೆಂಬ ನಾಮಕರಣ ಮಾಡಲಾಯಿತು.

ಇನ್ನೊಂದು ಕಥೆ

ಒಂದಾನೊಂದು ಕಾಲದಲ್ಲಿ ಗಜಾಸುರನೆಂಬ ರಕ್ಕಸನಿದ್ದ. ಶಿವನನ್ನು ಒಲಿಸಿಕೊಳ್ಳಲು ಗಜಾಸುರ ರುದ್ರ ತಪಸ್ಸನ್ನಾಚರಿಸಿದ್ದ. ಗಜಾಸುರನ ಭಕ್ತಿಗೆ ಮೆಚ್ಚಿದ ಶಿವ ಆತನಿಗೆ ಬೇಕಾದ ವರವನ್ನು ಕರುಣಿಸಲು ಮುಂದಾದ. ತನ್ನಬಳಿ ಯಾರೂ ಸುಳಿಯದಂತೆ ತನ್ನ ದೇಹದಿಂದ ಸದಾ ಬೆಂಕಿಯ ವಿಕಿರಣಗಳು ಹೊರಸೂಸುವಂತೆ ಮಾಡಬೇಕು ಎಂದು ಕೇಳಿಕೊಂಡ. ಗಜಾಸುರ ತನ್ನ ತಪಸ್ಸನ್ನು ಮತ್ತೆ ಮುಂದುವರಿಸಿದ. ಶಿವ ಮತ್ತೆ ಪ್ರತ್ಯಕ್ಷವಾದಾಗ, ಶಿವ ತನ್ನ ಉದರದಲ್ಲಿ ಜೀವಿಸುವಂತಾಗಬೇಕು ಎಂಬ ವರಬೇಡಿದ. ಇದಕ್ಕೂ ಶಿವ ತಥಾಸ್ತು ಅಂದ.

ಶಿವನನ್ನು ಒಲಿಸಿಕೊಳ್ಳುವುದು ತುಂಬ ಸುಲಭ. ಆತ ಸಂತುಷ್ಟನಾದರೆ ಏನೂ ಬೇಕಾದರೂ ಕೊಡುವ ಕಾರಣ ಆತನಿಗೆ ಬೋಳೇ ಶಂಕರ ಎಂಬ ಹೆಸರಿದೆ.
ತನ್ನ ಪತಿ ಕಾಣದಾದಾಗ ಪಾರ್ವತಿ ಎಲ್ಲೆಲ್ಲು ಹುಡುಕಿದರೂ ಶಿವ ಕಾಣಲಿಲ್ಲ. ಕೊನೆಗೆ ಪಾರ್ವತಿ ತನ್ನ ಸಹೋದರ ವಿಷ್ಣುವಿನ ಬಳಿ ತೆರಳಿ ತನ್ನ ಪತಿಯನ್ನು ಹುಡುಕಿ ಕೊಡುವಂತೆ ಕೇಳಿಕೊಂಡಳು.

ಎಲ್ಲವನ್ನು ತಿಳಿದಿದ್ದ ವಿಷ್ಣು, ಚಿಂತಿಸದಿರುವಂತೆ ತನ್ನ ಸಹೋದರಿಯನ್ನು ಸಮಾಧಾನಿಸಿ, ನಿನ್ನ ಗಂಡ ಬೋಳೆ ಶಂಕರ ತನ್ನ ಭಕ್ತರಿಗೆ ಕೇಳಿದ್ದನ್ನೆಲ್ಲ ಕೊಡುತ್ತಾನೆ. ಅದರ ಪರಿಣಾಮವೇನೆಂದು ಆಲೋಚಿಸದ ಕಾರಣ ತೊಂದರೆಗೆ ಸಿಲುಕಿಕೊಳ್ಳುತ್ತಾನೆ. ಏನಾಗಿದೆ ಎಂದು ತಾನು ತಿಳಿಯುವುದಾಗಿ ಭರವಸೆ ನೀಡುತ್ತಾನೆ.

ಬ್ರಹ್ಮಾಂಡದ ಆಗು ಹೋಗುಗಳ ಕುರಿತು ಸಕಲಜ್ಞಾನ ಹೊಂದಿದ್ದ, ವಿಷ್ಣು ಸಣ್ಣದೊಂದು ವಿನೋದವನ್ನಾಡಿದ. ಶಿವನ ವಾಹನ ನಂದಿಯನ್ನು ನರ್ತಿಸುವ ನಂದಿಯನ್ನಾಗಿ ಪರಿವರ್ತಿಸಿ ಗಜಾಸುರನ ಎದುರು ನರ್ತಿಸುವಂತೆ ಮಾಡಿ, ತಾನು ಕೊಳಲುವಾದಕನಂತೆ ಕಾಣಿಸಿಕೊಂಡ.

ನಂದಿಯ ನರ್ತನಕಂಡು ಸಂತೋಷಗೊಂಡ ಗಜಾಸುರ ಏನು ಬೇಕೆಂದು ಕೊಳಲು ವಾದಕನಿಗೆ ಕೇಳಿದ. ತಾನು ಕೇಳಿದ್ದು ಕೊಡುವೆಯಾ ಎಂದು ವಿಷ್ಣು ಕೇಳಿದ. ತನ್ನನ್ನು ಯಾರೆಂದು ತಿಳಿದಿದ್ದಿಯಾ, ನೀನು ಏನೇ ಕೇಳಿದರೂ ನಾನು ತಕ್ಷಣಕೊಡಬಲ್ಲೆನೆಂದು ಗಜಾಸುರ ಹೇಳುತ್ತಲೇ, ಹಾಗಾದರೆ ನಿನ್ನ ಉದರದಲ್ಲಿರುವ ಶಿವನನ್ನು ಮುಕ್ತಿಗೊಳಿಸು ಅಂದ. ಇದನ್ನು ಕೇಳುತ್ತಲೇ, ಇದು ವಿಷ್ಣುವಲ್ಲದೆ ಮತ್ತಾರಲ್ಲ; ವಿಷ್ಣುವಿಗಲ್ಲದೇ ಇನ್ನಾರಿಗೂ ಈ ರಹಸ್ಯ ತಿಳಿದಿರದು ಎಂದು ಒಡನೆಯೇ ವಿಷ್ಣುವಿನ ಕಾಲಿಗೆ ಬಿದ್ದ.

ಶಿವನನ್ನು ತನ್ನ ಉದರದಿಂದ ಮುಕ್ತಿಗೊಳಿಸಿದ ಗಜಾಸುರ, ಶಿವನ ಬಳಿ ಕೊನೆಯದೊಂದು ವರ ಕೇಳಿದ. ಬೇಡಿದ ವರವನ್ನೆಲ್ಲ ಕರುಣಿಸಿದ ನೀನು ಕೊನೆ ಇಚ್ಛೆಯನ್ನು ನೆರವೇರಿಸಬೇಕೆಂದು ಬೇಡಿಕೊಂಡಿದ್ದು, ತಾನು ಸತ್ತ ಬಳಿಕ ತನ್ನ ತಲೆಯನ್ನು ಪೂಜಿಸುವ ಮೂಲಕ ಎಲ್ಲರೂ ತನ್ನನ್ನು ಪೂಜಿಸುವಂತಾಗಬೇಕು ಎಂದು ಕೇಳಿಕೊಳ್ಳುತ್ತಾನೆ. ಶಿವ ತನ್ನದೇ ಮಗನನ್ನು ಕರೆತಂದು ಅವನಿಗೆ ಗಜಾಸುರನ ತಲೆಯನ್ನು ಜೋಡಿಸುತ್ತಾನೆ. ಅಂದಿನಿಂದ ಮೊದಲ ಪೂಜೆ ಏನಿದ್ದರೂ ಗಣೇಶನಿಗೆ ಸಲ್ಲಬೇಕು ಎಂಬ ಸಂಪ್ರದಾಯ ಹುಟ್ಟಿಕೊಂಡಿತು. ಇದು ಶಿವ ಗಜಾಸುರನಿಗೆ ನೀಡಿದ ಉಡುಗೊರೆ.

ಮತ್ತೊಂದು ಕಥೆ
ಬ್ರಹ್ಮವೈವರ್ತ ಪುರಾಣದಲ್ಲಿ ಹೇಳುವಂತೆ ಇನ್ನೊಂದು ಕಥೆ ಇದೆ. ವಿಷ್ಣುವನ್ನು ಒಲಿಸಿಕೊಂಡರೆ ಒಬ್ಬ ಮಗನನ್ನು ಕರುಣಿಸುವನೆಂದು, ಶಿವನ ಆಜ್ಞಾನುಸಾರವಾಗಿ ಪಾರ್ವತಿ ಒಂದು ವರ್ಷ ಉಪವಾಸ (ಪುಣ್ಯಕ ವ್ರತ)ಮಾಡುತ್ತಾಳೆ.

ಭಗವಾನ್ ಕೃಷ್ಣನು ಅವತಾರ ಸಮಾಪ್ತಿಯಾದ ನಂತರ, ಪ್ರತಿಯೊಂದು ಕಲ್ಪದಲ್ಲೂ ತಾನು ಪಾರ್ವತಿಯ ಮಗನಾಗಿ ಅವತರಿಸುವೆನೆಂದು ಘೋಷಿಸುತ್ತಾನೆ. ಅದರಂತೆಯೇ, ಕೃಷ್ಣನು ಸುಂದರ ರೂಪದಲ್ಲಿ ಪಾರ್ವತಿಯ ಶಿಶುವಾಗಿ ಜನ್ಮ ತಳೆಯುತ್ತಾನೆ. ಈ ಘಟನೆಯನ್ನು ಅತ್ಯಧಿಕ ಸಂಭ್ರಮದಿಂದ ಆಚರಿಸಿ, ಎಲ್ಲಾ ದೇವಾನುದೇವತೆಗಳನ್ನು ಮಗುವನ್ನು ನೋಡಲು ಆಹ್ವಾನಿಸಲಾಗುತ್ತದೆ. ಆದರೆ ಸೂರ್ಯನ ಮಗನಾದ ಶನಿಯು ತನ್ನ ದೃಷ್ಟಿ ಶಿಶುವಿಗೆ ಹಾನಿಕಾರಕವಾದುದರಿಂದ ಮಗುವನ್ನು ದೃಷ್ಟಿಸಲು ಹಿಂಜರಿಯುತ್ತಾನೆ.

ಆದರೂ, ಪಾರ್ವತಿಯು ಶಿಶುವನ್ನು ನೋಡೆಂದು ಶನಿಯನ್ನು ಆಗ್ರಹಿಸುತ್ತಾಳೆ. ಶನಿಯು ಮಗುವನ್ನು ನೋಡಿದ ತಕ್ಷಣವೇ ಶಿಶುವಿನ ತಲೆ ಉರುಳಿ ಬಿದ್ದು ಗೋಲೋಕಕ್ಕೆ ಹಾರಿ ಹೋಗುತ್ತದೆ. ದುಃಖದಲ್ಲಿ ಮುಳುಗಿದ ಶಿವ ಮತ್ತು ಪಾರ್ವತಿಯರನ್ನು ಕಂಡು, ವಿಷ್ಣು ತನ್ನ ವಾಹನವಾದ ಗರುಡನನ್ನು ಏರಿ, ಪುಷ್ಪ-ಭದ್ರವೆಂಬ ನದೀತೀರದಿಂದ ಮರಿಯಾನೆಯೊಂದರ ತಲೆಯನ್ನು ತರುತ್ತಾನೆ.

ಆನೆಯ ತಲೆಯನ್ನು ಪಾರ್ವತಿಯ ಶಿಶುವಿನ ರುಂಡವಿಲ್ಲದ ದೇಹಕ್ಕೆ ಜೋಡಿಸಿ, ಪುನರುಜ್ಜೀವಿತಗೊಳಿಸುತ್ತಾರೆ. ಆ ಶಿಶುವನ್ನು ಗಣೇಶನೆಂದು ಹೆಸರಿಸಿ, ದೇವತೆಗಳೆಲ್ಲರೂ ಅವನನ್ನು ಆಶೀರ್ವದಿಸುತ್ತಾರೆ ಮತ್ತು ಅವನಿಗೆ ಶಕ್ತಿ ಸಾಮರ್ಥ್ಯ ಹಾಗೂ ಅಭಿವೃದ್ಧಿಯನ್ನು ಹಾರೈಸುತ್ತಾರೆ.

ಮಗದೊಂದು ಕತೆಯಂತೆ-
ಒಮ್ಮೆ ಕಶ್ಯಪ ಋಷಿಯ ಪುತ್ರ ಆದಿತ್ಯನನ್ನು ಬೀಸಿ ಒಗೆಯುತ್ತಾನೆ. ಸತ್ತೇ ಹೋದ ಬಾಲಕನಿಗೆ ಶಿವ ಮರುಜೀವ ನೀಡಿದರೂ ಇದರಿಂದ ಕಶ್ಯಪ ಸಂತುಷ್ಟನಾಗಲಿಲ್ಲ. ಸಪ್ತ ಋಷಿಗಳಲ್ಲಿ ಒಬ್ಬನಾದ ಕಶ್ಯಪ, ಶಿವನ ಮಗನ ತಲೆ ತುಂಡಾಗಲಿ ಎಂದು ಶಾಪ ನೀಡುತ್ತಾನೆ. ಇದು ಸಂಭವಿಸಿದಾಗಿ ಇಂದ್ರನ ಆನೆಯ ತಲೆಯನ್ನು ಶಿವನ ಪುತ್ರನಿಗೆ ಜೋಡಿಸಲಾಯಿತು.

ಮತ್ತೂ ಒಂದು ಕತೆ

ಒಮ್ಮೆ ಪಾರ್ವತಿ ಸ್ನಾನಮಾಡಿದ ನೀರನ್ನು ಗಂಗಾನದಿಗೆ ಚೆಲ್ಲಲಾಯಿತು. ಈ ನೀರನ್ನು ಕುಡಿದ ಆನೆಯ ತಲೆಯ ದೇವಿ ಮಾಲಿನಿ ನಾಲ್ಕು ಕೈಗಳು ಮತ್ತು ಐದು ಆನೆ ತಲೆ ಹೊಂದಿದ ಮಗುವೊಂದಕ್ಕೆ ಜನ್ಮ ನೀಡಿದಳು. ಈ ಮಗುವನ್ನು ತನ್ನದೆಂದೆ ಗಂಗಾಮಾತೆ ಹೇಳಿದರೂ, ಶಿವ ಇದು ಪಾರ್ವತಿಯ ಮಗನೆಂದು ಘೋಷಿಸಿ, ಮಗುವಿನ ಐದು ತಲೆಗಳನ್ನು ಒಂದೇ ತಲೆಯಾಗಿಸಿದ್ದು ವಿಘ್ನಗಳ ನಿವಾರಕನನ್ನಾಗಿಸಿದ.

ಆಸ್ತಿಕ ಹಿಂದೂಗಳು ಗಣೇಶನನ್ನು ವಿಘ್ನ ನಿವಾರಕನನ್ನಾಗಿ ಪೂಜಿತ್ತಾರೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

(-ಸ್ನೇಹಾ)

Share this Story:

Follow Webdunia kannada