Select Your Language

Notifications

webdunia
webdunia
webdunia
webdunia

ಸಂಕ್ರಾಂತಿ ಹಬ್ಬ

ಸಂಕ್ರಾಂತಿ ಹಬ್ಬ

ಇಳಯರಾಜ

ಸಂಕ್ರಾಂತಿ ಹಬ್ಬ ದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ.

ಕನ್ನಡನಾಡಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ಅದನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುತ್ತಾರೆ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ, ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹೀಗಾಗಿ ವಿದೇಶಗಳಲ್ಲಿಯೂ ವಿಶೇಷವಾಗಿ ಪೌರ್ವಾತ್ಯ ದೇಶಗಳಲ್ಲಿ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ. ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷ ಪಡುವ ಸಡಗರ. ಮನೆಯನ್ನು ಶುದ್ಧಿಗೊಳಿಸುವುದು, ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು, ಮೂರನೆಯ ದಿನ ಹೊಸ ಫಸಲನ್ನು ಉಂಡು ಸಂತೋಷಪಡಲು ಎಲ್ಲಾ ಸನ್ನದ್ಧತೆ ನಡೆಸುತ್ತಾರೆ. ಮನೆಯ ಮುಂದೆ ವಿವಿಧ ರೀತಿಯಲ್ಲಿ ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕಾರ.

ಸೂರ್ಯನು ಮಕರ ಸಂಕ್ರಾಂತಿಯಂದು ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಮಕರ ಸಂಕ್ರಾಂತಿಯೆಂದು ಹೆಸರು. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಈ ದೇಶಗಳಲ್ಲಿಯೂ ಇದನ್ನು ಹೆಚ್ಚಾಗಿ ಮಕರ ಸಂಕ್ರಾಂತಿಯೆಂದೇ ಆಚರಿಸುತ್ತಾರೆ. ಆ ದಿನ ತಮಗೆ ವರ್ಷವಿಡೀ ಧನ, ಧಾನ್ಯ, ಅಭಿವೃದ್ಧಿಯನ್ನು ಮಾಡಿದ ಸೂರ್ಯನಿಗೆ ಮತ್ತು ಭೂಮಿಗೆ ಹಾಗೂ ವ್ಯವಸಾಯದಲ್ಲಿ ಸಹಾಯಕವಾಗಿ ನಿಂತು ನೆರವು ನೀಡಿದ ದನಕರುಗಳಿಗೆ ಗೌರವ ನೀಡುವ ಹಬ್ಬ. ಕರ್ನಾಟಕದಲ್ಲಿ ಮುಖ್ಯವಾಗಿ ಎಳ್ಳು, ಬೆಲ್ಲ ಮುಂತಾದವುಗಳನ್ನು ಮಿಶ್ರ ಮಾಡಿ ಊರಿನಲ್ಲೆಲ್ಲಾ ಹಂಚುವುದು. ಇದರೊಂದಿಗೆ ಹೊಸ ಬೆಳೆ, ಕಬ್ಬು, ಎಲಚಿಕಾಯಿ ಮುಂತಾದವುಗಳನ್ನು ಸೇರಿಸಿ ಎಲ್ಲರಿಗೂ ನೀಡಿ ಸಂತೋಷಪಡುವುದು.

ಎಳ್ಳು ಬೆಲ್ಲವನ್ನು ಆಕರ್ಷಣೀಯವಾಗಿ ತಯಾರಿಸಿ ಹಂಚುವ ರೂಢಿ ಇದೀಗ ಎಲ್ಲೆಲ್ಲೂ ಹೆಚ್ಚು ಪ್ರಚಲಿತವಿದೆ. ದೂರದ ಊರಿನಲ್ಲಿರುವ ಬಂಧು ಮಿತ್ರರಿಗೆ ಅದನ್ನು ಅಂಚೆಯ ಮೂಲಕ ರವಾನಿಸುವುದು ಹಾಗೂ ಶುಭ ಸಂದೇಶಗಳನ್ನು ಕಳುಹಿಸುವುದು ಈಗ ರೂಢಿಯಲ್ಲಿ ಬಂದಿದೆ. ಅಂದು ಸಂಜೆ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಕೆ ಮಾಡುವುದು ಅನೂಚಾನವಾಗಿ ನಡೆದು ಬಂದಿದೆ.

ಎಳ್ಳು ಬೆಲ್ಲವನ್ನು ಹಂಚುವ ಸಂಪ್ರದಾಯ ಬಹಳ ಮಹತ್ವ ಪಡೆದಿದೆ. ಬೇರೆ ದಿನಗಳಲ್ಲಿ ಎಳ್ಳನ್ನು ಬೇರೆಯವರಿಗೆ ಕೊಡುವುದಾಗಲೀ ಅವರಿಂದ ಪಡೆಯುವುದಾಗಲೀ ಶುಭಕರವಲ್ಲ. ಎಳ್ಳು ಧಾನ್ಯ ಏನಿದ್ದರೂ ಋಣಾನುಬಂಧದ ಸಂಕೇತವಾಗಿರುವುದರಿಂದ ಅದನ್ನು ನೆಂಟರಿಷ್ಟರೆಲ್ಲರಿಗೂ ಆ ದಿನ ಹಂಚುವುದು ಮುಖ್ಯವಾಗಿ ಬಾಂಧವ್ಯ ನಿರಂತರವಾಗಿರಲಿ ಎಂಬುದರ ಸಂಕೇತ. ಆದ್ದರಿಂದಲೇ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬುದನ್ನು ಆ ದಿನ ಕೇಳುತ್ತೇವೆ. ಮಹಾರಾಷ್ಟ್ರದಲ್ಲಿಯೂ ಇದು ರೂಢಿಯಲ್ಲಿದೆ.

ಸಂಕ್ರಾಂತಿ ಮುಖ್ಯವಾಗಿ ಸುಗ್ಗಿಯ ಹಬ್ಬ. ಧವಸ, ಧಾನ್ಯ ಬೆಳೆಯಲು ಸಹಾಯಕವಾದ ರೈತನ ಸ್ನೇಹಿತ ದನಕರುಗಳಿಗೂ ಆ ದಿನ ರೈತ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ದನಕರುಗಳನ್ನು ವಿಶೇಷವಾಗಿ ಸಿಂಗರಿಸುತ್ತಾರೆ. ಕೊಂಬುಗಳನ್ನು ಶುಭ್ರಗೊಳಿಸಿ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಾರೆ. ಕಬ್ಬು, ಬೆಲ್ಲ, ಬಾಳೆಹಣ್ಣು, ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸುತ್ತಾರೆ.

ವೈಭವದ ಮೆರವಣಿಗೆಯಲ್ಲಿ ಅವುಗಳನ್ನು ಊರೆಲ್ಲಾ ತಿರುಗಾಡಿಸುತ್ತಾರೆ. ವರ್ಷವಿಡೀ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ಈಗ ದೊರೆಯುತ್ತದೆ. ಹೀಗೆ ಸಂಕ್ರಾಂತಿಯ ಸಂಭ್ರಮ ನಾಡಿನ ಎಲ್ಲಾ ಭಾಗಗಳಲ್ಲಿಯೂ ಕಂಡು ಬರುತ್ತದೆ.

(- ಡಾ.|ವಿ.ಗೋಪಾಲಕೃಷ್ಣ)

Share this Story:

Follow Webdunia kannada