Select Your Language

Notifications

webdunia
webdunia
webdunia
webdunia

ದೀಪಾರಾಧನೆಯ ಕಾರ್ತಿಕ ದೀಪೋತ್ಸವ

ದೀಪಾರಾಧನೆಯ ಕಾರ್ತಿಕ ದೀಪೋತ್ಸವ
ರಶ್ಮಿ ಪೈ
PTI
ಬೆಳಕಿನ ಹಬ್ಬವಾದ ಕಾರ್ತಿಕ ದೀಪೋತ್ಸವವು ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಹುಣ್ಣಿಮೆಯ ದಿನದಂದು ಆಚರಿಸಲ್ಪಡುತ್ತದೆ. ಇದೇ ತಿಂಗಳ 24 ನೇ ತಾರೀಕು "ತೃಕ್ಕಾರ್ತಿಕ "ಅಥವಾ "ಕಾರ್ತಿಗೈ ದೀಪಂ" ಎಂದು ಕರೆಯಲ್ಪಡುವ ಕಾರ್ತಿಕ ದೀಪೋತ್ಸವ. ದೀಪಾವಳಿಯ ಮುಂದುವರಿದ ಭಾಗದಂತೆ ಆಚರಿಸಲ್ಪಡುವ ಈ ಹಬ್ಬವು ತೈಲ ದೀಪಗಳ ಶೋಭೆಯೊಂದಿಗೆ ಮನೆ ಮನಗಳನ್ನು ಬೆಳಗಿಸಿ ಐಶ್ವರ್ಯ ದೇವತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಸಾಲು ಹಣತೆಗಳನ್ನಿರಿಸಿ ಆಚರಿಸಲಾಗುತ್ತದೆ.

ಕರ್ನಾಟಕದಾದ್ಯಂತ ಹಿಂದೂ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸದ ಆಚರಣೆ ಭಕ್ತಿ ಸಂಭ್ರಮದಿಂದ ನಡೆಯುತ್ತದೆ. ದೀಪಾವಳಿಯಂದಿನಿಂದ ತೊಡಗಿ ಆಚರಿಸಲ್ಪಡುವ ಈ ದೀಪೋತ್ಸವದಲ್ಲಿ ದೀಪಗಳ ಸಂಖ್ಯೆ ವರ್ಧಿಸುತ್ತಾ ಬರುವುದನ್ನು ಕಾಣಬಹುದು. ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳಾದ ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳ ಮೊದಲಾದ ದೇವಾಲಯಗಳಲ್ಲಿ ಇದು ಆಚರಿಸಲ್ಪಡುತ್ತಿದ್ದು, ದೀಪಾರಾಧನೆ ಹೆಚ್ಚಿನ ಮಹತ್ವವನ್ನು ಪಡೆದಿದೆ. ಮಂಗಳೂರಿನ ಶ್ರೀ ವೆಂಕಟ್ರಮಣ ದೇವಾಲಯ, ಶೃಂಗೇರಿ ಶಾರದಾಂಬಾ ದೇವಾಲಯ, ಕಲ್ಯಾಣ ಪುರದ ಶ್ರೀ ವೆಂಕಟ್ರಮಣ ದೇವಾಲಯ ದೇವಾಲಯಗಳಲ್ಲಿ ಇದು ಅತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.

ಬೆಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ಅಕ್ಟೋಬರ್ 26 ರಿಂದ ನವಂಬರ್ 24ರವರೆಗೆ ನಡೆಯುವ ದೀಪೋತ್ಸವವು ಬೆಂಗಳೂರಿನ ದೀಪೋತ್ಸವದ ಕೇಂದ್ರ ಬಿಂದು. ಇಲ್ಲಿ ಭಕ್ತರು ರಾಧಾಕೃಷ್ಣರನ್ನು ಭಜಿಸಿ ಸಂಜೆಯ ವೇಳೆ ಝಗಝಗಿಸುವ ದೀಪಗಳಿಂದ ದೇವಾಲಯವನ್ನು ಬೆಳಗುತ್ತಾರೆ. ಭಕ್ತಿಸಾಂದ್ರವಾದ ಸಂಗೀತದೊಂದಿಗೆ, ಅಬ್ಬರದ ಪಟಾಕಿಗಳನ್ನು ಸಿಡಿಸಿ ವೃಂದಾವನ ದೀಪೋತ್ಸವ ಎಂದು ಕರೆಯಲ್ಪಡುವ ಈ ಆಚರಣೆಯು ಹೆಚ್ಚು ರಂಜನೀಯವಾಗಿರುತ್ತದೆ. ಕರ್ನಾಟಕದಲ್ಲಿ ಈ ಆಚರಣೆಯು ಪ್ರಧಾನವಾಗಿ ದೇವಾಲಯಗಳಲ್ಲಿ ಮಾತ್ರ ಸೀಮಿತವಾಗಿರುತ್ತದೆ. ಅಂದು ದೇವಾಲಯಗಳಲ್ಲಿ ಭಕ್ತರು ತೈಲದೀಪಗಳನ್ನು ಬೆಳಗಿಸಿ ತಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಭಕ್ತಿಯಿಂದ ಕೊಂಡಾಡುತ್ತಾರೆ.

ಕೇರಳದ ಹೆಚ್ಚಿನ ದೇವೀ ದೇವಾಲಯಗಳಲ್ಲಿ ಈ ದಿನದಂದು ಪ್ರಧಾನ ಉತ್ಸವವು ನೆರವೇರುತ್ತದೆ. "ಕಾರ್ತಿಕ ವಿಳಕ್ಕ್" ಅಥವಾ "ತೃಕ್ಕಾರ್ತಿಕ" ಎಂದು ಕರೆಯಲ್ಪಡುವ ಈ ದಿನದಂದು ಮಣ್ಣಿನ ಹಣತೆಗಳಲ್ಲಿ ಸಾಲು ದೀಪಗಳನ್ನುರಿಸಿ ಐಶ್ವರ್ಯ ದೇವತೆಯ ಸ್ವಾಗತಕ್ಕಾಗಿ ಮನೆ ಮಂದಿರಗಳನ್ನು ಅಣಿಗೊಳಿಸಲಾಗುತ್ತದೆ. ತಮ್ಮ ಹೊಲಗದ್ದೆಗಳಲ್ಲಿ ತೆಂಗಿನ ಗರಿಯನ್ನು ಬಳಸಿ ಒಲೆ ಉರಿಸಿ ನೈವೇದ್ಯವನ್ನು ಸ್ವೀಕರಿಸಿದ ನಂತರ ಮಕ್ಕಳೆಲ್ಲರೂ ಉಲ್ಲಾಸದಿಂದ 'ಅರಿಕೋರರಿಕೊರಿಕೋರೆ' ಎಂದು ಬೊಬ್ಬೆ ಹಾಕಿ ಆಚರಿಸುವ ಪದ್ಧತಿ ದಕ್ಷಿಣ ಕೇರಳದಲ್ಲಿ ಕಂಡು ಬರುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವಾದ ವೃಶ್ಚಿಕ ಮಾಸದ ಕೃತಿಕಾ ನಕ್ಷತ್ರದ ಈ ದಿನದಂದು ಶಿವ ದೇವಾಲಯ ಮತ್ತು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಪ್ರತ್ಯೇಕ ಪೂಜೆ, ಬಲಿವಾಡುಗಳು ನೆರವೇರಿಸಲ್ಪಡುತ್ತದೆ.

ಇತರ ರಾಜ್ಯಗಳೊಂದಿಗೆ ಹೋಲಿಸಿದರೆ ತಮಿಳುನಾಡಿನಲ್ಲಿ ಇದು ಹೆಚ್ಚು ಅದ್ದೂರಿಯಿಂದ ಆಚರಿಸಲ್ಪಡುತ್ತದೆ. ಇಲ್ಲಿನ ತಿರುವನ್ನಾಮಲೈಯಲ್ಲಿ ಇದರ ಆಚರಣೆಯು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಇದರ ಐತಿಹ್ಯ ಇಂತಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ತಮ್ಮಲ್ಲಿ ಯಾರು ಪ್ರಬಲರು ಎಂದು ಪ್ರಶ್ನಿಸಿ ವಾಗ್ವಾದ ನಡೆಸಿದಾಗ ಶಿವನು ಬೃಹದಾಕಾರದ ಅಗ್ನಿ ಕಂಬದಂತೆ ಪ್ರತ್ಯಕ್ಷನಾಗಿ ಬ್ರಹ್ಮ ಮತ್ತು ವಿಷ್ಣುವಿನೊಡನೆ ತನ್ನ ಶಿರ ಮತ್ತು ಪಾದದ ಸ್ಥಾನವನ್ನು ಕಂಡು ಹಿಡಿಯುವಂತೆ ಕೇಳಿಕೊಳ್ಳುತ್ತಾನೆ.

ಬ್ರಹ್ಮನು ರಾಜಹಂಸವಾಗಿ ಶಿವನ ಶಿರವನ್ನು ಕಂಡು ಹಿಡಿಯಲು ಮೇಲಕ್ಕೆ ಹೋದರೆ, ವಿಷ್ಣುವು ವರಾಹ ಅವತಾರ ತಾಳಿ ಭೂಲೋಕವನ್ನು ಕೊರೆದು ಶಿವ ಪಾದವನ್ನು ಅನ್ವೇಷಿಸಲು ತೊಡಗುತ್ತಾನೆ .ಆದರೆ ಶಿವನ ಅಪ್ರತಿಮ ಆಕಾರದಿಂದಾಗಿ ಇವರಿಬ್ಬರಿಗೆ ಶಿವನ ಶಿರ, ಪಾದಗಳನ್ನು ಕಂಡು ಹಿಡಿಯಲು ಅಸಾಧ್ಯವಾಗುತ್ತದೆ. ಅಲ್ಲಿ ಅವರ ಒಣಜಂಭ ಮುರಿದು ಈ ಅಗ್ನಿ ಪರ್ವತವು ಶಿವನೆಂದು ಅರಿವಿಗೆ ಬರುತ್ತದೆ. ಈ ಪರ್ವತವು ತಮಿಳುನಾಡಿನಲ್ಲಿ ಅರುಣಾಚಲ (ಪೂಜನೀಯ ಅಗ್ನಿ ಬೆಟ್ಟ) ಅಥವಾ ತಿರುವನ್ನಾಮಲೈ ಎಂದು ಪ್ರಸಿದ್ಧಿ ಹೊಂದಿದೆ. ಇಲ್ಲಿನ ದೇವಾಲಯದ ಶಿವಲಿಂಗವು ಅಗ್ನಿ ಲಿಂಗವಾಗಿದ್ದು ಕಾರ್ತಿಕ ದಿನದಂದು ಈ ಲಿಂಗದಿಂದ ಬೆಳಕು ಹೊರಬಂದು ಶಿವನ ಅಸ್ತಿತ್ವವನ್ನು ತೋರಿಸುತ್ತದೆ ಎಂಬ ನಂಬಿಕೆಯು ಇದರಲ್ಲಿದೆ. ಆದುದರಿಂದಲೇ ಇಲ್ಲಿ ಕಾರ್ತಿಕ ದೀಪೋತ್ಸವವು (ಕಾರ್ತಿಗೈ ದೀಪಂ) ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ. ಈ ಸುಪ್ರಸಿದ್ಧ ಬೆಟ್ಟದ ದೇವಾಲಯವು ಚೆನ್ನೈ ನಗರದಿಂದ ಸುಮಾರು 187 ಕಿ.ಮೀ ದೂರದಲ್ಲಿದ್ದು ಸಮುದ್ರ ತಳದಿಂದ 266 ಅಡಿ(79.80 ಮೀ) ಎತ್ತರದಲ್ಲಿದೆ.

ಇದರೊಂದಿಗೆ ಸುಬ್ರಹ್ಮಣ್ಯ ಸ್ವಾಮಿ (ಮುರುಗನ್) ಆರು ಶಿಶುಗಳ ರೂಪದಲ್ಲಿ "ಸರವಣ ಪೋಯ್ಗೈ" ಎಂಬ ಸರೋವರದಲ್ಲಿ ಅವತಾರವೆತ್ತಿದ್ದು, ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿಯು ತನ್ನ ಅಮ್ಮ ಪಾರ್ವತಿಯೊಂದಿಗೆ ಸಂಯುಕ್ತವಾದನು ಎಂಬ ನಂಬುಗೆಯಿಂದ ಸುಬ್ರಹ್ಮಣ್ಯ ಸ್ವಾಮಿಯ ಆರು ರೂಪಗಳಿಗೆ ಈ ದಿನದಂದು ಪೂಜೆ ಸಲ್ಲಿಸುವ ಆಚರಣೆಯು ತಮಿಳುನಾಡಿನಲ್ಲಿ ಕಂಡುಬರುತ್ತದೆ.

ಈ ದಿನದಂದು ಜನರು ಮನೆ ಪರಿಸರಗಳನ್ನು ಶುಚಿಗೊಳಿಸಿ, ಸಂಜೆಯ ವೇಳೆ ಮನೆಯ ಮುಂದೆ ರಂಗೋಲಿ (ಕೋಲಂ)ಯನ್ನು ರಚಿಸಿ, ಸಾಲು ಸಾಲಾಗಿ ಹಣತೆಗಳನ್ನು ಬೆಳಗಿಸುತ್ತಾರೆ. ದೀಪಾರಾಧನೆ ಮುಗಿದ ನಂತರ ದೀಪಗಳನ್ನು ಮನೆಯ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಾಗುತ್ತದೆ. ಹೀಗೆ ಕಾರ್ತಿಕ ದೀಪವು ಸುಖ ಸಮೃದ್ದಿಯ, ಐಶ್ವರ್ಯದ ದ್ಯೋತಕವಾಗಿ ಆಚರಿಸಲ್ಪಡುತ್ತದೆ.

Share this Story:

Follow Webdunia kannada