ಗುರುವ ಗೌರವಿಸೋಣ - ಗುರು ಪೂರ್ಣಿಮಾ
ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಇದೇ ಭಾನುವಾರ (ಜು.25, 2010) ಗುರು ಪೂರ್ಣಿಮಾ ದಿವಸವಾಗಿದೆ.ಇದು ಋಷಿಗಳಿಗೆ ಮಾತ್ರವಲ್ಲದೇ ವೇದಾಧ್ಯಯನ ಮಾಡುವವರಿಗೂ ಪವಿತ್ರವಾಗಿದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಸ್ಥಾನವಿರುವುದರಿಂದ ಗುರು ಪೂರ್ಣಿಮಾ ಸರ್ವರಿಗೂ ಪವಿತ್ರವಾಗಿದೆ. ಈ ದಿವಸ ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಬೇಕಾದುದು ಧಾರ್ಮಿಕ ಕರ್ತವ್ಯವಾಗಿದೆ.ಈ ದಿವಸ ವೇದವ್ಯಾಸರ ಜಯಂತಿ. ‘ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಅವರು ಆಧ್ಯಾತ್ಮ, ಇತಿಹಾಸ, ಜ್ಞಾನ, ವಿಜ್ಞಾನಗಳ ಕಣಜವಾಗಿದ್ದರು. ವ್ಯಾಸ ಮಹರ್ಷಿ ಎಂದು ಪ್ರಸಿದ್ಧರಾದ ಕೃಷ್ಣ ದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು. ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ ಎಂಬ ಬಿರುದಾಂಕಿತರಾದರು. ಈ ಮಹತ್ಕಾರ್ಯದ ಸಲುವಾಗಿ ಅವರು ಮಹಾಗುರು ಎಂಬ ಕೀರ್ತಿಗೆ ಪಾತ್ರರಾದರು.ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.ವೇದವ್ಯಾಸರ ಮೂಲ ಹೆಸರು ಕೃಷ್ಣ ದ್ವೈಪಾಯನ. ತಂದೆ ಪರಾಶರ ಮುನಿ, ತಾಯಿ ಸತ್ಯವತಿ. ಒಮ್ಮೆ ಮಹರ್ಷಿ ಪರಾಶರರು ಯಾತ್ರೆಯ ಸಲುವಾಗಿ ಗಂಗಾ ನದಿಯನ್ನು ದಾಟುತ್ತಿರುವಾಗ ದೂರದ ದ್ವೀಪದಿಂದ ಕೆಟ್ಟ ವಾಸನೆ ಬರುತ್ತಿತ್ತು. ಆ ದ್ವೀಪಕ್ಕೆ ಹೋಗಿ ನೋಡಿದಾಗ ಒಬ್ಬ ಕುರೂಪಿಯಾದ ಸ್ತ್ರೀ ಕುಳಿತಿದ್ದಳು. ಆಕೆಯ ದೇಹದಿಂದಲೇ ಈ ಕೆಟ್ಟ ವಾಸನೆ ಬರುತ್ತಿತ್ತು. ಆಕೆ ಪರಾಶರ ಮುನಿಗಳನ್ನು ನೋಡಿ, ಬಳಿಗೆ ಬಂದು ಅವರ ಪಾದಕ್ಕೆರಗಿದಳು. ಆಕೆಯ ಹೆಸರು ಸತ್ಯವತಿ. ಬೆಸ್ತರ ಮಗಳು. ವಸುದೇವರಿಂದ ಶಾಪಗ್ರಸ್ತಳಾಗಿ ದೇಹದಿಂದ ಕೆಟ್ಟ ವಾಸನೆ ಬರುತ್ತಿತ್ತು. ವಿಷ್ಣುವಿನ ಅಂಶವಿರುವ ತಾವು ಈ ಸ್ಥಳಕ್ಕೆ ಬಂದಿದ್ದರಿಂದ ಈ ದ್ವೀಪ ಪಾವನವಾಯಿತು. ತನ್ನ ಶಾಪ ವಿಮೋಚನೆ ಮಾಡಬೇಕೆಂದು ಪ್ರಾರ್ಥಿಸಿದಾಗ, ಮಹರ್ಷಿಗಳು ಆಕೆಯನ್ನು ಸ್ಪರ್ಶಿಸಿ ಅವಳ ಶಾಪ ವಿಮೋಚನೆ ಮಾಡಿದರು. ಅವಳು ಸುರೂಪಿಯಾಗಿ ಸುಗಂಧವನ್ನು ಹೊರ ಹೊಮ್ಮಿಸುವಂತಾದಳು. ನಂತರ, ಪರಾಶರರು ಅಲ್ಲಿಯೇ ಅಗ್ನಿಯನ್ನು ಸ್ಥಾಪಿಸಿ, ಗಾಂಧರ್ವ ರೀತಿಯಲ್ಲಿ ಆಕೆಯ ವಿವಾಹವಾದರು. ಇವರಿಂದ ಜನಿಸಿದ ಮಗುವೇ ಕೃಷ್ಣ ದ್ವೈಪಾಯನ. ಕೃಷ್ಣ ಎಂದರೆ ಕಪ್ಪು, ಕತ್ತಲೆ; ದ್ವೈಪ ಎಂದರೆ ದ್ವೀಪ. ಆಯನ ಎಂದರೆ ಸುತ್ತಲೂ ನೀರಿನಿಂದ ಆವೃತವಾದ ಪ್ರವೇಶವಾಗಿರುವುದರಿಂದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು.ಆರ್. ಸೀತಾರಾಮಯ್ಯ,ಜ್ಯೋತಿಷ್ಕರು,ಶಿವಮೊಗ್ಗ.