Select Your Language

Notifications

webdunia
webdunia
webdunia
webdunia

ಮಥುರೆಯಲ್ಲಿ ಕೃಷ್ಣಾಷ್ಟಮಿ ಸಡಗರ

ಮಥುರೆಯಲ್ಲಿ ಕೃಷ್ಣಾಷ್ಟಮಿ ಸಡಗರ
ಸ್ನೇಹ
WD
ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಬೆಳೆದ ಮಥುರೆಯಲ್ಲಿ ಕೃಷ್ಣಾಷ್ಟಮಿಯ ದಿನದಂದು ಆಚರಣೆಗಳು ಉತ್ತುಂಗಕ್ಕೇರುತ್ತವೆ. ದೆಹಲಿಯಿಂದ 145 ಕಿ.ಮೀ. ದೂರವಿರುವ ಮಥುರೆಯಲ್ಲಿ ಎಲ್ಲೆಂದರಲ್ಲಿ ಸಡಗರದ ಸಂಭ್ರಮ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಅಸುರರ ಅಟ್ಟಹಾಸಕ್ಕೆ ಅಂತ್ಯಹಾಡಲು ಇಲ್ಲಿ ಕೃಷ್ಣ ಪರಮಾತ್ಮ ಜನ್ಮತಾಳಿದನೆಂಬ ಪ್ರತೀತಿ ಇದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ ಜನ್ಮ ತಾಳಿದ ನೈಜ ಸ್ಥಳದಲ್ಲಿ ಪ್ರಮುಖ ಆಚರಣೆ ಜರುಗುತ್ತದೆ. ಆ ಜಾಗದಲ್ಲಿಂದು ಬಹುದೊಡ್ಡ ದೇವಸ್ಥಾನ ನಿರ್ಮಾಣವಾಗಿದೆ. ಕೃಷ್ಣ ಜನ್ಮಭೂಮಿ ಮಂದಿರವೆಂದು ಕರೆಯಲ್ಪಡುವ ಈ ಮಂದಿರದಲ್ಲಿ ಭಗವಂತನ ಮೂರ್ತಿಯನ್ನು ಗರ್ಭಗೃಹದಲ್ಲಿ ಇರಿಸಲಾಗಿದೆ. ಅಷ್ಟಮಿಯ ದಿನದಂದು ಭಕ್ತರು ದಿನಪೂರ್ತಿ ಉಪವಾಸವಿದ್ದು ಮಧ್ಯರಾತ್ರಿ ಕೃಷ್ಣ ಹುಟ್ಟಿದ ಸಮಯದ ಬಳಿಕ ಉಪವಾಸ ಮುರಿಯುತ್ತಾರೆ. ಭಕ್ತರು ದಿನಪೂರ್ತಿ ದೇವರ ಶ್ಲೋಕ, ಮಂತ್ರಗಳನ್ನು ಪಠಿಸುತ್ತಾರೆ. ಇದಲ್ಲದೆ ದೇವರನಾಮಗಳನ್ನು ಹಾಡುತ್ತಾರೆ.

ಕೃಷ್ಣ ಜನಿಸಿದ ಮಧ್ಯರಾತ್ರಿಯಲ್ಲಿ ಪೂಜೆ ಮತ್ತು ಇತರ ಕಾರ್ಯಕ್ರಮಗಳು ನೆರವೇರುತ್ತದೆ. ಕೃಷ್ಣನ ಮೂರ್ತಿಯನ್ನು ಹಾಲು, ಮೊಸರಿನಲ್ಲಿ ಮೀಯಿಸಿ ತೊಟ್ಟಿಲಲ್ಲಿ ಮಲಗಿಸಿ ತೂಗುತ್ತಾರೆ. ಈ ದಿನದಂದು ಕೃಷ್ಣನ ತೊಟ್ಟಿಲು ತೂಗುವ ವೇಳೆಗಿನ ಮನದಿಚ್ಛೆ ಅಥವಾ ಮಾಡಿಕೊಂಡ ಹರಕೆ ಪೂರೈಸುತ್ತದೆ ಎಂಬ ಜನಪ್ರಿಯ ನಂಬುಗೆಯಿದೆ. ಜನ್ಮಾಷ್ಟಮಿಯಂದು ಮಧುರೆ ಇಡೀ ಶಂಖನಾದ ಮತ್ತು ಜಾಗಟೆಗಳ ಮೊಳಗುವಿಕೆಯಿಂದ ಪ್ರತಿಧ್ವನಿಸುತ್ತದೆ.

ಜೈ ಶ್ರೀ ಕೃಷ್ಣ ಎಂಬ ಘೋಷಣೆಗಳನ್ನು ಮೊಳಗಿಸುವ ಮೂಲಕ ದೇವರನ್ನು ಆಹ್ವಾನಿಸಲಾಗುತ್ತಾರೆ. ಪೂಜೆಯ ಬಳಿಕ ಭಕ್ತರಿಗೆ ಪಂಚಾಮೃತದ ವಿತರಣೆ. ದೇವರಿಗೆ ಸಾಂಪ್ರದಾಯಿಕ ಪ್ರಸಾದ ಚಪ್ಪನ್ ಭೋಗ್ (56 ತಿನಿಸುಗಳು) ಉಣಿಸಲಾಗುತ್ತದೆ. ಹಾಲು ಮತ್ತು ಹಾಲಿನಿಂದ ತಯಾರಿಸಿದ ಬಹಳಷ್ಟು ತಿಂಡಿ ಪದಾರ್ಥಗಳನ್ನು ಭಕ್ತರು ಸವಿಯುತ್ತಾರೆ. ಪ್ರಸಾದ ಸ್ವೀಕರಿಸುವುದರೊಂದಿಗೆ ಭಕ್ತರ ಉಪವಾಸ ಕೊನೆಗೊಳ್ಳುತ್ತದೆ.

ರಾಸಲೀಲೆ:
webdunia
WD
ಕೃಷ್ಣ ಜನಿಸಿದ ದಿನದಂದು ಗೀತನಾಟಕದಂತಹ ರಾಸಲೀಲೆ ಕಾರ್ಯಕ್ರಮಗಳು ಮಥುರಾ ನಗರದ ಎಲ್ಲೆಡೆ ಪ್ರದರ್ಶಿಸಲಾಗುತ್ತದೆ. ಸುಮಾರು 10ರಿಂದ 13 ವರ್ಷಗಳ ಬಾಲಕರು ರಾಸಲೀಲೆಯನ್ನು ಪ್ರದರ್ಶಿಸುತ್ತಾರೆ. ಕೃಷ್ಣನ ಪಾತ್ರಮಾಡಿದ ಬಾಲಕನನ್ನು ದೇವರೆಂದು ಭಾವಿಸುವ ಭಕ್ತಾದಿಗಳು ಬಾಲಕನ ಪಾದಮುಟ್ಟಿ ನಮಸ್ಕರಿಸುತ್ತಾರೆ.

ಇದಲ್ಲದೆ ಮಥುರೆಯಾದ್ಯಂತ ಎಲ್ಲೆಡೆ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಕೃಷ್ಣನ ಬಾಲ್ಯದಿಂದ ಹಿಡಿದು ಕೊನೆಯ ತನಕದ ಪ್ರಮುಖ ಘಟನೆಗಳ ಸ್ತಬ್ಧಚಿತ್ರಗಳು ಪ್ರದರ್ಶಿಸಲ್ಪಡುತ್ತವೆ.

ಜೋಕಾಲಿಗಳು:
ಕೃಷ್ಣಾಷ್ಟಮಿಯ ವೇಳೆ ಮಥುರಾದ ಇನ್ನೊಂದು ಆಕರ್ಷಣೆ ಎಂದರೆ ರಂಗು ರಂಗಿನ ಜೋಕಾಲಿಗಳು. ದೇವಾಲಯಗಳ ಅಂಗಣಗಳಲ್ಲಿ ಮತ್ತು ಮನೆಗಳಲ್ಲಿ ಕೃಷ್ಣನ ಜನನವನ್ನು ಸ್ವಾಗತಿಸಲು ಸಾಲಂಕೃತ ಜೋಕಾಲಿಗಳನ್ನು ತೂಗಾಡಿಸಲಾಗುತ್ತದೆ. ಇದು ಕೃಷ್ಣನನ್ನು ತೂಗುವ ಸಂಕೇತ. ಜೋಕಾಲಿಗಳ ಹಗ್ಗವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗುತ್ತಿದ್ದು ಇದು ಹಬ್ಬದ ನೋಟವನ್ನು ಒದಗಿಸುತ್ತದೆ.

ಶ್ರೀ ಕೃಷ್ಣ ಪರಮಾತ್ಮನನ್ನು ಬರಮಾಡಿಕೊಳ್ಳಲು ಜನತೆ ದೇವಾಲಯಗಳು ಮತ್ತು ಮನೆಗಳನ್ನು ಸಿಂಗಾರ ಮಾಡಲು ತಮ್ಮ ತನು ಮನದ ಪ್ರಯತ್ನಮಾಡುತ್ತಾರೆ.

ಕೃಷ್ಣಾಷ್ಟಮಿಯ ವೇಳೆ ಮಥುರೆಗೆ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಏರುತ್ತಲೇ ಹೋಗುತ್ತದೆ.

ಜೈ ಶ್ರೀ ಕೃಷ್ಣ!

ಪೂರಕ ಓದು:
ಭಕ್ತರ ಪ್ರೀತಿಯ ದೇವ - ಶ್ರೀ ಕೃಷ್ಣ
ಬಾಲ ಲೀಲೆ: ದುಷ್ಟಶಕ್ತಿ ದಮನವೇ ಮಕ್ಕಳಾಟ
ತನು-ಮನವರಳಿಸುವ ಜನ್ಮಾಷ್ಟಮಿ ಆಚರಣೆ

Share this Story:

Follow Webdunia kannada