Select Your Language

Notifications

webdunia
webdunia
webdunia
webdunia

ಬ್ರಹ್ಮೋತ್ಸವ: ಏಳುಬೆಟ್ಟದೊಡೆಯನ ಮೋಹಿನಿ ಅವತಾರ

ಬ್ರಹ್ಮೋತ್ಸವ: ಏಳುಬೆಟ್ಟದೊಡೆಯನ ಮೋಹಿನಿ ಅವತಾರ
ತಿರುಪತಿ ತಿರುಮಲ ಬೆಟ್ಟದಲ್ಲಿ ಬ್ರಹ್ಮಾಂಡದೊಡೆಯನಿಗೆ ಬ್ರಹ್ಮೋತ್ಸವ ವೈಭವವು ಭರದಿಂದ ನಡೆಯುತ್ತಿದ್ದು, ಶ್ರೀ ವಾರಿ ಬ್ರಹ್ಮೋತ್ಸವದ ಐದನೇ ದಿನವಾದ ಭಾನುವಾರ ಮೋಹಿನಿ ಅವತಾರ ಅಲಂಕಾರದಲ್ಲಿ ವೆಂಕಟೇಶ್ವರ ಸ್ವಾಮಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಅಲಂಕಾರ ಪ್ರಿಯ ವೆಂಕಟೇಶ್ವರನು ಮೋಹಿನಿ ಅವತಾರದಲ್ಲಿ ಮಾತ್ರವಲ್ಲದೆ, ಮೈಸೂರು ಮಹಾರಾಜರು ಕೊಡುಗೆ ನೀಡಿದ ದಂತ ಮತ್ತು ತೇಗದ ಮರದಿಂದ ನಿರ್ಮಿಸಿದ ಪಲ್ಲಕ್ಕಿಯಲ್ಲಿ ಬಾಲ ಕೃಷ್ಣನಾಗಿಯೂ ಕಂಗೊಳಿಸಿ, ಭಕ್ತರನ್ನು ಮಂತ್ರಮುಗ್ಧಗೊಳಿಸಿದ.

ಸಮುದ್ರಮಥನ ಕಾಲದಲ್ಲಿ ಅಮೃತ ಸುಧೆಯನ್ನು ಸುರರಿಗೆ ಸಿಗುವಂತಾಗಲು ಅಸುರರನ್ನು ಮೋಡಿ ಮಾಡಿದ ಮೋಹಿನಿ ರೂಪವು, ಇಡೀ ವಿಶ್ವವೇ ಮಾಯಾ ಮೋಹಿನಿಯಿಂದ ಆವೃತವಾಗಿದೆ. ಈ ಜಗತ್ತಿನ ನಾಟಕಕ್ಕೆ ತಿರುಮಲಾಧಿಪತಿಯು ಸೂತ್ರದಾರನಾಗಿದ್ದಾನೆ ಎಂಬುದರ ಸಂಕೇತ. ಉತ್ಸವ ಮೂರುತಿಯ ಸೌಂದರ್ಯ, ಆಭರಣ ಮತ್ತು ಶ್ರೀಮಂತಿಕೆಯನ್ನು ಕಣ್ಣಾರೆ ಕಂಡ ಭಕ್ತರು ಪುನೀತ ಭಾವ ಪ್ರದರ್ಶಿಸಿದರು.

ಶ್ರೀ ವಾರಿ (ಶ್ರೀ ವೆಂಕಟೇಶ್ವರ) ಮೋಹಿನಿ ರೂಪದಲ್ಲಿ ಸಾಲಂಕೃತನಾಗಿರುವುದು ಮತ್ತು ಶುಭ್ರವಾದ ರಜತ-ದಂತ ಪಲ್ಲಕ್ಕಿಯಲ್ಲಿ ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆ ದೇವಾಲದ ಮುಖ್ಯ ಅರ್ಚಕ ಡಾ.ಎ.ವಿ.ರಮಣ ದೀಕ್ಷಿತರು. ಮೋಹಿನಿ ಅವತಾರದಲ್ಲಿ ದೇವರ ಮೆರವಣಿಗೆ ವೀಕ್ಷಿಸುವುದು ಪುಣ್ಯಪ್ರದವಾಗಿದ್ದು, ನಂಬಿಕೆ ಇಲ್ಲದವರು ಕೂಡ ಮೋಹಿನಿಯ ಸೌಂದರ್ಯಕ್ಕೆ ಮಾರುಹೋಗಿ, ದೇವಾಧಿದೇವನ ಭಕ್ತರಾಗುತ್ತಾರೆ ಎಂಬುದು ಶ್ರದ್ಧಾಳುಗಳ ವಿಶ್ಲೇಷಣೆ.

ದೇವಾಲಯದ ನಾಲ್ಕೂ ರಥಬೀದಿಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ)ಯು, ಈ ಬ್ರಹ್ಮೋತ್ಸವ ವೀಕ್ಷಣೆಗಾಗಿ ಭಕ್ತರ ಅನುಕೂಲಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಸನ ವ್ಯವಸ್ಥೆಯನ್ನೂ ಮಾಡಿತ್ತು.

Share this Story:

Follow Webdunia kannada