ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಶನಿವಾರ (ಅ.4) ಶ್ರೀ ಸ್ವಾಮಿಗೆ ರಾಜರ ರಾಜ ಅಂದರೆ ಸರ್ವಭೂಪಾಲ ವಾಹನೋತ್ಸವವು ವಿಜೃಂಭಣೆಯಿಂದ ಜರುಗಿತು.
ಭೂಮಿ, ನೀರು ಮತ್ತು ಆಕಾಶದ ರಾಜರುಗಳೇ ಭೂಪಾಲರು. ಅವರೆಲ್ಲರೂ ಶ್ರೀ ಸ್ವಾಮಿಯನ್ನು ವಾಹನ ಸೇವೆ ನಡೆಸುತ್ತಾರೆ. ಸರ್ವಭೂಪಾಲರಲ್ಲದೆ, ಅಷ್ಟ ದಿಕ್ಪಾಲಕರೂ ಈ ವೈಭವದ ಸೇವೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂಬುದು ನಂಬಿಕೆ.
ಅಷ್ಟ ದಿಕ್ಪಾಲರು ಶ್ರೀ ವೆಂಕಟೇಶ್ವರನ ಸೇವಾ ಕೈಂಕರ್ಯದಲ್ಲಿ ಬದ್ಧರಾಗಿದ್ದು, ಅವರೆಲ್ಲರೂ ಶ್ರೀ ಸ್ವಾಮಿಗೆ ಅಧೀನವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಸರ್ವಭೂಪಾಲ ವಾಹನ ಸೇವೆಯು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ದೇವಸ್ಥಾನದ ಮುಖ್ಯ ಅರ್ಚಕ ಡಾ.ಎ.ವಿ.ರಮಣ ದೀಕ್ಷಿತರು.
ಅಷ್ಟ ದಿಕ್ಪಾಲಕರೆಂದರೆ ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ ಹಾಗೂ ಪರಮೇಶ್ವರ. ಇವರೆಲ್ಲರನ್ನೂ ನಿಯಂತ್ರಿಸುವ ಶ್ರೀ ವೆಂಕಟೇಶ್ವರನು ಸರ್ವಭೂಪಾಲ ವಾಹನದಲ್ಲಿ ಆಸೀನನಾಗುವುದು, ಇಡೀ ಜಗತ್ತೇ ಆತನ ನಿಯಂತ್ರಣದಲ್ಲಿದೆ, ಜಗತ್ತಿನ ಜನರು ಸಕಾಲದಲ್ಲಿ, ಮಳೆ, ಬೆಳೆ ಪಡೆದು ಸಮೃದ್ಧಿ ಹೊಂದುತ್ತಾರೆ ಎಂಬುದರ ಸಂಕೇತ.