ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜನರು ಕೊಟ್ಟಂತ ತೀರ್ಪನ್ನು ಗೌರವಿಸುತ್ತೇನೆ. ಈ ಚುನಾವಣೆಯಲ್ಲಿ ಜನರು ಕೊಟ್ಟಿರುವ ತೀರ್ಪು ರಾಜ್ಯಕ್ಕೆ ಸಂಬಂಧಿಸಿಲ್ಲ. ಜನರು ನಮಗೆ ಐದುವರ್ಷಗಳವರೆಗೆ ಅಧಿಕಾರ ಮಾಡಲು ತೀರ್ಪುನೀಡಿದ್ದಾರೆ. ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಷಯಗಳ ಮೇಲೆ ನಡೆದ ಚುನಾವಣೆ. ಆದ್ದರಿಂದ ರಾಜ್ಯದ ಸಾಧನೆಗೆ ಈ ತೀರ್ಪು ಸಂಬಂಧಿಸಿಲ್ಲ ಮತ್ತು ನಮ್ಮ ಒಂದು ವರ್ಷದ ಸಾಧನೆಯ ಅಳತೆಗೋಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಗೆದ್ದಿದ್ದೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು 6 ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ನಾವು 9 ಗೆದ್ದಿದ್ದು, ಬಿಜೆಪಿ 17 ಗೆದ್ದಿದೆ. ಅದಕ್ಕೆ ನಾವು ಬೆನ್ನು ತಟ್ಟುಕೊಳ್ಳುತ್ತೀವಿ ಎಂದು ಅರ್ಥವಲ್ಲ. ಒಟ್ಟಾರೆಯಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ.
ಇವತ್ತು ಜನತೆ ದೇಶದಲ್ಲಿ ಬದಲಾವಣೆ ಬಯಸಿ ಮತ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಜನತೆ ಕೊಟ್ಟ ತೀರ್ಪನ್ನು ತಾವು ಒಪ್ಪಿಕೊಳ್ಳುವುದಾಗಿ ಅವರು ಹೇಳಿದರು.