ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಸಿದ್ದತೆ ನಡೆಸುತ್ತಿರುವಂತೆ ಅವರ ಗೆಲುವಿಗೆ ನಾನು ಅಭಿನಂಧಿಸುವುದಿಲ್ಲ. ನಾನು ಅಂತಹ ಅವಕಾಶವಾದಿಯಲ್ಲ ಎಂದು ಕೇಂದ್ರದ ಮಾಜಿ ರೈಲ್ವೆ ಸಚಿವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಎನ್‌ಡಿಎ ಪರ ಪ್ರಕಟವಾಗುತ್ತಿದ್ದಂತೆ ಶತ್ರು ಪಾಳಯದಲ್ಲಿದ್ದ ಪ್ರಧಾನಿ ಮನಮೋಹನ್
ಸಿಂಗ್, ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಆದರೆ, ಲಾಲು ಮಾತ್ರ ನಾನ್ಯಾಕೆ ಮೋದಿಯನ್ನು ಅಭಿನಂದಿಸಲಿ ಎಂದು ರಾಗ ತೆಗೆದಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ಮೋದಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಟುಕನಂತೆ. ಇತನನ್ನು ನೋಡಿ ಕಟುಕರು ನಾಚಿಕೊಳ್ಳುತ್ತಾರೆ. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗಬೇಕೆ ಎಂದು ಚುನಾವಣೆ ಪ್ರಚಾರದಲ್ಲಿ ಲಾಲು ಗುಡುಗಿದ್ದರು.
ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ಡಿದೇವಿ, ಪುತ್ರಿ ಮೀಸಾ ಭಾರ್ತಿ ಸರಣ್ ಮತ್ತು ಪಾಟಲಿಪುತ್ರ ಲೋಕಸಭೆ ಕ್ಷೇತ್ರಗಳಿಂದ ಸೋಲನುಭವಿಸಿದ್ದಾರೆ