ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷ ಭಾರಿ ಮುನ್ನಡೆಯಲ್ಲಿದ್ದು, ಬಹುತೇಕ ಆಡಳಿತ ಚುಕ್ಕಾಣಿ ಹಿಡಿಯುವು ಹಾದಿಯಲ್ಲಿದೆ.
ಒಟ್ಟು 170 ಸದಸ್ಯ ಸ್ಥಾನಗಳನ್ನು ಹೊಂದಿರುವ ಸೀಮಾಂಧ್ರ ವಿಧಾನಸಭೆಯಲ್ಲಿ ಮಾಜಿಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಟಿಡಿಪಿ ಪಕ್ಷ 88 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎರಡನೇ ಸ್ಥಾನದಲ್ಲಿ ವೈಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವಿದ್ದು, 56 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ 12 ಸ್ಥಾನಗಳಲ್ಲಿ ವೈಎಸ್‌ಆರ್‌ಸಿ ಪಕ್ಷ ಗೆಲುವು ಸಾಧಿಸಿದೆ.
ಇನ್ನು ತೆಲಂಗಾಣ ಭಾಗದಲ್ಲಿ ಟಿಆರ್‌ಎಸ್ ಪಕ್ಷ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, 39 ಸ್ಥಾನಗಳಲ್ಲಿ ಮುನ್ನಡೆ ಮತ್ತು 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ತೆಲಂಗಾಣದಲ್ಲಿ ಟಿಆರ್‌ಎಸ್ ಪಕ್ಷ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಟಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರರಾವ್ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇನ್ನು ಟಿಆರ್‌ಎಸ್ ಪಕ್ಷದ ಸಮೀಪದ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ಪಕ್ಷ 15 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 5 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಅದೇ ಫಲಿತಾಂಶವನ್ನು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಮುಂದುವರೆಸಬಹುದು ಎಂದು ಭಾವಿಸಲಾಗಿತ್ತು. ಆದರೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ತದ್ವಿರುದ್ಧವಾಗಿದ್ದು, ಇಲ್ಲಿ ಟಿಆರ್‌ಎಸ್ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಒಟ್ಟಾರೆ ದೇಶಾದ್ಯಂತ ಮೋದಿ ಅಲೆಯಲ್ಲಿ ಬೀಗುತ್ತಿರುವ ಬಿಜೆಪಿ ಪಕ್ಷದ ಪ್ರದರ್ಶನ ಆಂಧ್ರ ಪ್ರದೇಶದಲ್ಲಿ ಹೇಳಿಕೊಳ್ಳುವಂತಿಲ್ಲ. ಆದರೂ ತನ್ನ ಮಿತ್ರ ಪಕ್ಷವಾದ ಟಿಡಿಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿರುವುದು ಆಂಧ್ರ ಪ್ರದೇಶ ಬಿಜೆಪಿಗೆ ನೆಮ್ಮದಿಯ ನಿಟ್ಟುಸಿರುಬಿಡುವಂತೆ ಮಾಡಿದೆ.