ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಜಯಭೇರಿ ಹೊಡೆದ ಬಿಜೆಪಿ ಇದೀಗ ಕರ್ನಾಟಕದಲ್ಲಿ ವಿಜಯಮಾಲೆಯನ್ನು ಕೊರಳಿಗೆ ಹಾಕಿಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಾಭಾವಿಯಾಗಿ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ.
ಚುನಾವಣಾ ಹಾದಿಯಲ್ಲಿ ಕಳೆದೊಂದು ವರ್ಷದಲ್ಲಿ ಜಾರುತ್ತಿರುವ ಪುರಾತನ ಪಕ್ಷ ಕಾಂಗ್ರೆಸ್‌ಗೆ ಪ್ರಸಕ್ತ ಚುನಾವಣಾ ಫಲಿತಾಂಶವು ಚತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ದೆಹಲಿಯ ಚುನಾವಣೆ ಸರದಿಯಲ್ಲಿರುವಾಗ ಇನ್ನೊಂದು ಅಪಘಾತವಾಗಿದೆ.
ಕರ್ನಾಟಕದಲ್ಲಿ ಚುನಾವಣಾ ಸೋಲನ್ನು ಒಪ್ಪಿಕೊಂಡಿರುವ ಕಾಂಗ್ರೆಸ್, ಬೆಲೆ ಏರಿಕೆ, ಭಯೋತ್ಪಾದನೆ ಮತ್ತು ಜತೆಗೂಡಿ ಕಾರ್ಯನಿರ್ವಹಿಸುವಲ್ಲಿನ ವೈಫಲ್ಯ ಇದಕ್ಕೆ ಕಾರಣ ಎಂದು ಹೇಳಿಕೊಂಡಿದೆ.
ರಾಜ್ಯಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸುವಲ್ಲಿ ಸೋತಿದೆ ಮತ್ತು ಒಟ್ಟಾರೆಯಾಗಿ ಮೇ ತಿಂಗಳಲ್ಲಿ ಚುನಾವಣೆ ಎದುರಿಸಲು ಅದು ಸಿದ್ಧವಾಗಿರಲಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ಕಾರಣ ಚುನಾವಣೆಯು ಅಕ್ಟೋಬರ್ ತಿಂಗಳಲ್ಲಿ ನಡೆಯಬಹುದೆಂಬ ನಿರೀಕ್ಷೆ ಅವರದಾಗಿತ್ತು.